ನವದೆಹಲಿ: 'ದೇಶವು ತೀವ್ರವಾದ ಮುಂಗಾರು ಮಳೆ ಕೊರತೆ ಎದುರಿಸುತ್ತಿದ್ದು, ಜೂನ್ ಬಳಿಕ, ಇದೀಗ ಜುಲೈ ತಿಂಗಳಲ್ಲೂ ವಾಡಿಕೆಗಿಂತಲೂ ಕಡಿಮೆ ಮಳೆಯಾಗಲಿದೆ' ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.
ಎಲ್ ನಿನೊ ಪ್ರಭಾವ ಮತ್ತು ನೈರುತ್ಯ ಮುಂಗಾರು ದಕ್ಷಿಣ ಮಹಾರಾಷ್ಟ್ರದಲ್ಲಿ ಸ್ಥಗಿತಗೊಂಡ ಪರಿಣಾಮ ಜೂನ್ ತಿಂಗಳಲ್ಲಿ ದೇಶದಾದ್ಯಂತ ವಾಡಿಕೆಗಿಂತಲೂ ಶೇ 40ರಷ್ಟು ಕಡಿಮೆ ಮಳೆಯಾಗಿದೆ.
125 ವರ್ಷಗಳ ಬಳಿಕ (1901ರ ನಂತರ) ಜೂನ್ ತಿಂಗಳಲ್ಲಿ ದೇಶದಲ್ಲಿ ದಾಖಲಾಗಿರುವ (ಐದನೆಯ ಬಾರಿ) ಕನಿಷ್ಠ ಪ್ರಮಾಣದ (99.5) ಮಳೆ ಇದಾಗಿದೆ. ಜುಲೈ ತಿಂಗಳಲ್ಲೂ ಎಲ್ ನಿನೊ ಪ್ರಭಾವದಿಂದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಬಹುದು ಎಂದು ಐಎಂಡಿ ಎಚ್ಚರಿಕೆ ನೀಡಿದೆ.
ಜೂನ್‌ನಲ್ಲಿ ಮಧ್ಯಪ್ರದೇಶ, ಛತ್ತೀಸಗಢ ಸೇರಿ ಮಧ್ಯ ಭಾರತದಲ್ಲಿ ತೀವ್ರ ಪ್ರಮಾಣದಲ್ಲಿ ಅಂದರೆ ಶೇ 50.4ರಷ್ಟು ಮಳೆ ಕೊರತೆಯಾಗಿದೆ. ಜುಲೈನಲ್ಲಿ ವಾಯವ್ಯ ಮತ್ತು ಈಶಾನ್ಯ ಭಾರತ, ಪೂರ್ವ-ಮಧ್ಯ ಭಾರತ, ಒಡಿಶಾ, ಛತ್ತೀಸಗಢ, ಜಾರ್ಖಂಡ್, ಆಂಧ್ರ ಪ್ರದೇಶ ಕೆಲವು ಪ್ರದೇಶಗಳನ್ನು ಹೊರತುಪಡಿಸಿ ಉಳಿದೆಡೆ ಸಾಮಾನ್ಯಕ್ಕಿಂತಲೂ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ. ಪೂರ್ವ ಕರಾವಳಿ ಪ್ರದೇಶಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಬಹುದು ಎಂದು ಐಎಂಡಿ ಮಹಾನಿರ್ದೇಶಕ ಮೃತ್ಯುಂಜಯ ಮೊಹಾಪಾತ್ರ ಹೇಳಿದ್ದಾರೆ.
ಜುಲೈ ತಿಂಗಳಲ್ಲಿ ದೇಶದಾದ್ಯಂತ ಸುರಿಯುವ ಸರಾಸರಿ ಮಳೆ ಪ್ರಮಾಣ 280.4 ಮಿ.ಮೀ. ಆದರೆ, 1971ರಿಂದ 2020ರ ಅವಧಿಯಲ್ಲಿ ಜುಲೈ ತಿಂಗಳಲ್ಲಿ ಲಭಿಸಿರುವ ಸರಾಸರಿ ಮಳೆ ಪ್ರಮಾಣಕ್ಕೆ ಹೋಲಿಸಿದರೆ, ಈ ಬಾರಿ ಅದು ಶೇ 94ರಷ್ಟು ಇರಲಿದೆ ಎಂದು ಐಎಂಡಿ ಹೇಳಿದೆ.
