ಕಾಸರಗೋಡು: ವಾಹನ ಚಾಲನಾ ಪರವಾನಗಿ ನಕಲಿಯಾಗಿ ತಯಾರಿಸಿ ಕೊಡುವ ಜಾಲದ ಬಗ್ಗೆ ಲಭಿಸಿದ ಮಾಹಿತಿಯನ್ವಯ ವೆಳ್ಳರಿಕುಂಡು ಸಾರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಬಾಲಕನನ್ನು ವಶಕ್ಕೆ ತೆಗೆದುಕೊಂಡಿದ್ದು, ಜುವೆನೈಲ್ ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಾರಿಗೆ ಇಲಾಖೆಯ ಎನ್‍ಫೋರ್ಸ್‍ಮೆಂಟ್ ಸ್ಕ್ವಾಡ್ ಮತ್ತುವೆಳ್ಳರಿಕುಂಡು ಆರ್.ಟಿ.ಓ ಕಚೇರಿಯ ಅಧಿಕಾರಿಗಳು ವೆಳ್ಳರಿಕುಂಡ್‍ನಲ್ಲಿ ವಾಹನ ತಪಾಸಣೆಯಲ್ಲಿ ತೊಡಗಿದ್ದ ವೇಳೆ ಆ ಹಾದಿಯಾಗಿ ಆಗಮಿಸಿದ ದ್ವಿಚಕ್ರ ವಾಹನವನ್ನು ತಡೆದು ನಿಲ್ಲಿಸಿ ಅದನ್ನು ಚಲಾಯಿಸುತ್ತಿದ್ದ ಅಪ್ರಾಪ್ತನ ಡ್ರೈವಿಂಗ್ ಲೈಸನ್ಸ್ ಪರಿಶೀಲಿಸಿದಾಗ ಅದು ನಕಲಿಯಾಗಿ ತಯಾರಿಸಿರುವುದು ಪತ್ತೆಯಾಗಿದೆ. ಅತನ ಶಾಲಾ ಸರ್ಟಿಫಿಕೇಟ್ ಪರಿಶೀಲಿಸಿದಾಗ 17ವರ್ಷ ಪ್ರಾಯ ಖಚಿತಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ನಕಲಿ ಡ್ರೈವಿಂಗ್ ಲೈಸನ್ಸ್ ಹೊಂದಿದ್ದ ಬಾಲಕನನ್ನು ಮೋಟಾರು ವಾಹನ ಇಲಾಖೆಯ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಈತನಿಗೆ ಲೈಸನ್ಸ್ ತಯಾರಿಸಿ ನೀಡಿದ ಜಾಲದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.

