ವಾಷಿಂಗ್ಟನ್: ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಬಂಧಿತ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ಮತ್ತು ಆತನ ಸಹಚರ ಸತೀಂದರ್‌ಜಿತ್ ಸಿಂಗ್ ಅಲಿಯಾಸ್ ಗೋಲ್ಡಿ ಬ್ರಾರ್ ವಿರುದ್ಧ ಅಮೆರಿಕ ನ್ಯಾಯಾಲಯದಲ್ಲಿ ದೋಷಾರೋಪಪಟ್ಟಿ ಸಲ್ಲಿಕೆಯಾಗಿದೆ.
'ಆಪರೇಷನ್ ಹಾರ್ಡ್‌ಬಾಲ್' ಹೆಸರಿನಲ್ಲಿ ಅಮೆರಿಕ, ಕೆನಡಾ ಮತ್ತು ಯುರೋಪ್ ಕಾನೂನು ಜಾರಿ ಸಂಸ್ಥೆಗಳು ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಭಾರತ ಮೂಲದ ಮೂರು ಅಂತರರಾಷ್ಟ್ರೀಯ ಸಂಘಟಿತ ಅಪರಾಧ ಗುಂಪುಗಳಿಗೆ ಸೇರಿದ 24 ಜನರನ್ನು ಬಂಧಿಸಲಾಗಿದೆ. ಅವರಲ್ಲಿ 11 ಜನರನ್ನು ಕ್ಯಾಲಿಫೋರ್ನಿಯಾದಲ್ಲಿ ಬಂಧಿಸಲಾಗಿದೆ.
'ಮೂರು ವರ್ಷಗಳ ಹಿಂದೆ ಜೂನ್ 18 ರಂದು ಬ್ರಿಟಿಷ್ ಕೊಲಂಬಿಯಾದ ಸರ್ರೇಯಲ್ಲಿರುವ ಸಿಖ್ ದೇವಾಲಯದ ಹೊರಗೆ ನಿಜ್ಜರ್ (ನ್ಯಾಯಾಲಯದ ದಾಖಲೆಗಳಲ್ಲಿ 'ಎಚ್‌ಎಸ್‌ಎನ್' ಎಂದು ಉಲ್ಲೇಖಿಸಲಾಗಿದೆ) ಅವರನ್ನು ಕೊಲ್ಲಲು ಬಿಷ್ಣೋಯಿ ಆದೇಶಿಸಿದ್ದನು' ಎಂದು ಮಂಗಳವಾರ ಸಲ್ಲಿಕೆಯಾದ ದೋಷಾರೋಪಟ್ಟಿಯಲ್ಲಿ ತಿಳಿಸಲಾಗಿದೆ.
ನಿಜ್ಜರ್ ಹತ್ಯೆಯು ಭಾರತ ಮತ್ತು ಕೆನಡಾ ನಡುವಿನ ದ್ವಿಪಕ್ಷೀಯ ಸಂಬಂಧ ಹದಗೆಡಲು ಕಾರಣವಾಗಿತ್ತು. ಕೆನಡಾದ ಅಂದಿನ ಪ್ರಧಾನಿ ಜಸ್ಟಿನ್ ಟ್ರಡೊ ಅವರು ನಿಜ್ಜರ್ ಹತ್ಯೆಯಲ್ಲಿ ಭಾರತ ಸರ್ಕಾರದ ಕೈವಾಡವಿದೆ ಎಂದು ಆರೋಪಿಸಿದ್ದರು. ಕೆನಡಾದ ಆರೋಪವನ್ನು ಭಾರತ ತಿರಸ್ಕರಿಸಿತ್ತು.

