ನವದೆಹಲಿ: 2018ರ ಹೊಸ ವರ್ಷದ ಸಂಭ್ರಮಾಚರಣೆಯ ವೇಳೆ ಕುಶಾಲು ತೋಪು ಹಾರಿಸಿದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟಿದ್ದ ಪ್ರಕರಣದಲ್ಲಿ ಬಿಹಾರದ ಬಿಜೆಪಿ ಶಾಸಕ ರಾಜು ಕುಮಾರ್ ಸಿಂಗ್ ಅವರನ್ನು ದಿಲ್ಲಿಯ ನ್ಯಾಯಾಲಯವೊಂದು ತಪ್ಪಿತಸ್ಥರೆಂದು ಘೋಷಿಸಿ, ನಾಲ್ಕು ವರ್ಷಗಳ ಸಾದಾ ಜೈಲು ಶಿಕ್ಷೆ ಹಾಗೂ 25 ಲಕ್ಷ ರೂ.ದಂಡ ವಿಧಿಸಿದೆ.
ವಿಶೇಷ ನ್ಯಾಯಾಧೀಶ ವಿಶಾಲ್ ಗೋಗ್ನೆ ಅವರು ಶನಿವಾರ ತೀರ್ಪಿನ ಪ್ರಮುಖ ಭಾಗವನ್ನು ಮೌಖಿಕವಾಗಿ ಪ್ರಕಟಿಸಿದರು.
'ತಪ್ಪಿತಸ್ಥ ಆರೋಪಿಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304ರ ಭಾಗ-2ರ ಅಡಿಯಲ್ಲಿ ನಾಲ್ಕು ವರ್ಷಗಳ ಸಾದಾ ಜೈಲು ಶಿಕ್ಷೆ ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಡಿ ಎರಡು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ' ಎಂದು ನ್ಯಾಯಾಧೀಶರು ಹೇಳಿದರು.
ಜತೆಗೆ, ಬಿಹಾರದ ಸಾಹೇಬ್‌ಗಂಜ್ ಕ್ಷೇತ್ರದ ಬಿಜೆಪಿ ಶಾಸಕ ರಾಜು ಕುಮಾರ್ ಸಿಂಗ್ ಅವರು ಮೃತ ಮಹಿಳೆಯ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರವನ್ನು ಪಾವತಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
ಶುಕ್ರವಾರ ನಡೆದ ವಿಚಾರಣೆಯ ವೇಳೆ, ತನಗೆ ಹತ್ಯೆ ಮಾಡುವ ಯಾವುದೇ ಉದ್ದೇಶ ಇರಲಿಲ್ಲ. ಅಲ್ಲದೆ, ತಾನು ಕಳಂಕರಹಿತ ಸಾರ್ವಜನಿಕ ಪ್ರತಿನಿಧಿಯಾಗಿರುವುದರಿಂದ ತಾತ್ಕಾಲಿಕ ಬಿಡುಗಡೆ ನೀಡುವಂತೆ ಶಾಸಕ ರಾಜು ಕುಮಾರ್ ಸಿಂಗ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
56 ವರ್ಷದ ರಾಜು ಕುಮಾರ್ ಸಿಂಗ್ ಅವರನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304ರ ಭಾಗ-2 ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಡಿ ಪರವಾನಗಿ ಷರತ್ತುಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ನ್ಯಾಯಾಲಯ ಅಪರಾಧಿ ಎಂದು ಘೋಷಿಸಿದೆ.
2018ರ ಡಿಸೆಂಬರ್ 31ರಂದು ಹೊಸ ದಿಲ್ಲಿಯ ಫತೇಪುರ್ ಬೇರ್ ಪ್ರದೇಶದಲ್ಲಿ ನಡೆದ ಹೊಸ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಶಾಸಕ ರಾಜು ಕುಮಾರ್ ಸಿಂಗ್ ಹಾರಿಸಿದ್ದ ಕುಶಾಲು ತೋಪಿನ ಗುಂಡು ತಗುಲಿ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಈ ಘಟನೆಗೆ ಸಂಬಂಧಿಸಿದ ಪ್ರಕರಣದಲ್ಲಿ ನ್ಯಾಯಾಲಯ ಇದೀಗ ತೀರ್ಪು ಪ್ರಕಟಿಸಿದೆ.

