HEALTH TIPS

ಕೊಚ್ಚಿಹೋದ ಹಾವು ಸಂವರ್ಧನೆ ಕೇಂದ್ರ: ಊರು, ಹೊಲಗದ್ದೆ ತುಂಬಾ ವಿಷ ಸರ್ಪಗಳ ಹರಿದಾಟ!

 ಚೀನಾದ ದಕ್ಷಿಣ ಭಾಗದಲ್ಲಿ ಚಂಡಮಾರುತ ಅಬ್ಬರ ಜೋರಾಗಿದ್ದು, ಭಾರಿ ಮಳೆ ಸುರಿಯುತ್ತಿದೆ. ಜಲಾಶಯಗಳು ಉಕ್ಕಿ ಹರಿದ ಪರಿಣಾಮವಾಗಿ, ಗುವಾಂಗ್‌ಕ್ಸಿ ಜುವಾಂಗ್‌ ಸ್ವಾಯತ್ತ ಪ್ರದೇಶದ ಹೆಂಗ್‌ಝೌ ನಗರಕ್ಕೆ ಸಮೀಪದಲ್ಲಿರುವ ಡೆಂಗ್‌ವೇ ಗ್ರಾಮದಲ್ಲಿ ಅನಿರೀಕ್ಷಿತ ಆತಂಕ ಸೃಷ್ಟಿಯಾಗಿದೆ. 


ಡೆಂಗ್‌ವೇನಲ್ಲಿದ್ದ ಹಾವುಗಳ ಸಂವರ್ಧನೆ ಕೇಂದ್ರ ಪ್ರವಾಹದಿಂದ ತತ್ತರಿಸಿದ್ದು, ಅಲ್ಲಿದ್ದ ನೂರಾರು ವಿಷ ಜಂತುಗಳು ಗ್ರಾಮದ ಮನೆಗಳು, ಹೊಲ ಗದ್ದೆಗಳಿಗೆ ಕೊಚ್ಚಿಹೋಗಿವೆ. ಜಲಾವೃತವಾಗಿದ್ದ ಪ್ರದೇಶದಲ್ಲಿ ಈಗಾಗಲೇ ಸಂಕಷ್ಟದಲ್ಲಿದ್ದ ಅಲ್ಲಿನ ನಿವಾಸಿಗಳು ಇದೀಗ ಹೊಸ ಬಿಕ್ಕಟ್ಟನ್ನು ಎದುರಿಸುವಂತಾಗಿದೆ. ಈ ಬಗ್ಗೆ ಹಲವು ಮಾಧ್ಯಮಗಳಲ್ಲಿ ವರದಿಯಾಗಿದೆ.

ಸ್ಥಳೀಯ ಅಧಿಕಾರಿಗಳು ಹೇಳುವ ಪ್ರಕಾರ, 800 ರಿಂದ 900 ಹಾವುಗಳು ನೀರು ಪಾಲಾಗಿವೆ. ತುರ್ತು ಕ್ರಮ ಕೈಗೊಳ್ಳಲಾಗುತ್ತಿದ್ದು, ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ ಎಂದು 'ಇಂಡಿಯಾ ಟುಡೇ' ವರದಿ ಮಾಡಿದೆ.

ನಾಗರಹಾವು, ಕಾಳಿಂಗ ಸರ್ಪ ಸೇರಿದಂತೆ ಹಲವು ಹಾವುಗಳು ಕೆಸರಿನ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುತ್ತಿರುವ ವಿಡಿಯೊಗಳು ಚೀನಾದ ಸರ್ಕಾರಿ ಮಾಧ್ಯಮಗಳಲ್ಲಿಯೂ ಪ್ರಸಾರವಾಗಿವೆ.

ಹಾವುಗಳು ತಪ್ಪಿಸಿಕೊಂಡಿದ್ದು ಹೇಗೆ?

ಮೇಸಕ್ ಚಂಡಮಾರುತದಿಂದಾಗಿ ಗುವಾಂಗ್‌ಕ್ಸಿ ಪ್ರಾಂತ್ಯದಾದ್ಯಂತ ಭಾರಿ ಮಳೆ ಸುರಿದಿದೆ. ಪ್ರವಾಹದ ಮಟ್ಟ ಏರುತ್ತಿದ್ದಂತೆ ಡೆಂಗ್ವೇ ಗ್ರಾಮದಲ್ಲಿದ್ದ ಹಾವುಗಳ ಸಂತಾನೋತ್ಪತ್ತಿ ಕೇಂದ್ರ ಮುಳುಗಡೆಯಾಗಿದೆ. ಇದರಿಂದಾಗಿ, ಅಲ್ಲಿದ್ದ ನೂರಾರು ಹಾವುಗಳು ಸುತ್ತಮುತ್ತಲಿನ ಕೃಷಿಭೂಮಿ, ರಸ್ತೆಗಳು ಮತ್ತು ವಸತಿ ಪ್ರದೇಶಗಳಿಗೆ ನುಗ್ಗಿವೆ.