ಮಳೆ ಕೊರತೆಗೆ ಐದು ಅಂಶಗಳು ಕಾರಣ
ಅರೇಬಿಯನ್ ಸಮುದ್ರದಲ್ಲಿ ನೈರುತ್ಯ ಮುಂಗಾರಿಗೆ ತೇವಾಂಶದ ಮೂಲವಾಗಿ ಕಾರ್ಯನಿರ್ವಹಿಸುವ ಮಾರುತ ದುರ್ಬಲಗೊಂಡಿರುವುದು, ಗಾಳಿ, ಮೋಡ, ಮಳೆ ಮೇಲೆ ಪ್ರಭಾವ ಬೀರುವ ಮ್ಯಾಡೆನ್-ಜೂಲಿಯನ್ ಅನಿಶ್ಚಿತತೆ (ಎಂಜೆಒ), ಪೆಸಿಫಿಕ್ ಮಹಾಸಾಗರದಲ್ಲಿ ಎಲ್ ನಿನೊ ಪ್ರಭಾವ ಹೆಚ್ಚಿರುವುದು ಸೇರಿ ಐದು ಕಾರಣಗಳು ಮಳೆ ಕೊರತೆಗೆ ಪ್ರಮುಖ ಕಾರಣಗಳಾಗಿವೆ. 'ಎಂಜೆಒ' ಸಕ್ರಿಯ ಹಂತದಲ್ಲಿದ್ದಾಗ, ಮಾರುತವು ದಕ್ಷಿಣ ಭಾರತಕ್ಕೆ ಹೆಚ್ಚಿನ ಮೋಡಗಳನ್ನು ತರುತ್ತದೆ, ನಂತರ ಅವುಗಳನ್ನು ಮುಂಗಾರು ಮಾರುತಗಳು ಉತ್ತರದ ಕಡೆಗೆ ಒಯ್ಯುತ್ತವೆ, ಇದರಿಂದ ಹೆಚ್ಚಿನ ಮಳೆ ಆಗುತ್ತದೆ ಎಂದು ಐಎಂಡಿ ವಿಶ್ಲೇಷಿಸಿದೆ.
ಉತ್ತರಾಖಂಡ, ಹಿಮಾಚಲಯ ಪ್ರದೇಶ, ಲಡಾಖ್, ಗುಜರಾತ್, ಮಧ್ಯಪ್ರದೇಶ, ಉತ್ತರ ಪ್ರದೇಶದ ಕೆಲವೆಡೆಗೆ ಮುಂದಿನ ಎರಡು-ಮೂರು ದಿನಗಳಲ್ಲಿ ಮುಂಗಾರು ಚುರುಕುಗೊಳ್ಳಬಹುದು. ಈ ಅವಧಿಯಲ್ಲಿ ದಿಯು- ದಮನ್, ಜಮ್ಮು ಮತ್ತು ಕಾಶ್ಮೀರ, ಹರಿಯಾಣ, ಛತ್ತೀಸಗಢ, ದೆಹಲಿ, ಪಂಜಾಬ್, ರಾಜಸ್ಥಾನದ ಕೆಲವು ಭಾಗಗಳಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆಗಳಿವೆ. ಜುಲೈ ತಿಂಗಳಲ್ಲಿ ಕನಿಷ್ಠ ಮತ್ತು ಗರಿಷ್ಠ ಉಷ್ಣಾಂಶವು ಸಾಮಾನ್ಯ ಮಟ್ಟಕ್ಕಿಂತಲೂ ಹೆಚ್ಚಿರಲಿದೆ ಎಂದು ಐಎಂಡಿ ಹೇಳಿದೆ.

