ನವದೆಹಲಿ: ಸಂಸತ್ ಚಲೊ ಪ್ರತಿಭಟನೆ ವೇಳೆ ವಿದ್ಯಾರ್ಥಿಗಳ ಜೊತೆ ಕ್ರೂರ ವರ್ತನೆ ಮತ್ತು ಪರೀಕ್ಷಾ ಬಿಕ್ಕಟ್ಟಿನ ಕುರಿತಂತೆ ಸರ್ಕಾರದ ಸಂಪೂರ್ಣ ಬೇಜವಾಬ್ದಾರಿತನದ ಬಗ್ಗೆ ಸದನದಲ್ಲಿ ಚರ್ಚೆಗೆ ಅನುಮತಿ ನೀಡಬೇಕೆಂದು ಕೋರಿ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿದಂತೆ ವಿಪಕ್ಷಗಳ ಹಲವು ಸಂಸದರು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ರಾಹುಲ್ ಗಾಂಧಿ ಜೊತೆಗೆ ಎಸ್‌ಪಿಯ ಧರ್ಮೇಂದ್ರ ಯಾದವ್, ಶಿವ ಸೇನಾದ(ಯುಬಿಟಿ) ಅರವಿಂದ್ ಸಾವಂತ್, ಆರ್‌ಎಸ್‌ಪಿಯ ಎನ್.ಕೆ. ಪ್ರೇಮಚಂದ್ರನ್ ಸಹ ಭೇಟಿಯಾದರು.
ವಿಪಕ್ಷಗಳ ಇತರೆ ಸಂಸದರ ಜೊತೆ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾದೆವು. ನಮ್ಮ ಬೇಡಿಕೆ ಸರಳವಾಗಿದೆ. ವಿದ್ಯಾರ್ಥಿಗಳ ಮೇಲಿನ ಕ್ರೂರ ವರ್ತನೆ ಮತ್ತು ಪರೀಕ್ಷಾ ಬಿಕ್ಕಟ್ಟಿನ ಕುರಿತು ಸರ್ಕಾರದ ಸಂಪೂರ್ಣ ಹೊಣೆಗಾರಿಕೆಯ ಕೊರತೆ ಕುರಿತಂತೆ ಸದನದಲಿ ಅವಕಾಶ ಕೋರಿದ್ದೇವೆ ಎಂದು ರಾಹುಲ್ ಗಾಂಧಿ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ಧಾರೆ.
ಸರ್ಕಾರದಲ್ಲಿ ಹೊಣೆಗಾರಿಕೆಯ ಕೊರತೆ ಎದ್ದು ಕಾಣುತ್ತಿದೆ. ತಮ್ಮ ಕಾನೂನುಬದ್ಧ ಪ್ರಶ್ನೆ ಕೇಳಿದ್ದಕ್ಕಾಗಿ ವಿದ್ಯಾರ್ಥಿಗಳ ಮೇಲೆ ಲಾಠಿ ಎತ್ತಲಾಗಿದೆ ಎಂದು ರಾಹುಲ್ ದೂರಿದ್ದಾರೆ. ಭಾರತದ ಯುವಜನರ ಭವಿಷ್ಯದ ಬಗ್ಗೆ ಚರ್ಚೆ ನಡೆಸಲಾಗದ ಸಂಸತ್ತು ಏಕೆ? ಎಂದು ಪ್ರಶ್ನಿಸಿದ್ಧಾರೆ.
'ಈ ವಿಷಯವನ್ನು ಮುಚ್ಚಿಹಾಕಲು ವಿರೋಧ ಪಕ್ಷವು ಬಿಡುವುದಿಲ್ಲ. ವಿದ್ಯಾರ್ಥಿಗಳ ಧ್ವನಿ ಬೀದಿ ಬೀದಿಗಳಲ್ಲಿ ಹಾಗೂ ಸಂಸತ್ತಿನಲ್ಲಿಯೂ ಕೇಳಿಬರುವಂತೆ ನಾವು ನೋಡಿಕೊಳ್ಳುತ್ತೇವೆ'ಎಂದು ರಾಹುಲ್ ಹೇಳಿದ್ದಾರೆ.
ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ನಡೆದ 'ವಿದ್ಯಾರ್ಥಿಗಳ ಮೇಲಿನ ಹಲ್ಲೆ' ಕುರಿತು ಚರ್ಚೆಗೆ ಅವಕಾಶ ಕೋರಿ, ರಾಹುಲ್ ಗಾಂಧಿ ಅವರು ಇತರ ಕೆಲವು ವಿರೋಧ ಪಕ್ಷದ ಸಂಸದರೊಂದಿಗೆ ಸ್ಪೀಕರ್ ಬಿರ್ಲಾ ಅವರನ್ನು ಭೇಟಿಯಾದರು ಎಂದು ಲೋಕಸಭೆಯಲ್ಲಿನ ಕಾಂಗ್ರೆಸ್ ಮುಖ್ಯ ಸಚೇತಕ ಮಾಣಿಕಂ ಟ್ಯಾಗೋರ್ ತಿಳಿಸಿದರು.
'ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಬಗ್ಗೆ ಸದನದಲ್ಲಿ ವಿವರಣೆ ನೀಡಬೇಕೆಂದು ನಾವು ಒತ್ತಾಯಿಸುತ್ತೇವೆ' ಎಂದಿದ್ದಾರೆ.
ಸಂಸತ್ತಿನ ಮುಂಗಾರು ಅಧಿವೇಶನದ ಎರಡನೇ ದಿನದ ಕಲಾಪ ಆರಂಭವಾಗುವ ಮುನ್ನ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಕಚೇರಿಯಲ್ಲಿ 'ಇಂಡಿಯಾ' ಮೈತ್ರಿಕೂಟದ ನಾಯಕರು ಸಭೆ ಸೇರಿ, ವಿರೋಧ ಪಕ್ಷದ ಮುಂದಿನ ಕಾರ್ಯತಂತ್ರದ ಕುರಿತು ಚರ್ಚಿಸಿದರು.
ಈ ಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಜೈರಾಮ್ ರಮೇಶ್ ಮತ್ತು ಕೆ.ಸಿ. ವೇಣುಗೋಪಾಲ್, ಸಮಾಜವಾದಿ ಪಕ್ಷದ ಧರ್ಮೇಂದ್ರ ಯಾದವ್, ಎನ್‌ಸಿಪಿ (ಎಸ್‌ಪಿ)ಯ ಸುಪ್ರಿಯಾ ಸುಳೆ, ಶಿವಸೇನೆ (ಯುಬಿಟಿ)ಯ ಸಂಜಯ್ ರಾವುತ್ ಮುಂತಾದವರು ಇದ್ದರು.

