HEALTH TIPS

ಮಧ್ಯಪ್ರದೇಶ | ದೇವಸ್ಥಾನದಲ್ಲಿ ಖಾಸಗಿ ರಶೀದಿ ನೀಡಿ ಚಿನ್ನ, ನಗದು ಸಂಗ್ರಹ ಆರೋಪ : ತನಿಖೆಗೆ ಆದೇಶ

 ಭೋಪಾಲ: ಅಯೋಧ್ಯೆಯ ರಾಮಮಂದಿರದಲ್ಲಿ ದೇಣಿಗೆ ಕಳ್ಳತನದ ಆರೋಪಗಳ ನಂತರ ಇದೀಗ ಮಧ್ಯಪ್ರದೇಶದ ಅಗರ್-ಮಾಲ್ವಾ ಜಿಲ್ಲೆಯಲ್ಲಿರುವ ವಿಶ್ವಪ್ರಸಿದ್ಧ ಮಾ ಬಾಗಲಾಮುಖಿ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಇಂತಹುದೇ ಆರೋಪಗಳು ಕೇಳಿಬಂದಿವೆ. ಭಕ್ತರು ಅರ್ಪಿಸಿದ ನಗದು,ಚಿನ್ನ ಮತ್ತು ಬೆಳ್ಳಿ ಕಾಣಿಕೆಗಳನ್ನು ದೇವಸ್ಥಾನದ ಅಧಿಕೃತ ಆಡಳಿತ ಮಂಡಳಿಯ ಹೊರತಾದ ಸಮಾನಾಂತರ ವ್ಯವಸ್ಥೆಯೊಂದರ ಮೂಲಕ ಸಂಗ್ರಹಿಸಲಾಗುತ್ತಿತ್ತು ಎಂದು ಆರೋಪಿಸಲಾಗಿದೆ. 


ಜಿಲ್ಲಾಡಳಿತವು ಈಗ ಈ ಕುರಿತು ತನಿಖೆಗೆ ಆದೇಶಿಸಿದೆ.

ಅಗರ್-ಮಾಲ್ವಾ ಜಿಲ್ಲಾಧಿಕಾರಿ ಪ್ರೀತಿ ಯಾದವ್ ಅವರು, ದೇವಾಲಯದ ಆವರಣದೊಳಗೆ ಸರಕಾರೇತರ ಅಥವಾ ನೋಂದಾಯಿಸಲ್ಪಡದ ಸಮಿತಿಯೊಂದು ದೇಣಿಗೆ ಮತ್ತು ಅಮೂಲ್ಯ ಕಾಣಿಕೆಗಳನ್ನು ಸಂಗ್ರಹಿಸುತ್ತಿದೆ. ಖಾಸಗಿ ರಶೀದಿಗಳನ್ನು ನೀಡುತ್ತಿದೆ ಮತ್ತು ಹಣವನ್ನು ಖಾಸಗಿ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುತ್ತಿದೆ ಎಂಬ ಆರೋಪಗಳ ತನಿಖೆಗಾಗಿ ಜಿ.ಪ.ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳ ನೇತೃತ್ವದಲ್ಲಿ ಮೂವರು ಸದಸ್ಯರ ವಿಚಾರಣಾ ಸಮಿತಿಯನ್ನು ರಚಿಸಿದ್ದಾರೆ. ಏಳು ದಿನಗಳ ಒಳಗಾಗಿ ವರದಿಯನ್ನು ಸಲ್ಲಿಸುವಂತೆ ಸಮಿತಿಗೆ ಸೂಚಿಸಲಾಗಿದೆ.

