ಅಯೋಧ್ಯೆ: ಅಯೋಧ್ಯೆ ರಾಮಮಂದಿರ ದೇಣಿಗೆ ದುರುಪಯೋಗದ ಪ್ರಕರಣದ ತನಿಖೆ ತೀವ್ರಗೊಳ್ಳುತ್ತಿದ್ದಂತೆ, ಈಗ ರಾಮಮಂದಿರ ಟ್ರಸ್ಟ್‌ನ ಮಾಜಿ ಟ್ರಸ್ಟಿ ಅನಿಲ್ ಮಿಶ್ರಾ ಅವರು ಹೆಸರು ಕೂಡ ಮುನ್ನಲೆಗೆ ಬಂದಿದೆ. ಬಂಧಿತ ಆರೋಪಿಗಳನ್ನು ವಿಚಾರಣೆ ನಡೆಸಿದಾಗ ಹಗರಣದ ಪ್ರಮುಖ ರುವಾರಿಗಳಲ್ಲಿ ಅವರು ಕೂಡ ಒಬ್ಬರು ಎಂದು ತಿಳಿದು ಬಂದಿದೆ.
ಪೊಲೀಸರು ಮಂಗಳವಾರ ಆರೋಪಿ ಅವಿನಾಶ್ ಮಿಶ್ರಾ ಅವರನ್ನು ವಿಚಾರಣೆ ನಡೆಸಿದ್ದರು. ಈ ವೇಳೆ ಅನಿಲ್ ಮಿಶ್ರಾ ಅವರ ಹೆಸರು ಕೇಳಿಬಂದಿದೆ ಎಂದು ಮೂಲಗಳನ್ನು ಉಲ್ಲೇಖಿಸಿ NDTV ವರದಿ ಮಾಡಿದೆ.
ಅನಿಲ್ ಮಿಶ್ರಾ ಕಳೆದ ವಾರ ರಾಮಮಂದಿರದ ಟ್ರಸ್ಟಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಇದಲ್ಲದೆ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಅವರು ಕೂಡ ರಾಜೀನಾಮೆ ನೀಡಿದ್ದಾರೆ. ಅವರಿಬ್ಬರನ್ನೂ ಈಗಾಗಲೇ ವಿಶೇಷ ತನಿಖಾ ತಂಡ (SIT) ವಿಚಾರಣೆ ನಡೆಸಿದೆ.
ಮಂದಿರದ ಉದ್ಯೋಗಕ್ಕೆ ಕಮಿಷನ್?
ರಾಮಮಂದಿರ ಟ್ರಸ್ಟ್‌ನ ಮಾಜಿ ಟ್ರಸ್ಟಿ ಅನಿಲ್ ಮಿಶ್ರಾ ಉದ್ಯೋಗಿಗಳ ನೇಮಕಾತಿ ವೇಳೆ ಕಮಿಷನ್ ಪಡೆದಿದ್ದಾರೆ ಎಂಬ ಆರೋಪಗಳ ಕುರಿತು SIT ತನಿಖೆ ನಡೆಸುತ್ತಿದೆ.
ರಾಮಮಂದಿರದ ಹೆಚ್ಚಿನ ಉದ್ಯೋಗಿಗಳನ್ನು ಅನಿಲ್ ಮಿಶ್ರಾ ಅವರ ಶಿಫಾರಸಿನ ಮೇರೆಗೆ ನೇಮಿಸಲಾಗಿದೆ ಎಂಬುದು ತನಿಖೆಯಿಂದ ತಿಳಿದುಬಂದಿದೆ. ದೇವಾಲಯದ ಕನಿಷ್ಠ 125 ಸಿಬ್ಬಂದಿ ಮಿಶ್ರಾ ಅವರ ಶಿಫಾರಸ್ಸಿನ ಮೂಲಕ ಉದ್ಯೋಗ ಪಡೆದಿದ್ದಾರೆ. ಅವರಲ್ಲಿ ಅವರ ಕೆಲವು ಸಂಬಂಧಿಕರು ಕೂಡ ಸೇರಿದ್ದಾರೆ.
ತನಿಖಾ ತಂಡವು ಈಗಾಗಲೇ ಅನಿಲ್ ಮಿಶ್ರಾ ಅವರಿಗೆ ಸಂಬಂಧಿಸಿದ ಹಲವಾರು ಆಸ್ತಿಗಳನ್ನು ಪತ್ತೆಹಚ್ಚಿದೆ. ಅವರು ಮಂದಿರ ಟ್ರಸ್ಟಿಯಾದ ನಂತರ ಅವರ ಆಸ್ತಿ ಎಷ್ಟು ಹೆಚ್ಚಳವಾಗಿದೆ ಎಂಬ ಬಗ್ಗೆ ಕೂಡ ಎಸ್‌ಐಟಿ ತನಿಖೆ ನಡೆಸುತ್ತಿದೆ. ದೇಣಿಗೆ ದುರುಪಯೋಗ ಪ್ರಕರಣದಲ್ಲಿ ಬಂಧಿತ ಆರೋಪಿ ಅನುಕಲ್ಪ್ ಮಿಶ್ರಾ ಮತ್ತು ಲವ್ ಕುಶ್ ಮಿಶ್ರಾ ಅವರ ಪಾತ್ರ ಗಮನಾರ್ಹವಾಗಿದೆ ಎಂದು ತಿಳಿದು ಬಂದಿದೆ. ಈ ಇಬ್ಬರು ಆರೋಪಿಗಳು ಅನಿಲ್ ಮಿಶ್ರಾ ಅವರ ಸಂಬಂಧಿಕರು ಎಂದು ತಿಳಿದು ಬಂದಿದೆ.
ಟಿನ್ನು ಬಳಿ ಇತ್ತು ಎಣಿಕೆ ಕೊಠಡಿಯ ಕೀಲಿ ಕೈ
ಪ್ರಕರಣಕ್ಕೆ ಸಂಬಂಧಿಸಿ ಅವಿನಾಶ್ ಶುಕ್ಲಾ, ಅನುಕಲ್ಪ್ ಮಿಶ್ರಾ, ಲವ್ ಕುಶ್ ಮಿಶ್ರಾ, ಮನೀಶ್ ಕುಮಾರ್ ಯಾದವ್, ಕರುಣೇಶ್ ಪಾಂಡೆ, ರಾಮಶಂಕರ್ ಮಿಶ್ರಾ, ಸುಭಾಷ್ ಶ್ರೀವಾಸ್ತವ ಮತ್ತು ರಾಮಶಂಕರ್ ಯಾದವ್ ಅಲಿಯಾಸ್ ಟಿನ್ನು ಎಂಬ ಎಂಟು ಆರೋಪಿಗಳನ್ನು ಎಸ್‌ಐಟಿ ಇದುವರೆಗೆ ಬಂಧಿಸಿದೆ. ಸಿಸಿಟಿವಿಯಲ್ಲಿ ಅವ್ಯವಹಾರಕ್ಕೆ ಸಂಬಂಧಿಸಿದ ದೃಶ್ಯ ಸೆರೆಯಾಗಿದೆ. ಆರೋಪಿಗಳನ್ನು ಎಸ್‌ಐಟಿ ಹಲವು ಗಂಟೆಗಳ ಕಾಲ ವಿಚಾರಣೆ ನಡೆಸಿದೆ.
ದೇಣಿಗೆ ಕಳ್ಳತನದ ಪ್ರಮುಖ ಆರೋಪಿಗಳಲ್ಲಿ ಟಿನ್ನು ಯಾದವ್ ಕೂಡ ಒಬ್ಬ ವಿಚಾರಣೆಯಿಂದ ತಿಳಿದುಬಂದಿದೆ. ದೇವಸ್ಥಾನದ ಸಂಕೀರ್ಣದಲ್ಲಿನ ಎಣಿಕೆ ಕೊಠಡಿಯ ಕೀಲಿಕೈ ಟಿನ್ನು ಯಾದವ್ ಹೊಂದಿದ್ದ ಎಂದು ಮೂಲಗಳು ತಿಳಿಸಿವೆ.
