ನ್ಯಾಯಾಲಯದ ಅನುಮೋದನೆ ಸಿಕ್ಕ ಬಳಿಕ ದೇಶಾದ್ಯಂತ ಹೊಸ ಪಠ್ಯಕ್ರಮ ಜಾರಿಗೆ ಬರುವ ಸಾಧ್ಯತೆಯಿದೆ.
ಸುಪ್ರೀಂ ಕೋರ್ಟ್‌ಗೆ ಕೇಂದ್ರದ ಮಾಹಿತಿ
ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಆರ್. ಮಹಾದೇವನ್ ಅವರಿದ್ದ ಪೀಠದ ಮುಂದೆ ವಿಚಾರಣೆ ವೇಳೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಅವರು, ತಜ್ಞರ ಸಮಿತಿಯ ವರದಿಯನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿದ್ದು, ನ್ಯಾಯಾಲಯದ ಅನುಮೋದನೆ ಬಳಿಕ ಶಿಫಾರಸುಗಳನ್ನು ದೇಶಾದ್ಯಂತ ಜಾರಿಗೆ ತರಲಾಗುವುದು ಎಂದು ತಿಳಿಸಿದ್ದಾರೆ.
ಈ ವರದಿ POCSO ಕಾಯ್ದೆಯಡಿ ಹೆಚ್ಚುತ್ತಿರುವ ಅಪ್ರಾಪ್ತ ವಯಸ್ಕರ ಗರ್ಭಧಾರಣೆ, ಹದಿಹರೆಯದವರ ಸಮ್ಮತಿಯ ಸಂಬಂಧಗಳು ಹಾಗೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ನಿರ್ದೇಶನದ ಮೇರೆಗೆ ಸಿದ್ಧಪಡಿಸಲಾಗಿದೆ.
ಸಮಗ್ರ ಲೈಂಗಿಕ ಶಿಕ್ಷಣ ಎಂದರೇನು?
ಇದು ಕೇವಲ ಸಂತಾನೋತ್ಪತ್ತಿ ಅಥವಾ ಜೀವಶಾಸ್ತ್ರದ ಪಾಠವಲ್ಲ. ಸಮಗ್ರ ಲೈಂಗಿಕ ಶಿಕ್ಷಣ ಎಂದರೆ ಮಕ್ಕಳಿಗೆ ಮತ್ತು ಹದಿಹರೆಯದವರಿಗೆ ಅವರ ವಯಸ್ಸಿಗೆ ತಕ್ಕ ರೀತಿಯಲ್ಲಿ ವೈಜ್ಞಾನಿಕ ಹಾಗೂ ಆರೋಗ್ಯಕರ ಮಾಹಿತಿಯನ್ನು ನೀಡುವ ಪಠ್ಯಕ್ರಮ.
ಇದರಲ್ಲಿ ದೇಹದ ಅರಿವು, ವೈಯಕ್ತಿಕ ಸುರಕ್ಷತೆ, ಸುರಕ್ಷಿತ ಮತ್ತು ಅಸುರಕ್ಷಿತ ಸ್ಪರ್ಶ, ನೈರ್ಮಲ್ಯ, ಪ್ರೌಢಾವಸ್ಥೆಯ ಬದಲಾವಣೆಗಳು, ಸಂಬಂಧಗಳು, ಒಪ್ಪಿಗೆ (Consent), ಲಿಂಗ ಸಮಾನತೆ, ಸಂತಾನೋತ್ಪತ್ತಿ, ಆರೋಗ್ಯ, ಆನ್‌ಲೈನ್ ಸುರಕ್ಷತೆ, ಜವಾಬ್ದಾರಿಯುತ ನಿರ್ಧಾರ ತೆಗೆದುಕೊಳ್ಳುವ ಕೌಶಲ್ಯ ಇತ್ಯಾದಿ ವಿಷಯಗಳನ್ನು ಹಂತ ಹಂತವಾಗಿ ಕಲಿಸಲಾಗುತ್ತದೆ.
