HEALTH TIPS

FIFA ವಿಶ್ವಕಪ್ ಪ್ರಸಾರ ಹಕ್ಕು ಬಿಡ್‌ ನಲ್ಲಿ ವಂಚನೆ ಆರೋಪ | ಅಮೆರಿಕ ಮೂಲದ ಹೂಡಿಕೆದಾರನ ವಿರುದ್ಧ ಪ್ರಕರಣ

 ಹೈದರಾಬಾದ್: ಫಿಫಾ ವಿಶ್ವಕಪ್ ಮಾಧ್ಯಮ ಪ್ರಸಾರ ಹಕ್ಕು ಪಡೆಯಲು ಸಲ್ಲಿಸಲಾಗಿದ್ದ ಬಿಡ್‌ ಪ್ರಕ್ರಿಯೆಯನ್ನು ನಕಲಿ ಹಣಕಾಸು ದಾಖಲೆಗಳ ಮೂಲಕ ಹಳಿ ತಪ್ಪಿಸಿ ತನಗೆ ವಂಚಿಸಲಾಗಿದೆ ಎಂದು ಆರೋಪಿಸಿ ಹೈದರಾಬಾದ್ ಮೂಲದ ಉದ್ಯಮಿಯೊಬ್ಬರು ಅಮೆರಿಕ ಮೂಲದ ಹೂಡಿಕೆದಾರ ಹಾಗೂ ಇತರರ ವಿರುದ್ಧ ತೆಲಂಗಾಣ ಕೇಂದ್ರ ಅಪರಾಧ ಠಾಣೆ (ಸಿಸಿಎಸ್‌)ಗೆ ದೂರು ನೀಡಿದ್ದಾರೆ.


ದೂರಿನ ಆಧಾರದಲ್ಲಿ ಭಾರತೀಯ ನ್ಯಾಯ ಸಂಹಿತೆಯಡಿ ವಂಚನೆ, ಫೋರ್ಜರಿ ಮತ್ತು ನಕಲಿ ದಾಖಲೆಗಳ ಬಳಕೆಗೆ ಸಂಬಂಧಿಸಿದ ಪ್ರಕರಣ ದಾಖಲಾಗಿದೆ.

ಹೈದರಾಬಾದ್‌ನ ಮಾಧ್ಯಮ ಮತ್ತು ಕಾರ್ಯಕ್ರಮ ನಿರ್ವಹಣಾ ಸಂಸ್ಥೆ ಮೆಟಲಾಯ್ಡ್ ಪ್ರೊಡಕ್ಷನ್ಸ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಪ್ರೀತೀಶ್ ಕೊಲ್ಲಾಟಿ ಸಲ್ಲಿಸಿರುವ ದೂರಿನಲ್ಲಿ, ಸ್ಯಾಮ್ ಮ್ಹಾಸ್ಕೆ ಎಂದೂ ಕರೆಯಲಾಗುವ ಉದ್ಯಮಿ ದಿಲೀಪ್ ಮ್ಹಾಸ್ಕೆ ಹಾಗೂ ಇತರರು ನಕಲಿ ಹಣಕಾಸು ದಾಖಲೆಗಳನ್ನು ಸಲ್ಲಿಸುವ ಮೂಲಕ ತಮ್ಮ ಸಂಸ್ಥೆಯ ಫಿಫಾ ವಿಶ್ವಕಪ್ ಪ್ರಸಾರ ಹಕ್ಕಿನ ಬಿಡ್ ಅನ್ನು ಹಳಿ ತಪ್ಪಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ದೂರಿನ ಪ್ರಕಾರ, ದಿಲೀಪ್ ಮ್ಹಾಸ್ಕೆ ತನಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಫಿಫಾ ಅಧ್ಯಕ್ಷ ಜಿಯಾನಿ ಇನ್ಫ್ಯಾಂಟಿನೊ ಅವರೊಂದಿಗೆ ನಿಕಟ ಸಂಪರ್ಕವಿದೆ ಎಂದು ಹೇಳಿಕೊಂಡಿದ್ದ. ಇದೇ ವಿಶ್ವಾಸದ ಆಧಾರದಲ್ಲಿ ಮೆಟಲಾಯ್ಡ್ ಸಂಸ್ಥೆ, ಫಿಫಾ ವಿಶ್ವಕಪ್ ಮಾಧ್ಯಮ ಪ್ರಸಾರ ಹಕ್ಕಿಗೆ ಸಂಬಂಧಿಸಿದ ಹೂಡಿಕೆ ಪ್ರಕ್ರಿಯೆಯಲ್ಲಿ ಆತನೊಂದಿಗೆ ಒಪ್ಪಂದಕ್ಕೆ ಮುಂದಾಗಿತ್ತು.