ಅನಿಲ್ ಮಿಶ್ರಾ ಅವರೊಂದಿಗಿನ ನಿಕಟತೆಯು ನಮಗೆ ಮುಕ್ತ ಹಸ್ತವನ್ನು ನೀಡಿದೆ ಎಂದು ಆರೋಪಿಗಳು ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ. ಮೂಲಗಳ ಪ್ರಕಾರ ಅನಿಲ್ ಮಿಶ್ರಾ ಅವರು ದೇವಸ್ಥಾನದಲ್ಲಿ ಕಾಣಿಕೆ ಎಣಿಕೆ ಮಾಡುತ್ತಿದ್ದರು. ಅವರನ್ನು ಪ್ರಶ್ನಿಸಲು ಯಾರೂ ಇರಲಿಲ್ಲ. ಎಲ್ಲ ಕ್ಯಾಮೆರಾಗಳನ್ನು ಎಲ್ಲಿ ಅಳವಡಿಸಲಾಗಿದೆ ಎಂಬುದು ಅವರಿಗೆ ತಿಳಿದಿತ್ತು ಎಂದು ಮೂಲಗಳು ತಿಳಿಸಿವೆ.
ಸಿಸಿಟಿವಿ ಕ್ಯಾಮೆರಾಗಳಿಂದ ತಪ್ಪಿಸಿಕೊಂಡಿದ್ದು ಹೇಗೆ?
ತನಿಖೆ ವೇಳೆ ಆರೋಪಿಗಳು ಸಿಸಿಟಿವಿ ಕ್ಯಾಮೆರಾಗಳ ಕಣ್ತಪ್ಪಿಸಿ ಹಣ ಕಳವು ಮಾಡುತ್ತಿದ್ದರು ಎಂಬುದು ಬೆಳಕಿಗೆ ಬಂದಿದೆ. ಮೂಲಗಳ ಪ್ರಕಾರ, ಒಬ್ಬ ಆರೋಪಿಯು ಹಣವನ್ನು ತೆಗೆದುಕೊಳ್ಳುತ್ತಿದ್ದರೆ, ಉಳಿದವರು ಆತನ ಸುತ್ತ ಕ್ಯಾಮೆರಾಗಳಿಗೆ ಕಾಣದಂತೆ ನಿಂತುಕೊಳ್ಳುತ್ತಿದ್ದರು. ಬಳಿಕ ಆ ಹಣವನ್ನು ಶೌಚಾಲಯದಲ್ಲಿ ಅಡಗಿಸಿ, ಅವಕಾಶ ಸಿಕ್ಕಾಗ ಹೊರಗೆ ಕೊಂಡೊಯ್ಯುತ್ತಿದ್ದರು.
ಟ್ರಸ್ಟ್‌ನ ಸದಸ್ಯರ ಜೊತೆ ಆರೋಪಿಗಳಿಗೆ ಆಪ್ತ ಸಂಬಂಧ ಇದ್ದ ಕಾರಣ, ಅವರನ್ನು ಯಾರೂ ಪರಿಶೀಲಿಸುತ್ತಿರಲಿಲ್ಲ ಎಂದು ಮೂಲಗಳು ತಿಳಿಸಿವೆ.
ಇದಲ್ಲದೆ ದೇಣಿಗೆ ಎಣಿಕೆ ಕೊಠಡಿಯ ಒಂದು ಕೀಲಿ ಕೈ ಟಿನ್ನು ಯಾದವ್ ಬಳಿ ಇದ್ದರೆ, ಮತ್ತೊಂದು ಬ್ಯಾಂಕ್ ಸಿಬ್ಬಂದಿಯ ಬಳಿ ಇತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಬ್ಯಾಂಕ್ ಸಿಬ್ಬಂದಿಯ ಸಹಕಾರದೊಂದಿಗೆ ದೇಣಿಗೆಯ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿತ್ತು. ಕಳ್ಳತನದ ಹಣದಲ್ಲಿ ಟಿನ್ನು ಯಾದವ್ ಹಾಗೂ ಬ್ಯಾಂಕ್ ಸಿಬ್ಬಂದಿ ಪಾಲು ಹಂಚಿಕೊಳ್ಳುತ್ತಿದ್ದರು ಎಂದು ತನಿಖಾ ಮೂಲಗಳು ತಿಳಿಸಿವೆ.