ತಜ್ಞರ ಸಮಿತಿಯ ಪ್ರಮುಖ ಶಿಫಾರಸುಗಳು
26 ಸದಸ್ಯರ ರಾಷ್ಟ್ರೀಯ ತಜ್ಞರ ಸಮಿತಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, TISS, NCPCR, NALSA, ವಿವಿಧ ಸಚಿವಾಲಯಗಳು, ವೈದ್ಯಕೀಯ ತಜ್ಞರು, ಕ್ಲಿನಿಕಲ್ ಮನಶ್ಶಾಸ್ತ್ರಜ್ಞರು ಹಾಗೂ ರಾಜ್ಯ ಸರ್ಕಾರಗಳ ಪ್ರತಿನಿಧಿಗಳು ಭಾಗಿಯಾಗಿದ್ದರು.
ಸಮಿತಿ ನೀಡಿರುವ ಪ್ರಮುಖ ಶಿಫಾರಸುಗಳು:
ಸಮಗ್ರ ಲೈಂಗಿಕ ಶಿಕ್ಷಣವನ್ನು ಶಾಲೆಗಳ ಮೂಲ ಪಠ್ಯಕ್ರಮದ ಭಾಗವಾಗಿಸಬೇಕು. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಜಾಗೃತಿಯನ್ನು ಪಠ್ಯದಲ್ಲಿ ಸೇರಿಸಬೇಕು. ಪ್ರಾಥಮಿಕ ಹಂತದಿಂದಲೇ ದೇಹದ ಸುರಕ್ಷತೆ, ಸ್ವಚ್ಛತೆ, ದೇಹದ ಭಾಗಗಳು ಹಾಗೂ ಸುರಕ್ಷಿತ ಮತ್ತು ಅಸುರಕ್ಷಿತ ಸ್ಪರ್ಶದ ಬಗ್ಗೆ ಕಲಿಸಬೇಕು. NCERT ದೇಶಾದ್ಯಂತ ಒಂದೇ ರೀತಿಯ ಪಠ್ಯಕ್ರಮ ಹಾಗೂ ಕಲಿಕಾ ಸಾಮಗ್ರಿಗಳನ್ನು ಸಿದ್ಧಪಡಿಸಬೇಕು. ಪ್ರತಿ ಶಾಲೆಯಲ್ಲಿ ವಿಶೇಷ ತರಬೇತಿ ಪಡೆದ ಶಿಕ್ಷಕರನ್ನು ನೇಮಿಸಬೇಕು. ಪ್ರಾಥಮಿಕ ಹಂತದಿಂದಲೇ ವಾರಕ್ಕೆ ಎರಡು ಬಾರಿ 15-20 ನಿಮಿಷಗಳ ಕಡ್ಡಾಯ ತರಗತಿಗಳನ್ನು ನಡೆಸಬೇಕು.
NEP 2020ಗೂ ಹೊಂದಾಣಿಕೆ
ಈ ಪಠ್ಯಕ್ರಮವನ್ನು ರಾಷ್ಟ್ರೀಯ ಶಿಕ್ಷಣ ನೀತಿ (NEP) 2020ಗೆ ಹೊಂದುವಂತೆ ರೂಪಿಸುವಂತೆ ಸಮಿತಿ ಸಲಹೆ ನೀಡಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಜೀವನ ಕೌಶಲ್ಯದ ಬಗ್ಗೆ, ವಿಮರ್ಶಾತ್ಮಕ ಚಿಂತನೆ ಜೊತೆ ಜವಾಬ್ದಾರಿಯುತ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹಾಗೂ ಆರೋಗ್ಯಕರ ಸಂಬಂಧಗಳ ಅರಿವು ಹೆಚ್ಚಿಸಲು ಸಾಧ್ಯವಾಗುತ್ತದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.