ಪ್ರೀತೀಶ್ ಕೊಲ್ಲಾಟಿ ದೂರಿನಲ್ಲಿ ತಿಳಿಸಿರುವಂತೆ, ಮೆಟಲಾಯ್ಡ್ ಸಂಸ್ಥೆಯು ಭಾರತದ ರಾಷ್ಟ್ರೀಯ ಪ್ರಸಾರ ಸಂಸ್ಥೆಯ ಸಹಯೋಗದೊಂದಿಗೆ ಭಾರತದ ಉಪಖಂಡದಲ್ಲಿ ಫಿಫಾ ವಿಶ್ವಕಪ್ ಪ್ರಸಾರ ಹಕ್ಕು ಪಡೆಯಲು 2025ರ ಸೆಪ್ಟೆಂಬರ್‌ನಲ್ಲಿ 70.57 ದಶಲಕ್ಷ ಡಾಲರ್‌ (ಸುಮಾರು 760 ಕೋಟಿ ರೂ.) ಮೊತ್ತದ ಯಶಸ್ವಿ ಬಿಡ್ ಸಲ್ಲಿಸಿತ್ತು.

2025ರ ಸೆಪ್ಟೆಂಬರ್‌ 18ರಂದು ಫಿಫಾ, ಮೆಟಲಾಯ್ಡ್ ಸಂಸ್ಥೆಯು ಯಶಸ್ವಿ ಬಿಡ್‌ದಾರನಾಗಿ ಹೊರಹೊಮ್ಮಿದ್ದು, ತನ್ನ ನಿಯಮಗಳು ಮತ್ತು ಷರತ್ತುಗಳಿಗೆ ಅನುಗುಣವಾಗಿ ಪ್ರತ್ಯೇಕ ಗುತ್ತಿಗೆ ಒಪ್ಪಂದಕ್ಕೆ ಮುಂದಾಗಬಹುದಾಗಿದೆ ಎಂದು ತಿಳಿಸಿತ್ತು. ಟೆಂಡರ್ ಪ್ರಕ್ರಿಯೆಗೆ ಪ್ರವೇಶಿಸುವ ಮುನ್ನವೇ ಮೆಟಲಾಯ್ಡ್ ಸಂಸ್ಥೆಯು ಭಾರತದ ರಾಷ್ಟ್ರೀಯ ಪ್ರಸಾರ ಸಂಸ್ಥೆಯೊಂದಿಗೆ ತಾತ್ವಿಕ ಒಡಂಬಡಿಕೆ ಮಾಡಿಕೊಂಡಿತ್ತು. ಆದರೆ, ಶಾಸನಾತ್ಮಕ ಅನುಮತಿಗಳು ಹಾಗೂ ಆಂತರಿಕ ಒತ್ತಡಗಳ ಕಾರಣದಿಂದ ರಾಷ್ಟ್ರೀಯ ಪ್ರಸಾರ ಸಂಸ್ಥೆ ಬಳಿಕ ಪ್ರಸ್ತಾವಿತ ಒಡಂಬಡಿಕೆಯಿಂದ ಹಿಂದೆ ಸರಿಯಿತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದರಿಂದ ಯೋಜನೆಗೆ ಅಗತ್ಯ ಹಣಕಾಸು ಒದಗಿಸಲು ಮೆಟಲಾಯ್ಡ್ ಸಂಸ್ಥೆ ಹೊಸ ಹೂಡಿಕೆದಾರರ ಹುಡುಕಾಟ ಆರಂಭಿಸಿತು. ಈ ವೇಳೆ ಪರಸ್ಪರ ಪರಿಚಯದ ವ್ಯಕ್ತಿಯೊಬ್ಬರು ದಿಲೀಪ್ ಮ್ಹಾಸ್ಕೆಯನ್ನು ಪರಿಚಯಿಸಿದ್ದರು. ತಾನು ಸಾಕಷ್ಟು ಹಣಕಾಸು ಸಂಪನ್ಮೂಲ ಹೊಂದಿರುವ ಹಾಗೂ ಉತ್ತಮ ಸಂಪರ್ಕಗಳಿರುವ ಉದ್ಯಮಿ ಎಂದು ದಿಲೀಪ್ ಮ್ಹಾಸ್ಕೆ ತನ್ನನ್ನು ಪರಿಚಯಿಸಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.

