ಕುಂಬಳೆ: ಅಪೂರ್ವ ಸರೋವರ ಕ್ಷೇತ್ರ ಶ್ರೀ ಅನಂತಪುರ ಅನಂತಪದ್ಮನಾಭ ಸ್ವಾಮೀ ಸನ್ನಿಧಿಯಲ್ಲಿ ಮುಂಬರುವ 2027ರ ಫೆ. 23 ರಿಂದ 28 ರ ತನಕ ನವೀಕರಣ ಬ್ರಹ್ಮಕಲಶೋತ್ಸವದೊಂದಿಗೆ ಅತ್ಯಪೂರ್ವ ತೆಪ್ಪೋತ್ಸವ ಪುನರಾರಂಭಗೊಳ್ಳಲಿದೆ ಎಂದು ಶ್ರೀಮದ್ ಎಡನೀರು ಮಠಾಧೀಶ ಶ್ರೀ ಸಚ್ಛಿದಾನಂದ ಭಾರತೀ ಶ್ರೀಪಾದಂಗಳು ಘೋಷಿಸಿದರು.
ಶ್ರೀ ಕ್ಷೇತ್ರ ಅನಂತಪುರದ ಅನಂತಶ್ರೀ ಸಭಾಭವನದಲ್ಲಿ ಭಾನುವಾರ ನಡೆದ ಬ್ರಹ್ಮಕಲಶೋತ್ಸವ ಸಮಿತಿ ಘೋಷಣಾ ಮಹಾಸಭೆಯಲ್ಲಿ ಶ್ರೀಗಳವರು ದಿನಾಂಕ ಘೋಷಿಸಿದರು.
ತುಂಬಿದ ಸಭೆ: ಬ್ರಹ್ಮಕಲಶ ಮಹಾಯಶಸ್ಸಿನ ಸಂಕೇತ:
ಮಹಾಸಭೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಎಡನೀರು ಶ್ರೀಗಳು ನಾಡಿನ ದೇವಾಲಯ ಮತ್ತು ವಿದ್ಯಾಲಯ ಸುಸ್ಥಿತಿಯಲ್ಲಿದೆ ಎಂದರೆ ಊರು ನೆಮ್ಮದಿಯಿಂದ ಸುಭಿಕ್ಷವಾಗಿದೆ ಎಂದರ್ಥ. ದೇಶದ ಎಲ್ಲೇ ಆಗಲಿ ಕಾಸರಗೋಡಿನ ಪ್ರಸ್ತಾಪ ಬಂದಾಗ ಮೊಸಳೆ ಮತ್ತು ಸರೋವರ ಕ್ಷೇತ್ರದ ಉಲ್ಲೇಖ ಬಂದೇ ಬರುತ್ತದೆ. ಶ್ರೀ ಕ್ಷೇತ್ರ ನಮ್ಮ ನಾಡಿನ ಅಭಿಮಾನ ಮತ್ತು ಹೆಮ್ಮೆಯ ಸಂಕೇತ. ಇಲ್ಲಿನ ಬ್ರಹ್ಮಕಲಶ ದಿನಾಂಕ ಘೋಷಣಾ ಸಭೆಯಲ್ಲೇ ಇಷ್ಟೊಂದು ಸಂಖ್ಯೆಯ ಭಕ್ತ ಜನರು ಆಸಕ್ತಿಯಿಂದ ಸೇರಿದ್ದಾರೆಂದರೆ ಇದು ಬ್ರಹ್ಮಕಲಶದ ಮಹಾ ಯಶಸ್ಸಿನ ಸಂಕೇತ ಎಂದರು. ಬ್ರಹ್ಮಕಲಶದ ಸಮಿತಿ ಮತ್ತು ದಿನಾಂಕ ಘೋಷಣೆ ಆಯಿತೆಂದರೆ ಮತ್ತೆ ಭರದ ಸಿದ್ಧತೆ ಆರಂಭ ಎಂದೇ ಅರ್ಥ ಎಂದು ಶ್ರೀಗಳು ನುಡಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳನ್ನು ಘೋಷಿಸಿದರು. ಈ ಸಂದರ್ಭ ಆಶೀರ್ವಚನ ನೀಡಿದ ಅವರು
ಅನಂತಪುರ ಎಂಬ ಹೆಸರೇ ಅನಂತ ಸಾಧ್ಯತೆಗಳ ಊರು ಎಂಬುದನ್ನು ಸಂಕೇತವಾಗಿ ಹೊಂದಿದೆ ಎಂದರು. ಬ್ರಹ್ಮಕಲಶ ಎಂದರೆ ನಮ್ಮ ಸನಾತನ ಧರ್ಮ, ಸಂಸ್ಕøತಿಯನ್ನು ಬಲ ಪಡಿಸುವ ಕಾರ್ಯಕ್ರಮ. ಹೇಗೆ ಕ್ಷೇತ್ರಕ್ಕೆ ಬ್ರಹ್ಮಕಲಶ ನಡೆಯುತ್ತದೋ ಹಾಗೆಯೇ ದೇಹವೆಂಬ ದೇವಾಲಯ ಹೊತ್ತ ನಮ್ಮೆಲ್ಲರೊಳಗೂ ಬ್ರಹ್ಮಕಲಶ ನಡೆಯುತ್ತಲೇ ಇರಬೇಕು. ಇದು ಪ್ರತಿಯೊಬ್ಬರಿಗೂ ದೇವ ಕಾರ್ಯ ಮಾಡುವ ಮೂಲಕ ಆತ್ಮ ಪರಿಷ್ಕರಣೆಗೆ ಒದಗುವ ಅವಕಾಶ ಎಂದವರು ನುಡಿದರು.
