ತಿರುವನಂತಪುರ: ಇಲ್ಲಿನ ಅದಾನಿ ವಿಳಿಂಜಮ್ ಪೊರ್ಟ್ ಪ್ರೈವೆಟ್ ಲಿಮಿಟೆಡ್ ಕಂಪನಿಯ (ಎವಿಪಿಪಿಎಲ್) ಶೇ 49ರಷ್ಟು ಷೇರುಗಳನ್ನು ಸ್ವಿಟ್ಜರ್‌ಲೆಂಡ್ ಮೂಲದ ಮೆಡಿಟರೇನಿಯನ್ ಶಿಪ್ಪಿಂಗ್ ಕಂಪನಿಗೆ (ಎಂಎಸ್‌ಸಿ) ವರ್ಗಾಯಿಸುವ ಪ್ರಸ್ತಾವದ ಕುರಿತು ಪ್ರತಿಕ್ರಿಯಿಸಿರುವ ಸಂಸದ ಶಶಿ ತರೂರ್, 'ಈ ಯೋಜನೆಯಲ್ಲಿ ಚೀನಾದ ಕಂಪನಿಗಳ ಒಳಗೊಳ್ಳುವಿಕೆಯ ಸಾಧ್ಯತೆ ಇದ್ದಿದ್ದರಿಂದ ಈಗಾಗಲೇ ಹಲವು ಬಾರಿ ಬಿಡ್ಡಿಂಗ್ ವಿಫಲವಾಗಿದೆ, ಸರ್ಕಾರ ಅಂತಿಮ ಅನುಮೋದನೆ ನೀಡುವ ಮುನ್ನ ಈ ಅಂಶವನ್ನು ಸಮಗ್ರವಾಗಿ ಪರಿಶೀಲಿಸಬೇಕು' ಎಂದು ಹೇಳಿದ್ದಾರೆ.
'ಎವಿಪಿಪಿಎಲ್ ಷೇರುಗಳನ್ನು ಎಂಎಸ್‌ಸಿಗೆ ವರ್ಗಾಯಿಸುವ ಪ್ರಸ್ತಾವವನ್ನು ಸರ್ಕಾರ ಸೂಕ್ಷ್ಮವಾಗಿ ಪರಿಶೀಲಿಸಲಿದೆ' ಎಂದು ಇತ್ತೀಚೆಗೆ ಕೇರಳಂ ಮುಖ್ಯಮಂತ್ರಿ ವಿ.ಡಿ.ಸತೀಶನ್ ಹೇಳಿದ್ದರು.
'ಬಂದರು ರಾಷ್ಟ್ರೀಯ ಸಂಪತ್ತು ಮತ್ತು ರಾಷ್ಟ್ರೀಯ ಭದ್ರತೆಯ ವಿಚಾರ ಆಗಿರುವುದರಿಂದ ಟೆಂಡರ್ ಅಂತಿಮಗೊಳಿಸುವ ಮೊದಲು ಎಲ್ಲ ಆಯಾಮಗಳಿಂದ ಪರಿಶೀಲನೆ ನಡೆಸುವುದು ಅಗತ್ಯ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನುಮತಿ ನೀಡಿದ ನಂತರವೇ ಷೇರುಗಳ ವರ್ಗಾವಣೆಯನ್ನು ಅನುಮೋದಿಸಬಹುದು. ಇದು ಸಾಮಾನ್ಯ ಕಾನೂನು ವಿಧಾನ. ಕೇರಳಂ ಮುಖ್ಯಮಂತ್ರಿ ವಿ.ಡಿ. ಸತೀಶನ್ ಮತ್ತು ವಿರೋಧ ಪಕ್ಷದ ನಾಯಕ ಪಿಣರಾಯಿ ವಿಜಯನ್ ಇಬ್ಬರೂ ಇದನ್ನೇ ಹೇಳಿದ್ದಾರೆ' ಎಂದು ತರೂರ್ ದೆಹಲಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.
'ಬಂದರು ಅಭಿವೃದ್ಧಿಯ ವಿಚಾರದಲ್ಲೂ ಯಾರ ವಿರೋಧವೂ ಇಲ್ಲ. ಆದರೆ, ವಿಳಿಂಜಮ್ ಬಂದರಿಗೆ ಕೇರಳ ಸರ್ಕಾರ ಭೂಮಿ ನೀಡಿರುವುದರಿಂದ ಮತ್ತು ಪ್ರಪಂಚದ ಎಲ್ಲ ಬಂದರು ಕಂಪನಿಗಳೊಂದಿಗೆ ಇಲ್ಲಿಂದ ಸೇವೆ ವಿಸ್ತರಿಸುವ ಉದ್ದೇಶ ಇರುವುದರಿಂದ ಇದರಲ್ಲಿ ಕೇರಳ ಸರ್ಕಾರ ಸ್ಥಾಪಿತ ಹಿತಾಸಕ್ತಿ ಅಡಗಿದೆ' ಎಂದು ತರೂರ್ ಹೇಳಿದರು.