ಪೋಷಕರಿಗೂ ಜಾಗೃತಿ ಕಾರ್ಯಕ್ರಮ
ಈ ಶಿಕ್ಷಣ ಕೇವಲ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಬಾರದು ಎಂದು ಸಮಿತಿ ಹೇಳಿದೆ. ಪೋಷಕರು, ಪಾಲಕರು ಹಾಗೂ ಶಿಕ್ಷಕರಿಗಾಗಿ ನಿಯಮಿತ ಜಾಗೃತಿ ಸಭೆಗಳನ್ನು ಆಯೋಜಿಸಿ, ಮಕ್ಕಳ ಬೆಳವಣಿಗೆಯ ಹಂತಗಳ ಜೊತೆ ವಯಸ್ಸಿಗೆ ತಕ್ಕ ಲೈಂಗಿಕ ಶಿಕ್ಷಣದ ಮಹತ್ವ, ಮಕ್ಕಳ ಸುರಕ್ಷತೆ ಬಗ್ಗೆ ಅರಿವು ಮೂಡಿಸುವಂತೆ ಶಿಫಾರಸು ಮಾಡಲಾಗಿದೆ.
ಏಕೆ ಅಗತ್ಯ ಈ ಶಿಕ್ಷಣ?
ತಜ್ಞರ ಅಭಿಪ್ರಾಯದಲ್ಲಿ ಸಮಗ್ರ ಲೈಂಗಿಕ ಶಿಕ್ಷಣದಿಂದ:
ಮಕ್ಕಳು ಲೈಂಗಿಕ ದೌರ್ಜನ್ಯವನ್ನು ಗುರುತಿಸಲು ಸಾಧ್ಯವಾಗುತ್ತದೆ.
ಅಸುರಕ್ಷಿತ ಸಂದರ್ಭಗಳನ್ನು ವರದಿ ಮಾಡಲು ಆತ್ಮವಿಶ್ವಾಸ ಬೆಳೆಯುತ್ತದೆ.
ತಪ್ಪು ಮಾಹಿತಿಯಿಂದ ದೂರ ಉಳಿಯಬಹುದು.
ಆರೋಗ್ಯಕರ ಸಂಬಂಧಗಳ ಅರಿವು ಮೂಡುತ್ತದೆ.
ಸಂತಾನೋತ್ಪತ್ತಿ ಹಾಗೂ ಲೈಂಗಿಕ ಆರೋಗ್ಯದ ಬಗ್ಗೆ ಸರಿಯಾದ ತಿಳುವಳಿಕೆ ಸಿಗುತ್ತದೆ.
ಆನ್‌ಲೈನ್ ಅಪಾಯಗಳ ಬಗ್ಗೆ ಜಾಗೃತಿ ಹೆಚ್ಚುತ್ತದೆ.
ತಜ್ಞರು ಸ್ಪಷ್ಟಪಡಿಸಿರುವಂತೆ, ಈ ಶಿಕ್ಷಣದ ಉದ್ದೇಶ ಮಕ್ಕಳನ್ನು ಅಥವಾ ಯುವಜನರನ್ನು ಲೈಂಗಿಕ ಚಟುವಟಿಕೆಗೆ ಪ್ರೋತ್ಸಾಹಿಸುವುದಲ್ಲ; ಬದಲಾಗಿ ಅವರಿಗೆ ಸರಿಯಾದ ಮಾಹಿತಿ, ಸುರಕ್ಷತೆ ಮತ್ತು ಜೀವನ ಕೌಶಲ್ಯಗಳನ್ನು ನೀಡುವುದಾಗಿದೆ. ಈ ಪ್ರಸ್ತಾವನೆಗೆ ಸುಪ್ರೀಂ ಕೋರ್ಟ್ ಅನುಮೋದನೆ ನೀಡಿದರೆ, ಭಾರತದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಇದು ಮಹತ್ವದ ಬದಲಾವಣೆಯಾಗಿ ಪರಿಣಮಿಸುವ ಸಾಧ್ಯತೆಯಿದೆ.