ನಲ್ಖೇಡಾದಲ್ಲಿರುವ ಪ್ರಸಿದ್ಧ ಮಾ ಬಾಗಲಾಮುಖಿ ದೇವಸ್ಥಾನವನ್ನು ಸರಕಾರವು ಸ್ಥಳೀಯ ಸಬ್-ಡಿವಿಜನಲ್ ಮ್ಯಾಜಿಸ್ಟ್ರೇಟ್ ನೇತೃತ್ವದಲ್ಲಿ ರಚಿಸಿರುವ ಆಡಳಿತ ಮಂಡಳಿಯು ಅಧಿಕೃತವಾಗಿ ನಿರ್ವಹಿಸುತ್ತದೆ. ಆದರೆ ಆಡಳಿತ ಮಂಡಳಿಗೆ ಬಂದಿರುವ ದೂರುಗಳ ಪ್ರಕಾರ, 2024ರಿಂದಲೂ 'ನಲ್ಖೇಡಾ ಸುದರ್ಶನ ಸೇವಾ ಸಮಿತಿ' ಹೆಸರಿನಲ್ಲಿಯೂ ಖಾಸಗಿ ರಶೀದಿಗಳನ್ನು ನೀಡಿ ದೇಣಿಗೆಗಳನ್ನು ಸಂಗ್ರಹಿಸಲಾಗುತಿತ್ತು. ಇವುಗಳನ್ನು ದೇವಾಲಯದ ಅಧಿಕೃತ ಲೆಕ್ಕಪತ್ರಗಳಲ್ಲಿ ತೋರಿಸುತ್ತಿರಲಿಲ್ಲ. ಈ ಸಮಿತಿಗೆ ದೇವಸ್ಥಾನದ ಪರವಾಗಿ ಕಾಣಿಕೆಗಳನ್ನು ಸಂಗ್ರಹಿಸಲು ಯಾವುದೇ ಕಾನೂನುಬದ್ಧ ಅಧಿಕಾರ ಇರಲಿಲ್ಲ ಎಂದು ಆರೋಪಿಸಲಾಗಿದೆ.

ಈ ಆರೋಪಗಳು ರಾಜ್ಯದಲ್ಲಿ ರಾಜಕೀಯ ಬಿರುಗಾಳಿಯನ್ನು ಎಬ್ಬಿಸಿವೆ. ವಿರೋಧ ಪಕ್ಷದ ನಾಯಕ ಉಮಂಗ್ ಸಿಂಘಾರ್ ಅವರು ಪಾರದರ್ಶಕ ತನಿಖೆಗೆ ಒತ್ತಾಯಿಸಿದ್ದು,ರಾಜ್ಯ ಸರಕಾರವು ಭಕ್ತರು ನೀಡುವ ದೇಣಿಗೆಗಳ ಸರಿಯಾದ ಲೆಕ್ಕಪತ್ರವನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

ಮಧ್ಯಪ್ರದೇಶದ ಧಾರ್ಮಿಕ ದತ್ತಿ ಮತ್ತು ಮುಜರಾಯಿ ಸಚಿವ ಧರ್ಮೇಂದ್ರ ಲೋಧಿ ಅವರು, ಈ ಅಕ್ರಮಗಳನ್ನು ಎಸಗಿದವರು ದೇವಸ್ಥಾನದ ಆಡಳಿತ ಮಂಡಳಿಯ ಭಾಗವಾಗಿರಲಿಲ್ಲ ಎಂದು ಹೇಳಿದ್ದಾರೆ. ತನಿಖೆಯ ನಂತರ ತಪ್ಪಿತಸ್ಥರೆಂದು ಕಂಡುಬರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಈ ದೇವಸ್ಥಾನವು ಹಿಂದೂ ಸಂಪ್ರದಾಯದ ಹತ್ತು ಮಹಾವಿದ್ಯಾಗಳಲ್ಲಿ (ಆದಿಶಕ್ತಿಯ ಹತ್ತು ರೂಪಗಳು) ಒಂದಾದ ಬಾಗಲಾಮುಖಿ ದೇವಿಗೆ ಸಮರ್ಪಿತವಾಗಿದೆ. ಪ್ರತಿ ವರ್ಷ, ವಿಶೇಷವಾಗಿ ನವರಾತ್ರಿ ಮತ್ತು ಇತರ ಧಾರ್ಮಿಕ ಸಂದರ್ಭಗಳಲ್ಲಿ ಸಾವಿರಾರು ಭಕ್ತರು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ವಿವಾದಗಳಲ್ಲಿ ಜಯ, ಶತ್ರುಗಳಿಂದ ರಕ್ಷಣೆ ಮತ್ತು ನ್ಯಾಯಾಲಯದ ಪ್ರಕರಣಗಳಲ್ಲಿ ಪರಿಹಾರವನ್ನು ಬಯಸುವ ಭಕ್ತರು ಇಲ್ಲಿ ತಾಂತ್ರಿಕ ಆಚರಣೆಗಳು ಮತ್ತು ವಿಶೇಷ ಹವನಗಳನ್ನು ಮಾಡಿಸುತ್ತಾರೆ. ಚುನಾವಣಾ ಸಮಯದಲ್ಲಿ ರಾಜಕಾರಣಿಗಳು ಮತ್ತು ಗಣ್ಯರು ರಾಜಕೀಯ ಯಶಸ್ಸಿಗಾಗಿ ಇಲ್ಲಿ ವಿಶೇಷ ಆಚರಣೆಗಳನ್ನು ಕೈಗೊಳ್ಳುತ್ತಾರೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries