ಕಾಸರಗೋಡು: ಕಾರ್ಯಕರ್ತರ ಅವಿರತ ಶ್ರಮ ಹಾಗೂ ಪಕ್ಷ ನಿಷ್ಠೆಯಿಂದ ಭಾರತೀಯ ಜನತಾಪಕ್ಷ ಇಂದು ಮಹಾನ್‍ಶಕ್ತಿಯಾಗಿ ಹೊರಹೊಮ್ಮಲು ಕರಣವಾಗಿರುವುದಾಗಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಟಿ. ರಮೇಶ್ ತಿಳಿಸಿದ್ದಾರೆ.
ಅವರು ಸಿರಿಬಾಗಿಲು ಪುಳ್ಕೂರು ಶ್ರೀ ಮಹಾದೇವ ಸಭಾಭವನದಲ್ಲಿ ನಡೆದ ಪಂಡಿತ್ ದೀನ್‍ದಯಾಳ್ ಉಪಾಧ್ಯಾಯ ಕಾಸರಗೋಡು ಸಂಘಟನಾ ಮಂಡಲ ಪ್ರಶಿಕ್ಷಣ ಮಹಾ ಅಭಿಯಾನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಬಿಜೆಪಿ ಕೇವಲ ಚುನಾವಣಾ ಯಶಸ್ಸನ್ನು ಮಾತ್ರ ಗುರಿಯಾಗಿಸಿಕೊಂಡು ಕೆಲಸ ಮಾಡುವ ಪಕ್ಷವಲ್ಲ. ಮೂರು ದಶಕಗಳ ಕಾಲ ಅಧಿಕಾರದಿಂದ ಹೊರಗಿದ್ದಾಗಲೂ ಪಕ್ಷದಲ್ಲಿ ಯಾವುದೇ ಒಡಕು ಉಂಟಾಗದಂತೆ ಪಕ್ಷವನ್ನು ಮುನ್ನಡೆಸುವಲ್ಲಿ ಕಾರ್ಯಕರ್ತರ ಪ್ರಾಮಾಣಿಕ ಪ್ರಯತ್ನ ನಿದರ್ಶನವಾಗಿದೆ. ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ದೇಶ ಹೆಚ್ಚು ಸದೃಢವಾಗಿದೆ. ವಿಶ್ವ ಇಂದು ಭಾರತದ ಕಡೆಗೆ ದೃಷ್ಟಿಹಾಯಿಸುವಂತಾಗಿದೆ ಎಂದು ತಿಳಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ಗುರುಪ್ರಸಾದ್ ಪ್ರಭು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಅಧ್ಯಕ್ಷೆ ಎಂ.ಎಲ್. ಅಶ್ವಿನಿ, ರಾಜ್ಯ ಸಮಿತಿ ಸದಸ್ಯೆ ಸವಿತಾ ಟೀಚರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನಿಲ್, ಜಿಲ್ಲಾ ಉಪಾಧ್ಯಕ್ಷ ಪಿ. ರಮೇಶ್, ಜಿಲ್ಲಾ ಕಾರ್ಯದರ್ಶಿಗಳಾದ ಪುಷ್ಪಾ ಗೋಪಾಲನ್, ಪ್ರಮೀಳಾ ಮಜಲ್, ಜಿಲ್ಲಾ ಕೋಶಾಧಿಕಾರಿ ವೀಣಾ ಅರುಣ್ ಶೆಟ್ಟಿ, ಜಿಲ್ಲಾ ಸೆಲ್ ಸಂಯೋಜಕ ಸುಕುಮಾರ್ ಕುದ್ರೆಪ್ಪಾಡಿ, ರಾಜ್ಯ ಕೌನ್ಸಿಲ್ ಸದಸ್ಯರಾದ ಎನ್. ಸತೀಶ್, ಹರೀಶ್ ನಾರಂಪಾಡಿ, ಮಂಡಲ ಪ್ರಧಾನ ಕಾರ್ಯದರ್ಶಿ ಶ್ರೀಧರ ಕೂಡ್ಲು, ಮಂಡಲ ಕೋಶಾಧಿಕಾರಿ ಹರೀಶ್ ಕೆ ಆರ್, ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿತಾ ನಾಯ್ಕ್, ಮಧೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜ್ಞಾನಿ ಶಾನ್‍ಭಾಗ್ ಹಾಗೂ ಸೀನಾ ಶೆಟ್ಟಿ ಕಜೆ ಮಾತನಾಡಿದರು.
ಎರಡು ದಿನಗಳ ಈ ತರಬೇತಿ ಶಿಬಿರದಲ್ಲಿ ಏರಿಯಾ ಮತ್ತು ಪಂಚಾಯತ್ ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ ನೂರಕ್ಕೂ ಹೆಚ್ಚು ಪದಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಭಾಗವಹಿಸಿದ್ದರು.



