ಕಾಸರಗೋಡು: ವಿಶ್ವ ಕಾಗದದ ಚೀಲ ದಿನಾಚರಣೆಯ ಅಂಗವಾಗಿ ಕಾಸರಗೋಡು ಸರ್ಕಾರಿ ಕಾಲೇಜಿನ ಎನ್‍ಸಿಸಿ ಘಟಕ ವತಿಯಿಂದ ವಿಶೇಷ ಕಾಗದದ ಚೀಲ ತಯಾರಿಕೆ ಮತ್ತು ವಿತರಣೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಇದಕ್ಕಾಗಿ ಕಾಲೇಜಿನಲ್ಲಿ ಕಾರ್ಯಾಗಾರ ಆಯೋಜಿಸಲಾಯಿತು.
ಕಾರ್ಯಕ್ರಮದನ್ವಯ ಎನ್‍ಸಿಸಿ ಕೆಡೆಟ್‍ಗಳು ಕಾಗದದ ಚೀಲಗಳನ್ನು ತಯಾರಿಸುವ ಕಾರ್ಯಾಗಾರದಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಪರಿಸರ ಸ್ನೇಹಿಯಾಗಿರುವ ಈ ಮರುಬಳಕೆ ಮಾಡಬಹುದಾದ ಕಾಗದದ ಚೀಲಗಳನ್ನು ಕೆಡೆಟ್‍ಗಳು ಸ್ವತಃ ತಯಾರಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ. ವಿ.ಎಸ್. ಅನಿಲ್‍ಕುಮಾರ್ ಅವರಿಗೆ ಮೊದಲ ಕಾಗದದ ಚೀಲವನ್ನು ನೀಡುವ ಮೂಲಕ ಮೊದಲ ವಿತರಣೆಯನ್ನು ನೆರವೇರಿಸಲಾಯಿತು. ನಂತರ, ತಯಾರಿಸಿದ ಕಾಗದದ ಚೀಲಗಳನ್ನು ಕಾಲೇಜು ಉಪನ್ಯಾಸಕರು ಹಾಗೂ ಸಿಬ್ಬಂದಿಗೆ ವಿತರಿಸಲಾಯಿತು.
ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಮತ್ತು ಪ್ಲಾಸ್ಟಿಕ್‍ಗೆ ಪರ್ಯಾಯವಾಗಿ ಪರಿಸರ ಸ್ನೇಹಿ ಕಾಗದದ ಚೀಲಗಳ ಮಹತ್ವವನ್ನು ಸಾರುವ ನಿಟ್ಟಿನಲ್ಲಿ ಕಾರ್ಯಾಗಾರ ಆಯೋಜಿಸಲಾಗಿತ್ತು. 'ಕೈಯಿಂದ ರೂಪುಗೊಂಡ ಚೀಲ, ಭರವಸೆಯೊಂದಿಗೆ ಸಾಗಿದ ಕೈಗಳು' ಎಂಬ ಧ್ಯೇಯದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.



