ಹೈದರಾಬಾದ್: ಮೂರು ವಾರಗಳ ಹಿಂದೆ ಸ್ವಿಝರ್ಲೆಂಡ್ ಗೆ ರಜಾಕಾಲದ ಪ್ರವಾಸಕ್ಕೆಂದು ತೆರಳಿದ್ದ ಹೈದರಾಬಾದ್ ಮೂಲದ ಉದ್ಯಮಿ ಹಾಗೂ ಅವರ ಪತ್ನಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದ್ದ ಪ್ರಕರಣಕ್ಕೆ ತಿರುವು ದೊರೆತಿದ್ದು, ಹೂಡಿಕೆದಾರರಿಂದ ಕೋಟ್ಯಂತರ ರೂಪಾಯಿ ಹಣವನ್ನು ಪಡೆದು ಅವರು ದೇಶದಿಂದ ಪರಾರಿಯಾಗಿರಬಹುದು ಎಂಬ ಆರೋಪಗಳ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು NDTV ವರದಿ ಮಾಡಿದೆ.
ಉದ್ಯಮಿ ಪಬ್ಬ ಚಂದ್ರಶೇಖರ್ಹಾಗೂ ಅವರ ಪತ್ನಿ ಪಬ್ಬ ಸ್ವಪ್ನ (42) ಜೂನ್ 22ರಂದು ಸ್ವಿಝರ್ಲೆಂಡ್ ಗೆ ರಜಾಕಾಲದ ಪ್ರವಾಸಕ್ಕೆಂದು ತೆರಳಿದ್ದರು ಎಂದು ಅವರ ಪುತ್ರಿ ಶ್ರೇಯಾ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿತ್ತು. ಅವರು ಆರಂಭದಲ್ಲಿ ಕುಟುಂಬದ ಸದಸ್ಯರ ಸಂಪರ್ಕದಲ್ಲಿದ್ದರು. ಆದರೆ, ಜುಲೈ 8ರ ಬಳಿಕ ಅವರು ನಮ್ಮ ಸಂಪರ್ಕದಲ್ಲಿಲ್ಲ ಎಂದೂ ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಅವರನ್ನು ಸಂಪರ್ಕಿಸಲು ಪದೇ ಪದೇ ಪ್ರಯತ್ನಿಸಿದರೂ, ಅವರಿಬ್ಬರ ಮೊಬೈಲ್ ಫೋನ್ ಗಳೂ ಸ್ವಿಚ್ಡ್ ಆಫ್ ಆಗಿವೆ ಎಂದು ದೂರಿನಲ್ಲಿ ಹೇಳಲಾಗಿತ್ತು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ದಂಪತಿಗಳ ಎಲ್ಲಿದ್ದಾರೆ ಎಂಬ ಸುಳಿವನ್ನು ಪತ್ತೆ ಹಚ್ಚಲು ಹಾಗೂ ಅವರು ಸ್ವಿಝರ್ಲೆಂಡ್ ಪ್ರವೇಶಿಸಿದ್ದಾರೆಯೇ ಎಂಬುದನ್ನು ತಿಳಿಯಲು ದಂಪತಿಗಳ ಪ್ರಯಾಣದ ವಿವರ ಮತ್ತು ವಲಸೆ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ಕಳೆದ 5 ವರ್ಷಗಳಲ್ಲಿ ಚಂದ್ರಶೇಖರ್ ಹಾಗೂ ಅವರ ಪತ್ನಿ ಸ್ವಪ್ನ ವಿವಿಧ ವೈಯಕ್ತಿಕ ಮತ್ತು ವ್ಯಾವಹಾರಿಕ ಅಗತ್ಯಗಳನ್ನು ಮುಂದು ಮಾಡಿ ಸುಮಾರು 50 ಕೋಟಿ ರೂ. ಅನ್ನು ಜನರಿಂದ ಸಂಗ್ರಹಿಸಿದ್ದು, ಅದಕ್ಕೆ ಆಕರ್ಷಕ ಮರುಪಾವತಿ ನೀಡಲಾಗುವುದು ಎಂದು ಭರವಸೆ ನೀಡಿದ್ದರು ಎಂಬ ಆರೋಪಗಳ ಕುರಿತೂ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಆದರೆ, ಈವರೆಗೆ ದಂಪತಿಗಳ ವಿರುದ್ಧ ಯಾವುದೇ ಅಧಿಕೃತ ವಂಚನೆ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿಲ್ಲ.
ನಾಪತ್ತೆ ಪ್ರಕರಣದ ಕುರಿತು ತನಿಖೆ ಮುಂದುವರಿಯಲಿದ್ದು, ಸ್ವಯಂಪ್ರೇರಿತವಾಗಿ ನಾಪತ್ತೆಯಾಗಿರುವುದು ಹಾಗೂ ಹಣಕಾಸು ವಂಚನೆ ಸೇರಿದಂತೆ ಎಲ್ಲ ಸಂಭವನೀಯ ಆಯಾಮಗಳಲ್ಲಿ ತನಿಖೆಯನ್ನು ನಡೆಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