ಲಾಂಛನ ಬಿಡುಗಡೆ:
ಬ್ರಹ್ಮಕಲಶೋತ್ಸವದ ಲಾಂಛನವನ್ನು ಮಹಾಪೋಷಕ, ದಾನಿ, ಮುಂಡಪ್ಪಳ್ಳ ಶ್ರೀರಾಜರಾಜೇಶ್ವರಿ ಕ್ಷೇತ್ರದ ಮೊಕ್ತೇಸರ ಕೆ. ಕೆ. ಶೆಟ್ಟಿ ಮುಂಬೈ ಬಿಡುಗಡೆಗೊಳಿಸಿದರು.
ಸಮಾರಂಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಬಿ. ವಸಂತ ಪೈ ಬದಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ಪೆರ್ಣೆ ಮುಚ್ಚಿಲೋಟ್ ಭಗವತಿ ಕ್ಷೇತ್ರದ ಗೌರವ ಮೊಕ್ತೇಸರ ಶ್ರೀಕೃಷ್ಣಯ್ಯ ಅನಂತಪುರ,
ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಮಾಧವ ಕಾರಂತ, ಜಿ.ಪಂ. ಸದಸ್ಯ ಸೋಮಶೇಖರ ಜೆ. ಎಸ್, ರಾಮಪ್ಪ ಮಂಜೇಶ್ವರ, ಉದ್ಯಮಿ ಮಧುಸೂಧನ ಆಯರ್, ಧಾರ್ಮಿಕ ಮುಂದಾಳು ಮಂಜುನಾಥ ಆಳ್ವ ಮಡ್ವ, ಕ್ಷೇತ್ರ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕುಶಾಲಪ್ಪ ಪೂಜಾರಿ ಕಣ್ಣೂರು, ಜನಪ್ರತಿನಿಧಿಗಳಾದ ಪೃಥ್ವಿರಾಜ್ ಶೆಟ್ಟಿ, ಸುಖೇಶ್ ಭಂಡಾರಿ, ಅಜಿತ್ ಕುಮಾರ್, ಶಾರದಾ, ಮಹಿಳಾ ಸಮಿತಿ ಗೌರವಾಧ್ಯಕ್ಷೆ ಜಯಶ್ರೀ ಶ್ರೀಕೃಷ್ಣಯ್ಯ ಅನಂತಪುರ ಮೊದಲಾದವರು ಉಪಸ್ಥಿತರಿದ್ದರು. ಸಮಿತಿ ಪ್ರಧಾನ ಕಾರ್ಯದರ್ಶಿ ಮಹಾಲಿಂಗೇಶ್ವರ ಭಟ್ ಪೆರ್ಣೆ ಸ್ವಾಗತಿಸಿ, ಜತೆ ಕಾರ್ಯದರ್ಶಿ ಸತ್ಯಶಂಕರ ಅನಂತಪುರ ನಿರೂಪಿಸಿದರು. ಮಹಿಳಾ ಸಮಿತಿ ಅಧ್ಯಕ್ಷೆ ವಿಜಯ ಭಟ್, ಶುಭಾ ಭಟ್ ದೇವಸ್ಯ ಪ್ರಾರ್ಥನೆ ಹಾಡಿದರು.
ಮತ್ತೆ ಐತಿಹಾಸಿಕ ತೆಪ್ಪೋತ್ಸವ:
ಸರೋವರ ಕ್ಷೇತ್ರ ಶ್ರೀ ಅನಂತಪುರದಲ್ಲಿ ಈ ಬ್ರಹ್ಮಕಲಶೋತ್ಸವದೊಂದಿಗೆ ಮತ್ತೆ ತೆಪ್ಪೋತ್ಸವ ಆರಂಭವಾಗಲಿದೆ. ಹಿಂದಿನ ಕಾಲದಲ್ಲಿ ಅನಂತಪುರದ ವಾರ್ಷಿಕ ಜಾತ್ರೆಯಂದು ದೇವರು ತೆಪ್ಪದಲ್ಲಿ ಕ್ಷೇತ್ರಕ್ಕೆ ಪ್ರದಕ್ಷಿಣೆ ಬರುವುದು ಮತ್ತೆಲ್ಲೂ ಕಾಣದ, ಬೇರೆಲ್ಲೂ ಇಲ್ಲದ ಅತ್ಯಪೂರ್ವ ವಿಸ್ಮಯಕರ ದೃಶ್ಯಾವಳಿಯಾಗಿತ್ತು. ಕಾರಣಾಂತರ ಸ್ಥಗಿತಗೊಂಡು, ಪುನರಪಿ ಆರಂಭವಾಗುವ ಅನಂತಪುರ ತೆಪ್ಪೇತ್ಸವ ಶ್ರೀ ಕ್ಷೇತ್ರ ಜಾತ್ರೆಯ ಅತ್ಯಂತ ವಿಶೇಷ ಆಕರ್ಷಣೆಯಾಗಲಿದೆ.

.jpg)
.jpg)
.jpg)
.jpg)
