ನವದೆಹಲಿ: ಭಾರತದ 'ಆಕ್ಟ್ ಈಸ್ಟ್' ನೀತಿ, 'ಮಹಾಸಾಗರ್' ದೃಷ್ಟಿಕೋನ ಮತ್ತು ಮುಕ್ತ ವ್ಯಾಪಾರಕ್ಕೆ ಒತ್ತು ನೀಡುವ ಉದ್ದೇಶದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂಡೋನೇಷ್ಯಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ದೇಶಗಳಿಗೆ ಪ್ರವಾಸ ಕೈಗೊಂಡಿದ್ದಾರೆ.
'ಹಿಂದೂ ಮಹಾಸಾಗರದ ಪೂರ್ವ ಮತ್ತು ದಕ್ಷಿಣ ಭಾಗದಲ್ಲಿರುವ ಇಂಡೋನೇಷ್ಯಾ ಮತ್ತು ಆಸ್ಟ್ರೇಲಿಯಾ ಹಾಗೂ ನಂತರ ನ್ಯೂಜಿಲೆಂಡ್‌ಗೆ ನಾನು ನೀಡುತ್ತಿರುವ ಈ ಭೇಟಿಯು ಭಾರತದ ಜಾಗತಿಕ ದೃಷ್ಟಿಕೋನಕ್ಕೆ ಹೊಸ ವೇಗ ನೀಡಲಿದೆ' ಎಂದು ಮೋದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂಡೋನೇಷ್ಯಾಕ್ಕೆ ಜುಲೈ 6 ರಿಂದ 8ರವರೆಗೆ, 8ರಿಂದ 10ರವರೆಗೆ ಆಸ್ಟ್ರೇಲಿಯಾ, ಜುಲೈ 10 ರಿಂದ 11ರವರೆಗೆ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಇಂಡೋನೇಷ್ಯಾದಲ್ಲಿ ಸಾಂಸ್ಕೃತಿಕ ಮತ್ತು ರಕ್ಷಣಾ ಬಾಂಧವ್ಯ
ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಅವರ ಆಹ್ವಾನದ ಮೇರೆಗೆ ಮೋದಿ ಅವರು ಮೊದಲು ಜಕಾರ್ತಾಕ್ಕೆ ಭೇಟಿ ನೀಡುತ್ತಿದ್ದಾರೆ. 2025ರ ಜನವರಿಯಲ್ಲಿ ನಡೆದ ಭಾರತದ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಅಧ್ಯಕ್ಷ ಪ್ರಬೋವೊ ಅವರು ಮುಖ್ಯ ಅತಿಥಿಯಾಗಿದ್ದರು ಎಂಬುದು ಗಮನಾರ್ಹ.
ಉಭಯ ದೇಶಗಳ ನಡುವಿನ ಸಾಂಸ್ಕೃತಿಕ ಬಾಂಧವ್ಯದ ಸಂಕೇತವಾಗಿ ಪ್ರಧಾನಿ ಮೋದಿ ಅವರು ಯೋಗ್ಯಕರ್ತಾದಲ್ಲಿರುವ ಪ್ರಸಿದ್ಧ 'ಪ್ರಂಬನನ್' ದೇವಸ್ಥಾನದ ಸಂಕೀರ್ಣಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿನ ಭಾರತೀಯ ಸಮುದಾಯದವರೊಂದಿಗೂ ಅವರು ಸಂವಾದ ನಡೆಸಲಿದ್ದಾರೆ.
ಆಸ್ಟ್ರೇಲಿಯಾದೊಂದಿಗೆ ವ್ಯೂಹಾತ್ಮಕ ಪಾಲುದಾರಿಕೆ
ಇಂಡೋನೇಷ್ಯಾ ಪ್ರವಾಸ ಮುಗಿಸಿ ಪ್ರಧಾನಿ ಮೋದಿ ಅವರು ಆಸ್ಟ್ರೇಲಿಯಾದ ಮೆಲ್ಬರ್ನ್‌ಗೆ ತೆರಳಲಿದ್ದಾರೆ. ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆಗಳು ನಡೆಯಲಿವೆ.
ರಕ್ಷಣೆ, ಭದ್ರತೆ, ಜಾಗತಿಕ ವ್ಯಾಪಾರ, ಹೂಡಿಕೆ, ಶಿಕ್ಷಣ ಮತ್ತು ಉದ್ಯೋಗಾವಕಾಶಗಳ ವಿಸ್ತರಣೆ ಕುರಿತು ಮಾತುಕತೆ ನಡೆಸಲಿದ್ದಾರೆ.
ಉದಯೋನ್ಮುಖ ತಂತ್ರಜ್ಞಾನಗಳು ಹಾಗೂ ಕ್ರೀಡಾ, ವಿಜ್ಞಾನ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರವನ್ನು ಹೆಚ್ಚಿಸುವ ಕುರಿತು ಉಭಯ ನಾಯಕರು ಚರ್ಚಿಸಲಿದ್ದಾರೆ. ಮೆಲ್ಬೋರ್ನ್‌ನಲ್ಲಿರುವ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಲಿದ್ದಾರೆ.
ನ್ಯೂಜಿಲೆಂಡ್‌ನೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ
ಪ್ರವಾಸದ ಕೊನೆಯ ಹಂತವಾಗಿ ಪ್ರಧಾನಿ ಆಕ್ಲೆಂಡ್‌ಗೆ ಭೇಟಿ ನೀಡಲಿದ್ದಾರೆ. ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ಅವರೊಂದಿಗೆ ಆರ್ಥಿಕ ಮತ್ತು ವಾಣಿಜ್ಯ ಸಂಬಂಧಗಳ ಸುಧಾರಣೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ.
ಉಭಯ ದೇಶಗಳ ನಡುವೆ ವ್ಯಾಪಾರ ವಹಿವಾಟನ್ನು ಸುಲಭಗೊಳಿಸಲು ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲು ಎರಡು ದೇಶಗಳು ಬದ್ಧವಾಗಿವೆ.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ನ್ಯೂಜಿಲೆಂಡ್‌ನ ಭಾರತೀಯ ಸಮುದಾಯದ ಕಾರ್ಯಕ್ರಮದಲ್ಲೂ ಪ್ರಧಾನಿ ಪಾಲ್ಗೊಳ್ಳಲಿದ್ದಾರೆ. ಉಭಯ ದೇಶಗಳ ಈ ಬಾಂಧವ್ಯಕ್ಕೆ 2025ರ ಮಾರ್ಚ್ ತಿಂಗಳಿನಲ್ಲಿ ನ್ಯೂಜಿಲೆಂಡ್ ಪ್ರಧಾನಿ ಭಾರತಕ್ಕೆ ನೀಡಿದ್ದ ಭೇಟಿಯೇ ಗಟ್ಟಿ ಅಡಿಪಾಯ ಹಾಕಿಕೊಟ್ಟಿತ್ತು ಎಂದು ಮೋದಿ ಸ್ಮರಿಸಿದ್ದಾರೆ.