ಇದೇ ವೇಳೆ ಫಿಫಾ ನಾಯಕತ್ವದೊಂದಿಗೆ ಸಂವಾದ ನಡೆಸುತ್ತಿರುವ ಭಾವಚಿತ್ರ ಸೇರಿದಂತೆ ಹಲವು ಗಣ್ಯ ಸಾರ್ವಜನಿಕ ವ್ಯಕ್ತಿಗಳೊಂದಿಗಿನ ಭಾವಚಿತ್ರಗಳನ್ನು ಪ್ರದರ್ಶಿಸಿ ವಿಶ್ವಾಸ ಮೂಡಿಸಿದ್ದಾನೆ. ಈ ನಿರೂಪಣೆಗಳ ಆಧಾರದಲ್ಲಿ ಮಾಧ್ಯಮ ಪ್ರಸಾರ ಹಕ್ಕು ಪಡೆಯಲು ಪ್ರಸ್ತಾವಿತ 50 ದಶಲಕ್ಷ ಡಾಲರ್ ಹೂಡಿಕೆಗಾಗಿ ದಿಲೀಪ್ ಮ್ಹಾಸ್ಕೆ ಮಾಲೀಕತ್ವದ ಅಮೆರಿಕದ ವಾಷಿಂಗ್ಟನ್ ಮೂಲದ ಅವ್ನಿ ಎಲ್‌ಎಲ್‌ಸಿ ಸಂಸ್ಥೆಯೊಂದಿಗೆ ಪರ್ಯಾಯ ಒಪ್ಪಂದ ಮಾಡಿಕೊಳ್ಳಲಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಹೂಡಿಕೆ ಪ್ರಸ್ತಾವನೆಗೆ ಪೂರಕವಾಗಿ ದಿಲೀಪ್ ಮ್ಹಾಸ್ಕೆ ಹಾಗೂ ಆತನಿಗೆ ಸಂಬಂಧಿಸಿದ ಕಂಪನಿಗಳು ಫಿಫಾಗೆ ವಿವಿಧ ಹಣಕಾಸು ದಾಖಲೆಗಳನ್ನು ಸಲ್ಲಿಸಿದ್ದವು. ಆದರೆ, ಫಿಫಾದ ಪರಿಶೀಲನಾ ಪ್ರಕ್ರಿಯೆ ವೇಳೆ ಆ ದಾಖಲೆಗಳು ತಿರುಚಲ್ಪಟ್ಟಿವೆ ಎಂಬುದು ಬೆಳಕಿಗೆ ಬಂದಿತ್ತು. ಇದರಿಂದ ಹೂಡಿಕೆದಾರನ ಹಣಕಾಸು ಸಾಮರ್ಥ್ಯದ ಬಗ್ಗೆ ಪ್ರಶ್ನೆಗಳು ಉದ್ಭವಿಸಿ, ಪ್ರಸಾರ ಹಕ್ಕಿನ ಪ್ರಕ್ರಿಯೆಗೆ ಧಕ್ಕೆಯಾಯಿತು ಎಂದು ದೂರಿನಲ್ಲಿ ಹೇಳಲಾಗಿದೆ.

ದಿಲೀಪ್ ಮ್ಹಾಸ್ಕೆ ಸಲ್ಲಿಸಿದ ನಕಲಿ ದಾಖಲೆಗಳಿಂದ ಮೆಟಲಾಯ್ಡ್ ಸಂಸ್ಥೆಗೆ ಅಂದಾಜು 2 ಕೋಟಿ ರೂ. ನಷ್ಟವಾಗಿದ್ದು, ಸಂಸ್ಥೆಯ ವಿಶ್ವಾಸಾರ್ಹತೆಗೂ ಧಕ್ಕೆಯಾಗಿದೆ. ಇದರಿಂದ ಫಿಫಾ ವಿಶ್ವಕಪ್ ಮಾಧ್ಯಮ ಪ್ರಸಾರ ಹಕ್ಕಿನ ಯಶಸ್ವಿ ಬಿಡ್‌ದಾರನಾಗಿ ಹೊರಹೊಮ್ಮಿದ್ದರೂ, ಆ ಸ್ಥಾನಕ್ಕೆ ಸಮಸ್ಯೆ ಉಂಟಾಯಿತು. ಒಂದು ವೇಳೆ ಫಿಫಾ ಆದಾಯ ನಷ್ಟವಾಗಿದೆ ಎಂದು ದಾವೆ ಹೂಡಿದರೆ, ಅದರ ಪರಿಣಾಮವನ್ನು ತಮ್ಮ ಸಂಸ್ಥೆಯೇ ಎದುರಿಸಬೇಕಾಗುತ್ತದೆ ಎಂದು ಪ್ರೀತೀಶ್ ಕೊಲ್ಲಾಟಿ ದೂರಿನಲ್ಲಿ ಆರೋಪಿಸಿದ್ದಾರೆ.

ಈ ಪ್ರಕರಣದಿಂದ ಕನಿಷ್ಠ 800 ದಶಲಕ್ಷ ಡಾಲರ್ ನಷ್ಟ ಉಂಟಾಗುವ ಸಾಧ್ಯತೆ ಇದೆ ಎಂದು ಪ್ರೀತೀಶ್ ಕೊಲ್ಲಾಟಿ ಅಂದಾಜಿಸಿರುವುದಾಗಿ ತೆಲಂಗಾಣ ಕೇಂದ್ರ ಅಪರಾಧ ಠಾಣೆಯ ಉಪ ಪೊಲೀಸ್ ಆಯುಕ್ತ ಚೈತನ್ಯ ಕುಮಾರ್ ತಿಳಿಸಿದ್ದಾರೆ.

"ಈ ಹಂತದಲ್ಲಿ ದಿಲೀಪ್ ಮ್ಹಾಸ್ಕೆ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಆತನ ವಿರುದ್ಧ ಲುಕೌಟ್ ನೋಟಿಸ್ ಜಾರಿಗೊಳಿಸಲಾಗುವುದು. ಆತನ ಗಡೀಪಾರಿಗೆ ಸಂಬಂಧಿಸಿದ ಪ್ರಕ್ರಿಯೆಯ ಮೊದಲ ಹಂತ ಇದಾಗಿದೆ" ಎಂದು ಅವರು ಹೇಳಿದ್ದಾರೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries