ರಾಯಪುರ: ಛತ್ತೀಸ್‌ಗಢದ ಬಿಲಾಸ್‌ಪುರ ಜಿಲ್ಲೆಯಲ್ಲಿರುವ 'ಕಾನೂನು ಸಂರ್ಘರ್ಷಕ್ಕೆ ಒಳಗಾದ ಮಕ್ಕಳ ನಿಗಾ ಗೃಹ'ದ ನಾಲ್ವರು ಕೈದಿಗಳು ಭದ್ರತಾ ಸಿಬ್ಬಂದಿಯೊಬ್ಬರನ್ನು ಹತ್ಯೆಗೈದು ಪರಾರಿಯಾಗಿದ್ದಾರೆ.
ಹತ್ಯೆಯಾದ ಭದ್ರತಾ ಸಿಬ್ಬಂದಿಯನ್ನು ನರೇಂದ್ರ ಕುಮಾರ್ ಖಾಂಡೆ (40) ಎಂದು ಗುರುತಿಸಲಾಗಿದ್ದು, ಇವರು ಕಳೆದ ಒಂದು ವರ್ಷದಿಂದ ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.
ಈ ಕೃತ್ಯದ ಪ್ರಮುಖ ಆರೋಪಿಗೆ ಇತ್ತೀಚೆಗಷ್ಟೇ 20 ವರ್ಷ ತುಂಬಿದ್ದು, ಆತನನ್ನು ಶೀಘ್ರದಲ್ಲಿ ಬಿಲಾಸ್‌ಪುರ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಗಿತ್ತು. ಈ ವರ್ಗಾವಣೆಯಿಂದ ತಪ್ಪಿಸಲು ಆತ ಪಲಾಯನದ ಸಂಚು ರೂಪಿಸಿದ್ದಾನೆ. ಈ ಸಂಚಿಗೆ ಆತ ಕೊಲೆ ಮತ್ತು ಲೈಂಗಿಕ ದೌರ್ಜನ್ಯದಂತಹ ಗಂಭೀರ ಆರೋಪಗಳಿಗಾಗಿ ಬಂಧನಕ್ಕೊಳಗಾಗಿದ್ದ ಮತ್ತು 18 ವರ್ಷ ದಾಟಿರುವ ಇತರ ಮೂವರು ಕೈದಿಗಳನ್ನು ಸೇರಿಸಿಕೊಂಡಿದ್ದನು ಎಂದು ಪ್ರಾಥಮಿಕ ತನಿಖೆ ತಿಳಿಸಿದೆ.

