ಶ್ರೀನಗರ: ಮಹತ್ವದ ಆಡಳಿತಾತ್ಮಕ ನಿರ್ಧಾರವೊಂದರಲ್ಲಿ, ಲಡಾಖ್ನ ಲೆಫ್ಟಿನೆಂಟ್ ಗವರ್ನರ್ (ಎಲ್ಜಿ) ವಿ.ಕೆ.ಸಕ್ಸೇನಾ ಅವರು ಈ ಕೇಂದ್ರಾಡಳಿತ ಪ್ರದೇಶದಲ್ಲಿ ಹೊಸದಾಗಿ ರಚಿಸಲಾದ ಐದು ಜಿಲ್ಲೆಗಳ ಕಾರ್ಯ ನಿರ್ವಹಣೆಗಾಗಿ 17 ಹೊಸ ತಾಲೂಕುಗಳ ರಚನೆಗೆ ಅನುಮೋದನೆ ನೀಡಿದ್ದಾರೆ.
ಇದರೊಂದಿಗೆ ಲಡಾಖ್ನಲ್ಲಿರುವ ಒಟ್ಟು ತಾಲೂಕುಗಳ ಸಂಖ್ಯೆ 15 ರಿಂದ 32ಕ್ಕೆ ಏರಿಕೆಯಾಗಿದೆ.
ಈ ವರ್ಷದ ಎ.27ರಂದು ಹೊಸ ಜಿಲ್ಲೆಗಳ ಅಧಿಸೂಚನೆಯನ್ನು ಹೊರಡಿಸಿದ ನಂತರ ಎಲ್ಜಿ ರಚಿಸಿದ್ದ ಕೇಂದ್ರಾಡಳಿತ ಪ್ರದೇಶ ಮಟ್ಟದ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಈ ಹೊಸ ತಾಲೂಕುಗಳನ್ನು ರಚಿಸಲಾಗಿದೆ.
ಆಡಳಿತಾತ್ಮಕ ದಕ್ಷತೆಯನ್ನು ಹೆಚ್ಚಿಸಲು ಹೊಸ ತಾಲೂಕುಗಳಿಗೆ ತಕ್ಷಣವೇ ತಹಶೀಲ್ದಾರ್ಗಳನ್ನು ನೇಮಿಸುವಂತೆ ಮತ್ತು ಒಬ್ಬ ಅಧಿಕಾರಿಗೆ ಒಂದು ತಾಲೂಕಿನ ಸ್ವತಂತ್ರ ಉಸ್ತುವಾರಿಯನ್ನು ವಹಿಸುವಂತೆ ಸಕ್ಸೇನಾ ಅವರು ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ.
ಭೌಗೋಳಿಕ ವಿಸ್ತೀರ್ಣದ ದೃಷ್ಟಿಯಿಂದ ಭಾರತದ ಅತಿ ದೊಡ್ಡ ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದಾಗಿರುವ ಲಡಾಖ್ ದುರ್ಗಮ ಭೂಪ್ರದೇಶ,ವಿರಳ ಜನಸಂಖ್ಯೆ ಮತ್ತು ದೂರದ ಜನವಸತಿ ಪ್ರದೇಶಗಳ ಕಾರಣದಿಂದಾಗಿ ದೀರ್ಘಕಾಲದಿಂದ ಆಡಳಿತಾತ್ಮಕ ಸವಾಲುಗಳನ್ನು ಎದುರಿಸುತ್ತಿದೆ.
17 ಹೊಸ ತಾಲೂಕುಗಳ ರಚನೆಯು ನಾಗರಿಕರು ಸರ್ಕಾರಿ ಸೇವೆಗಳನ್ನು ಪಡೆಯಲು ಪ್ರಯಾಣಿಸುವ ದೂರವನ್ನು (ಸಾಮಾನ್ಯವಾಗಿ 300 ಕಿ.ಮೀ.ಗಿಂತ ಹೆಚ್ಚು) ಗಣನೀಯವಾಗಿ ಕಡಿಮೆ ಮಾಡುತ್ತದೆ ಮತ್ತು ಸಾರ್ವಜನಿಕ ಸೇವೆಗಳನ್ನು ವೇಗವಾಗಿ ಹಾಗೂ ಹೆಚ್ಚು ಪರಿಣಾಮಕಾರಿಯಾಗಿ ತಲುಪಿಸುವುದನ್ನು ಖಚಿತಪಡಿಸುತ್ತದೆ ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ.

