ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನಕ್ಕೂ ಮುನ್ನವೇ ರಾಮ ಮಂದಿರ ದೇಣಿಗೆ ಕಳವು ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರವನ್ನು ರಾಜ್ಯಸಭೆ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ತರಾಟೆಗೆ ತೆಗೆದುಕೊಂಡಿದ್ದಾರೆ.
ದೇವಾಲಯದ ಟ್ರಸ್ಟ್ನ ಆರ್ಥಿಕ ವಹಿವಾಟುಗಳ ಕುರಿತು ಸ್ವತಂತ್ರ ತನಿಖೆಗೆ ಆದೇಶಿಸುವಂತೆ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದು, ಪ್ರಧಾನಿಯವರ ಮೌನ ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ.
ರಾಮ ಮಂದಿರದ ದೇಣಿಗೆ ಕಳ್ಳತನವು ಸಾವಿರಾರು ಕೋಟಿ ರೂಪಾಯಿಗಳಷ್ಟಿರುವುದರಿಂದ, ಪ್ರಧಾನಿಯವರು ಎಷ್ಟು ಪಾರದರ್ಶಕ ಮತ್ತು ತ್ವರಿತವಾಗಿ ಕ್ರಮ ಕೈಗೊಳ್ಳುತ್ತಾರೆ ಎಂಬುದರ ಮೇಲೆ ಅವರ ಸರ್ಕಾರ ಹಾಗೂ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ವಿಶ್ವಾಸಾರ್ಹತೆಯು ಅವಲಂಬಿತವಾಗಿದೆ ಎಂದು ಮೋದಿ ಅವರಿಗೆ ಬರೆದ ಪತ್ರದಲ್ಲಿ ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ. ದೇಶದ ಜನರು ಇದನ್ನು ಗಮನಿಸುತ್ತಿದ್ದಾರೆ ಎಂದೂ ಅವರು ಹೇಳಿದ್ದಾರೆ.
ಸುಪ್ರೀಂ ಕೋರ್ಟ್ನ ನಿರ್ದೇಶನದ ಮೇರೆಗೆ ಸಂಸತ್ತಿನಲ್ಲಿ ಈ ಟ್ರಸ್ಟ್ ರಚನೆಯನ್ನು ತಾವೇ ಘೋಷಿಸಿದ್ದಿರಿ ಎಂಬುದನ್ನು ಪತ್ರದಲ್ಲಿ ನೆನಪಿಸಿರುವ ಅವರು, ದೇವರ ಮೇಲಿನ ಶ್ರದ್ಧೆ ಮತ್ತು ನಂಬಿಕೆಯಿಂದ ತಾವು ಕಷ್ಟಪಟ್ಟು ಗಳಿಸಿದ ಹಣವನ್ನು ದೇಣಿಗೆ ನೀಡಿದ ಲಕ್ಷಾಂತರ ಭಕ್ತರು ಈ ಕಳ್ಳತನದಿಂದಾಗಿ ವಂಚನೆಗೊಳಗಾದಂತೆ ಭಾವಿಸುತ್ತಿದ್ದಾರೆ ಎಂದು ತಿಳಿಸಲಾಗಿದೆ.
'ಟ್ರಸ್ಟ್ನ ಸದಸ್ಯರನ್ನು ನಿಮ್ಮ ಸರ್ಕಾರವೇ ನೇಮಿಸಿತ್ತು. ಟ್ರಸ್ಟ್ನ ಸದಸ್ಯರು ಆರ್ಎಸ್ಎಸ್, ವಿಎಚ್ಪಿ ಮತ್ತು ಅವುಗಳ ಅಂಗಸಂಸ್ಥೆಗಳೊಂದಿಗೆ ಗುರುತಿಸಿಕೊಂಡಿದ್ದಾರೆ ಎಂಬುದು ಸಾರ್ವಜನಿಕರಿಗೆ ತಿಳಿದಿರುವ ವಿಷಯ. ಇದರ ಕಳಂಕಿತ ಮಾಜಿ ಪ್ರಧಾನ ಕಾರ್ಯದರ್ಶಿಯೂ ನಿಮ್ಮ ಆಪ್ತರಾಗಿದ್ದರು'ಎಂದು ಖರ್ಗೆ ಮತ್ತು ರಾಹುಲ್ ಹೇಳಿದ್ದಾರೆ.
'ಇಂತಹ ಅಪರಾಧದ ವಿಷಯದಲ್ಲಿನಿಮ್ಮ ಮೌನ ಸ್ವೀಕಾರಾರ್ಹವಲ್ಲ. ಹೊಣೆಗಾರಿಕೆಯನ್ನು ಖಚಿತಪಡಿಸುವುದು ಮತ್ತು ನಷ್ಟ ಭರಿಸುವಂತೆ ಮಾಡುವುದು ನಿಮ್ಮ ಕರ್ತವ್ಯ,'ಎಂದು ಅವರು ಹೇಳಿದ್ದಾರೆ; ಜೊತೆಗೆ, ಈ ವಿಷಯದ ಬಗ್ಗೆ ನೀವು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂಬುದನ್ನೂ ಅವರು ಪುನರುಚ್ಚರಿಸಿದ್ದಾರೆ.
ನಗದು, ಚಿನ್ನ ಮತ್ತು ಬೆಳ್ಳಿ ಸೇರಿ ಎಲ್ಲಾ ಕಾಣಿಕೆಗಳ ನಿರ್ವಹಣೆ ಸೇರಿದಂತೆ, ಟ್ರಸ್ಟ್ನ ಆರ್ಥಿಕ ವ್ಯವಹಾರಗಳ ಕುರಿತು ತಕ್ಷಣವೇ ಸ್ವತಂತ್ರ ಮತ್ತು ಸಮಗ್ರ ತನಿಖೆಗೆ ಆದೇಶಿಸುವಂತೆ ಅವರು ಒತ್ತಾಯಿಸಿದ್ದಾರೆ.
ತನಿಖೆಯ ವರದಿ ಮತ್ತು ಟ್ರಸ್ಟ್ನ ಲೆಕ್ಕಪತ್ರಗಳನ್ನು ಬಹಿರಂಗಗೊಳಿಸಬೇಕು. ಆಗ ಮಾತ್ರ ಭಕ್ತರಿಗೆ ತಮ್ಮ ಕಾಣಿಕೆಗಳನ್ನು ಹೇಗೆ ಬಳಸಲಾಗಿದೆ ಎಂಬುದು ತಿಳಿಯುತ್ತದೆ.. ಹುದ್ದೆ ಅಥವಾ ಪ್ರಭಾವವನ್ನು ಲೆಕ್ಕಿಸದೆ, ಇದಕ್ಕೆ ಕಾರಣರಾದವರನ್ನು ಶಿಕ್ಷಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
ಸೋಮವಾರದಿಂದ ಆರಂಭವಾಗಲಿರುವ ಸಂಸತ್ತಿನ ಮುಂಗಾರು ಅಧಿವೇಶನದ ಸಂದರ್ಭ ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಕಾಂಗ್ರೆಸ್ ಈ ವಿಷಯವನ್ನು ಪ್ರಸ್ತಾಪಿಸಲಿದೆ ಎಂಬುದಕ್ಕೆ ಈ ಪತ್ರವು ಸೂಚನೆಯಾಗಿದೆ.
ಸಂಸತ್ತಿನಲ್ಲಿ ಚರ್ಚಿಸಬೇಕಾದ ಪ್ರಮುಖ ವಿಷಯಗಳಲ್ಲಿ ರಾಮಮಂದಿರದ ವಿಷಯವನ್ನೂ ಸೇರಿಸಬೇಕೆಂದು ಹಿರಿಯ ನಾಯಕಿ ಸೋನಿಯಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸಂಸದೀಯ ಕಾರ್ಯತಂತ್ರ ಸಮಿತಿ ನಿರ್ಧರಿಸಿತ್ತು.

