ಕಾಸರಗೋಡು: ಪ್ರತಿ ಮನೆಯಲ್ಲಿ ಕನ್ನಡದ ಬಗ್ಗೆ ಮಕ್ಕಳಲ್ಲಿ ಪ್ರೀತಿ ಹುಟ್ಟುವ ರೀತಿಯ ವಾತಾವರಣವನ್ನು ಪೋಷಕರು ನಿರ್ಮಿಸಬೇಕಾಗಿದ್ದು, ಇದರಿಂದ ಕನ್ನಡ ಭಾಷೆ, ಸಂಸ್ಕøತಿ ಉಳಿಯಲು ಸಾಧ್ಯ ಎಂಬುದಾಗಿ ಎಡನೀರು ಶ್ರೀಸಚ್ಚಿದಾನಂದ ಭಾರತೀ ಸ್ವಾಮೀಜಿ ತಿಳಿಸಿದ್ದಾರೆ.
ಅವರು ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.), ಕನ್ನಡ ಭವನ ಪ್ರಕಾಶನ ಹಾಗೂ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ ಸಂಯುಕ್ತ ಆಶ್ರಯದಲ್ಲಿ ಕನ್ನಡ ಭವನ ಸಭಾಂಗಣದ ದಿ. ಡಾ. ಲಲಿತಾ ಎಸ್. ನ್. ಭಟ್ ವೇದಿಕೆಯಲ್ಲಿ 'ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನ' ಉದ್ಘಾಟಿಸಿ ಆಶೀರ್ವಚನ ನೀಡಿದರು.
ಕನ್ನಡದ ಬಗ್ಗೆಮಕ್ಕಳಲ್ಲಿ ಪ್ರೀತಿ ಹುಟ್ಟಿಬಂದಾಗ ಆ ಮನೆ ಕನ್ನಡಮಯವಾಗಲು ಸಾಧ್ಯ, ಮಕ್ಕಳನ್ನು ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ನಡೆಸಲು ಹೆತ್ತವರು ಪ್ರೋತ್ಸಾಹಿಸಬೇಕು. ನಡೆ ಕನ್ನಡ, ನುಡಿ ಕನ್ನಡದ ಜತೆಗೆ ಗುಡಿ(ಮನೆ) ಕನ್ನಡವಾದಾಗ ಕನ್ನಡ ಭಾಷೆಗೆ ಭದ್ರ ನೆಲೆ ಲಭಿಸಲು ಸಾಧ್ಯ. ಕನ್ನಡ ಭಾಷೆ, ಸಂಸ್ಕøತಿಯ ಮೇಲೆ ಬದ್ಧತೆಯಿದ್ದಲ್ಲಿ ಮಾತ್ರ 'ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನದಂತಹ ಕಾರ್ಯಕ್ರಮ ನಡೆಸಲು ಸಾಧ್ಯ. ಈ ನಿಟ್ಟಿನಲ್ಲಿ ಕನ್ನಡ ಭವನದ ಸಾಧನೆ ಶ್ಲಾಘನೀಯ ಎಂದು ತಿಳಿಸಿದರು.
ಸಮ್ಮೇಳನದ ಸರ್ವಾಧ್ಯಕ್ಷರಾಗಿ ಭಾಗವಹಿಸಿದ್ದ ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ನಿಕಟಪೂರ್ವ ಅಧ್ಯಕ್ಷ ಡಾ. ಸಿ. ಸೋಮಶೇಖರ್ ಮಾತನಾಡಿ, ಕನ್ನಡಭಾಷೆ, ಸಾಹಿತ್ಯಕ್ಕೆ ವಿಶೇಷ ಪರಂಪರೆಯಿದೆ. ಕಾಸರಗೋಡಿನಲ್ಲಿ ನಡೆಯುತ್ತಿರುವ ಕನ್ನಡದ ಚಟುವಟಿಕೆಗಳಿಂದ ಇಲ್ಲಿ ಕನ್ನಡದ ಅಸ್ಮಿತೆ ಉಳಿದುಕೊಂಡಿದೆ. ಗಡಿನಾಡಿನಲ್ಲಿ ಕನ್ನಡ ಸಾಹಿತ್ಯ, ಸಂಸ್ಕøತಿ, ಯಕ್ಷಗಾನದಂತಹ ಕಲೆಗಳಿಗೆ ನಿರಂತರ ಪ್ರೋತ್ಸಾಹ ನೀಡುತ್ತಿರುವ ಎಡನೀರು ಮಠ ಸೇರಿದಂತೆ ವಿವಿಧ ಸಂಘಟನೆಗಳು ನೀಡುವ ಸಹಕಾರ, ಬೆಂಬಲದಿಂದ ಇಲ್ಲಿ ಕನ್ನಡದ ಚಟುವಟಿಕೆ ನಿರಂತರವಾಗಿ ನಡೆದುಬರಲು ಸಾಧ್ಯವಾಗಿದೆ. ಗಡಿನಾಡಿನಲ್ಲಿ ಕನ್ನಡಿಗರು ಎದುರಿಸುತ್ತಿರುವ ಅಭದ್ರತೆಯ ಮನೋಭಾವ ಹೋಗಲಾಡಿಸಲು ಇಲ್ಲಿನ ಜನತೆಯೊಂದಿಗೆ ಕರ್ನಾಟಕ ನಿರಂತರ ಕೈಜೋಡಿಸುತ್ತಿರುವುದಾಗಿ ತಿಳಿಸಿದರು.
ಡಾ. ಕೆ.ಎನ್ ವೆಂಕಟ್ರಮಣ ಹೊಳ್ಳ ಸಮ್ಮೇಳನದ ಅಧ್ಯಕ್ಷತೆ ವಹಿಸಿ, ಕನ್ನಡ ಧ್ವಜ, ಡಾ. ಬಾಲಕೃಷ್ಣ ಎಸ್ ಮದ್ದೋಡಿ ಅವರು ರಾಷ್ಟ್ರಧ್ವಜಾರೋಹಣ ನಡೆಸಿದರು. ಪಮ್ಮಿ ಕೊಡಿಯಾಲಬೈಲ್ ಅವರು ಕನ್ನಡ ಭುವನೇಶ್ವರಿ ಭಾವಚಿತ್ರಕ್ಕೆ, ಇರಾ ನೇಮು ಪೂಜಾರಿ ಅವರು ಶ್ರೀಕೃಷ್ಣದೇವರಾಯವರ ಭಾವಚಿತ್ರಕ್ಕೆ, ಜಿ.ಕೆ ಮಾಧವ ರಾವ್ ಅವರು ನಾಲ್ವಡಿ ಕೃಷ್ಣರಾಜ ಒಡೆಯರ್ ಭಾವಚಿತ್ರಕ್ಕೆ , ಕರವೇ ರಾಜ್ಯ ಸಂಚಲಕ ನಂ.ವೇ ವಿಜಯಕುಮಾರ್ ಅವರು ನಾಡೋಜ ಡಾ.ಕಯ್ಯಾರ ಕಿಞಣ್ಣ ರೈ ಅವರ ಭಾವಚಿತ್ರಕ್ಕೆ, ಡಾ. ಸುರೇಶ್ ನೆಗಳಗುಳಿ ಅವರು ಮಂಜೇಶ್ವರ ಗೋವಿಂದ ಪೈ ಅವರ ಭಾವಚಿತ್ರಕ್ಕೆ ಹಾರಾರ್ಪಣೆ ಮಾಡಿದರು.
ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಎ.ಆರ್ ಸುಬ್ಬಯ್ಯಕಟ್ಟೆ, ವಿಧಾನಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಡಾ. ಶರಣಪ್ಪ ಗಬ್ಬೂರ್, ಡಾ. ಇಂಚರ ನಾರಾಯಣ ಸ್ವಾಮಿ, ಎ.ವಿ ಪ್ರದೀಪ್ ಕುಮಾರ್, ವಿ.ಬಿ ಕುಳಮರ್ವ, ಡಾ.ಕೊಳ್ಚಪ್ಪೆ ಗೋವಿಂದ ಭಟ್, ಜಯಾಂದ ಪೆರಾಜೆ, ಡಾ. ಶಾಂತಾ ಪುತ್ತೂರು, ಸುಧಾರಾಣಿ ಅಣಂಗೂರು ಮೊದಲಾದವರು ಉಪಸ್ಥಿತರಿದ್ದರು. ಕನ್ನಡ ಭವನ ಸ್ಥಾಪಕರಾದ ಡಾ. ವಾಮನ ರಾವ್ ಬೇಕಲ್ ಹಾಗೂ ಸಂಧ್ಯಾರಾಣಿ ಸ್ವಾಗತಿಸಿದರು. ದಿವ್ಯಶ್ರೀ ಕೆರೆಮನೆ ಪ್ರಾರ್ಥಿಸಿದರು. ವಿಶಾಲಾಕ್ಷ ಪುತ್ರಕಳ ಕಾರ್ಯಕ್ರಮ ನಿರೂಪಿಸಿದರು. ವಸಂತ ಕೆರೆಮನೆ ವಂದಿಸಿದರು.
ಕಾರ್ಯಕ್ರಮಕ್ಕೂ ಮೊದಲು ಕೋಟೆಕಣಿ ರಾಮನಾಥ ಸಾಂಸ್ಕøತಿಕ ಭವನ ವಠಾರದಿಂದ ಆರಂಭಗೊಂಡ ಕನ್ನಡದ ಮೆರವಣಿಗೆಯನ್ನು ಕೋಲಾರ ಸವರ್ಣಭೂಮಿ ಫೌಂಡೇಶನಿನ ಬಿ. ಶಿವಕುಮಾರ್ ಕೋಲಾರ ಉದ್ಘಾಟಿಸಿದರು. ಕರ್ನಾಟಕ ಜಾನಪದ ಪರಿಷತ್ ಸಂಸ್ಥಾಪಕ ಡಾ. ಎಸ್. ಬಾಲಾಜಿ ಕಲಾಮೇಳ ಉದ್ಘಾಟಿಸಿದರು. ಸಮ್ಮೇಳನದ ಸರ್ವಾಧ್ಯಕ್ಷ ಹಾಗೂ ಅಧ್ಯಕ್ಷರನ್ನು ತೆರೆದ ವಆಹನದಲ್ಲಿ ಸಮ್ಮೇಳನ ನಗರಕ್ಕೆ ಕರೆತರಲಾಯಿತು.
ಈ ಸಂದರ್ಭ ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ -2026, ರಾಜಶ್ರೀ ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ್ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ, ರಾಷ್ಟ್ರಕವಿ ಗೋವಿಂದ ಪೈ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ 2026, ಭರವಸೆಯ ಬೆಳಕು, ಭರವಸೆಯ ಶಿಕ್ಷಣ ರತ್ನ, ಕನ್ನಡ ಪಯಸ್ವಿನಿ ಅಚೀವ್‍ಮೆಂಟ್ ಅವಾರ್ಡ್-2026, ಸಮಾಜ ಸೇವಾ ರತ್ನ ಮತ್ತು ಗಡಿನಾಡು ಕಾಸರಗೋಡು ಕನ್ನಡ ಭವನದ ಗೌರವಾರ್ಪಣೆ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದ ಅಂಗವಾಗಿ ಸಮೂಹ ಶಾಸ್ತ್ರೀಯ ನೃತ್ಯ, ಸಮೂಹ ನೃತ್ಯ, ಸಮೂಹ ಜಾನಪದ ನೃತ್ಯ, ಸಮೂಹ ನೃತ್ಯ ರೂಪಕ, ಯಕ್ಷಗಾನ, ಕಥಕ್ಕಳಿ, ಡೊಳ್ಳು ಕುಣಿತ, ತಮಟೆ, ಪೂಜಾ ಕುಣಿತ, ಪಟ ಕುಣಿತ ಮತ್ತು ಕಲಾ ಪ್ರದರ್ಶನ ಪ್ರಸ್ತುತಗೊಂಡಿತು.



