ಶ್ರೀನಗರ: ಜಮ್ಮುಕಾಶ್ಮೀರದಲ್ಲಿ ಹುತಾತ್ಮ ದಿನಾಚರಣೆಗೆ ಮುನ್ನ ಪಿಡಿಪಿ ಪಕ್ಷದ ನಾಯಕಿ, ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರನ್ನು ಪೊಲೀಸರು ಗೃಹಬಂಧನದಲ್ಲಿರಿಸಿದ್ದಾರೆಂದು ಅವರ ಪುತ್ರಿ ಇಲ್ತಿಜಾ ಮುಫ್ತಿ ರವಿವಾರ ತಿಳಿಸಿದ್ದಾರೆ.
''ಜಮ್ಮುಕಾಶ್ಮೀರ ಪೊಲೀಸರಿಗೇ ಚೆನ್ನಾಗಿ ತಿಳಿದಿರುವಂತಹ ಕಾರಣಕ್ಕಾಗಿ ನಮ್ಮನ್ನು ಹುತಾತ್ಮ ದಿನಾಚರಣೆ ಮುನ್ನಾ ದಿನ ಗೃಹಬಂಧನದಲ್ಲಿಡಲಾಗಿದೆ '' ಎಂದು ಇಲ್ತಿಜಾ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
1931ರಲ್ಲಿ ಶ್ರೀನಗರದ ಕೇಂದ್ರೀಯ ಕಾರಾಗೃಹದ ಹೊರಭಾಗದಲ್ಲಿ ಡೋಗ್ರಾ ಸೇನೆಯಿಂದ ಹತ್ಯೆಯಾದ 22 ಮಂದಿಯ ಸ್ಮರಣಾರ್ಥವಾಗಿ ಜಮ್ಮುಕಾಶ್ಮೀರದಲ್ಲಿ ಜುಲೈ 13ರಂದು ಹುತಾತ್ಮ ದಿನವನ್ನು ಆಚರಿಸಲಾಗುತ್ತದೆ. ಜಮ್ಮುಕಾಶ್ಮೀರದಲ್ಲಿ ರಾಜ್ಯ ಸರಕಾರವಿದ್ದಾಗ ಜುಲೈ 13 ಸಾರ್ವತ್ರಿಕ ರಜಾದಿನವಾಗಿತ್ತು. ಆದರೆ ಕೇಂದ್ರಾಡಳಿತ ಪ್ರದೇಶವಾದ ಬಳಿಕ 2020ರಿಂದ ಆ ದಿನವನ್ನು ಗೆಜೆಟೆಡ್ ರಜಾದಿನಗಳ ಪಟ್ಟಿಯಿಂದ ತೆಗೆದುಹಾಕಲಾಗಿತ್ತು.
''ಕಾಶ್ಮೀರದಲ್ಲಿ ತಾವು ಸ್ಥಾಪಿಸಿದ್ದೇವೆ ಎನ್ನಲಾದ ಸಹಜ ಪರಿಸ್ಥಿತಿ ಎಂದರೆ ಇದೇನು? ಸಿಧ್ರಾದಲ್ಲಿ ಮನೆಗಳನ್ನು ನೆಲಸಮಗೊಳಿಸಲು ಹಾಗೂ ತಮ್ಮ ಅನುಕೂಲಕ್ಕಾಗಿ ವಿರೋಧಿಗಳನ್ನು ಬಂಧನದಲ್ಲಿರಿಸಲು ಸ್ಥಳೀಯ ಸರಕಾರವು ಕೂಡಾ ಪೊಲೀಸರೊಂದಿಗೆ ಕೈಜೋಡಿಸಿದೆ'' ಎಂದು ಇಲ್ತಿಜಾ ಆಪಾದಿಸಿದ್ದಾರೆ.