ಅಂದಹಾಗೆ, ಈ ಘಟನೆಯು ಜುಲೈ 7ರಂದು ನಡೆದಿದೆ ಎಂಬುದನ್ನು ಖಾತ್ರಿಪಡಿಸಿರುವ ಅಧಿಕಾರಿಗಳು, ಮನೆಯಿಂದ ಹೊರಗೆ ಬಾರದಂತೆ ಹಾಗೂ ಹಾವುಗಳು ಕಂಡುಬಂದರೆ ಕೂಡಲೇ ಮಾಹಿತಿ ನೀಡುವಂತೆ ನಿವಾಸಿಗಳಿಗೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.

ತಪ್ಪಿಸಿಕೊಂಡಿರುವ ಎಲ್ಲ ಹಾವುಗಳನ್ನು ಮತ್ತೆ ಕೇಂದ್ರಕ್ಕೆ ಸೇರಿಸುವ ನಿಟ್ಟಿನಲ್ಲಿ ಮೀನುಗಾರಿಕಾ ಬಲೆಗಳು ಹಾಗೂ ಹಾವು ಹಿಡಿಯುವ ಸಾಧನಗಳೊಂದಿಗೆ ಸ್ಥಳೀಯ ಅಧಿಕಾರಿಗಳು ಹಾಗೂ ಗ್ರಾಮಸ್ಥರ ತಂಡಗಳನ್ನು ನಿಯೋಜಿಸಲಾಗಿದೆ.

ಹೆಚ್ಚಿನವು ವಿಷಪೂರಿತವಲ್ಲ

ತಪ್ಪಿಸಿಕೊಂಡಿರುವ ಸರೀಸೃಪಗಳಲ್ಲಿ ಹೆಚ್ಚಿನವು ನೀರು ಹಾವು ಮತ್ತು ಕಿಂಗ್‌ ರ‍್ಯಾಟ್‌ಸ್ನೇಕ್‌ನಂತ ವಿಷರಹಿತ ಹಾವುಗಳು ಎಂದಿರುವ ಅಧಿಕಾರಿಗಳು, ವಿಷಪೂರಿತ ನಾಗರ ಹಾವುಗಳೂ ಕೊಚ್ಚಿಹೋಗಿವೆ ಎಂಬುದನ್ನು ಖಚಿತಪಡಿಸಿದ್ದಾರೆ.

ವ್ಯಕ್ತಿಯೊಬ್ಬರಿಗೆ ಹಾವು ಕಚ್ಚಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

ಪ್ರವಾಹದ ನೀರು ಕಡಿಮೆಯಾಗುತ್ತಿದ್ದಂತೆ, ಹಲವು ಹಾವುಗಳು ಸುತ್ತಲಿನ ಪ್ರದೇಶಗಳಿಗೆ ಹರಿದುಹೋಗಿರಬಹುದು ಎನ್ನಲಾಗಿದೆ. ಇದು, ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ.

ವಿನಾಶ ತಂದಿಟ್ಟ ಪ್ರವಾಹ

ಗುವಾಂಗ್‌ಕ್ಸಿ ಪ್ರದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ವರದಿಯಾಗಿರುವ ಅತ್ಯಂತ ಭೀಕರ ಪರಿಸ್ಥಿತಿ ಇದಾಗಿದೆ. ಭಾರಿ ಮಳೆಯಿಂದಾಗಿ, ಹಲವು ಪ್ರದೇಶಗಳು ಜಲಾವೃತವಾಗಿವೆ. ವಿವಿಧೆಡೆ ಭೂಕುಸಿತ ಸಂಭವಿದೆ. ಹಲವೆಡೆ ಮೂಲಸೌಕರ್ಯಕ್ಕೆ ಹಾನಿಯಾಗಿದೆ.

ಕೆಲವು ಪ್ರದೇಶಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆಯಾದರೂ, ಇನ್ನಷ್ಟು ಮಳೆ ಸುರಿಯುವ ಮುನ್ಸೂಚನೆ ಇದೆ. ಹೀಗಾಗಿ, ಪುನರ್ವಸತಿ ಕಾರ್ಯಗಳು ಪ್ರಗತಿಯಲ್ಲಿರುವ ಹೊತ್ತಲ್ಲಿ, ಮತ್ತೊಮ್ಮೆ ಪ್ರವಾಹದ ಭೀತಿ ಶುರುವಾಗಿದೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries