ನವದೆಹಲಿ (PTI): ವಯಸ್ಸಾದ ಅಥವಾ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವ ಕೈದಿಗಳನ್ನು ಅವಧಿಗೂ ಮುನ್ನ ಬಿಡುಗಡೆ ಮಾಡುವ ಕುರಿತು ಮೂರು ತಿಂಗಳೊಳಗೆ ನೀತಿಯೊಂದನ್ನು ರೂಪಿಸುವಂತೆ ಸುಪ್ರೀಂ ಕೋರ್ಟ್, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಗುರುವಾರ ನಿರ್ದೇಶನ ನೀಡಿದೆ.
ನ್ಯಾಯಮೂರ್ತಿಗಳಾದ ವಿಕ್ರಮ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು, ಕೈದಿಗಳನ್ನು ಬಿಡುಗಡೆಗೆ ಪರಿಗಣಿಸಲು ಅಗತ್ಯವಾದ ಅರ್ಹತಾ ಮಾನದಂಡಗಳು, ಕಾರ್ಯವಿಧಾನದ ಚೌಕಟ್ಟನ್ನು ನೀತಿಯು ಸ್ಪಷ್ಟವಾಗಿ ವ್ಯಾಖ್ಯಾನಿಸಬೇಕುಹಾಗೂ 'ಮಾರಣಾಂತಿಕ ಕಾಯಿಲೆ'ಗೆ ಸ್ಪಷ್ಟ ಮತ್ತು ಏಕರೂಪದ ವ್ಯಾಖ್ಯಾನವನ್ನು ನೀಡಬೇಕು ಎಂದು ಹೇಳಿದೆ.
ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವ ಅಥವಾ 70 ವರ್ಷಕ್ಕಿಂತ ಮೇಲ್ಪಟ್ಟ ಕೆಲವು ಕೈದಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಕೋರಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ (ಎನ್‌ಎಎಲ್‌ಎಸ್‌ಎ) ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ ಪೀಠವು ಈ ತೀರ್ಪು ಪ್ರಕಟಿಸಿದೆ. 'ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು, ಈ ತೀರ್ಪು ಪ್ರಕಟವಾದ ದಿನಾಂಕದಿಂದ ಮೂರು ತಿಂಗಳ ಒಳಗಾಗಿ ಅಧಿಸೂಚನೆ ಹೊರಡಿಸಬೇಕು' ಎಂದು ನ್ಯಾ. ಮೆಹ್ತಾ ಹೇಳಿದರು.

