HEALTH TIPS

ಇರಾನ್ | ಖಾಮಿನೈ ಅಂತ್ಯಕ್ರಿಯೆಯಲ್ಲಿ ಮೂವರು ಪುತ್ರರು ಭಾಗಿ : ಉತ್ತರಾಧಿಕಾರಿ ಮೊಜ್ತಬಾ ಗೈರು

 ಟೆಹರಾನ್ : ಇರಾನ್‍ನ ನಾಯಕರು ರವಿವಾರ ದಿವಂಗತ ಸರ್ವೋಚ್ಚ ನಾಯಕ ಅಲಿ ಖಾಮಿನೈ ಅವರ ಶವಪೆಟ್ಟಿಗೆಯ ಮುಂದೆ ನಡೆದ ಪ್ರಾರ್ಥನೆಯಲ್ಲಿ ಭಾಗವಹಿಸುವ ಮೂಲಕ ಎರಡನೇ ದಿನದ ಅಂತ್ಯಕ್ರಿಯೆಯ ವಿಧಿವಿಧಾನಗಳಲ್ಲಿ ಪಾಲ್ಗೊಂಡರು. ಖಾಮಿನೈಯವರ ಮೂವರು ಪುತ್ರರು ಅವರ ಶವಪೆಟ್ಟಿಗೆ ಹಾಗೂ ಕುಟುಂಬದ ಇತರ ನಾಲ್ಕು ಸದಸ್ಯರ ಶವಪೆಟ್ಟಿಗೆಗಳ ಪಕ್ಕದಲ್ಲಿ ಪ್ರಾರ್ಥನೆ ಸಲ್ಲಿಸಿದರು. 


ಆದರೆ ಅವರ ಮತ್ತೊಬ್ಬ ಪುತ್ರ ಮತ್ತು ಉತ್ತರಾಧಿಕಾರಿಯಾದ ಮೊಜ್ತಬಾ ಖಾಮಿನೈ ಅವರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.

ಟೆಹ್ರಾನ್‍ನ ಗ್ರ್ಯಾಂಡ್ ಮೊಸಲ್ಲಾ ಧಾರ್ಮಿಕ ಸಂಕೀರ್ಣದಲ್ಲಿ ಈ ಪ್ರಾರ್ಥನೆ ನಡೆಯಿತು ಮತ್ತು ಪವಿತ್ರ ನಗರವಾದ ಕೋಮ್‍ನ ಧರ್ಮಶಾಸ್ತ್ರ ಕೇಂದ್ರಗಳಲ್ಲಿ ಬೋಧಿಸುವ 97 ವರ್ಷದ ವಿದ್ವಾಂಸ, ಪ್ರಮುಖ ಶಿಯಾ ಧರ್ಮಗುರು ಜಾಫರ್ ಸೊಭಾನಿ ಅವರು ಇದರ ನೇತೃತ್ವ ವಹಿಸಿದ್ದರು. ಮುಸ್ತಫಾ, ಮೇಸಮ್ ಮತ್ತು ಮಸೌದ್ ಖಾಮಿನೈ ಪ್ರಾರ್ಥನೆ ಸಲ್ಲಿಸುತ್ತಿರುವುದನ್ನು ಸರಕಾರಿ ಸ್ವಾಮ್ಯದ ದೂರದರ್ಶನ ಬಿತ್ತರಿಸಿತು. ರವಿವಾರ ಇರಾನ್‍ನಾದ್ಯಂತ ಸಾರ್ವಜನಿಕ ರಜಾದಿನವನ್ನು ಘೋಷಿಸಲಾಗಿತ್ತು.

ಇರಾನ್‍ನ ಹಿರಿಯ ನಾಯಕರು ಮತ್ತು ವಿದೇಶಿ ಗಣ್ಯರು ಅಂತಿಮ ದರ್ಶನ ಪಡೆಯಲು ಒಂದು ದಿನದ ಮಟ್ಟಿಗೆ ಶವಪೆಟ್ಟಿಗೆಯನ್ನು ಒಳಾಂಗಣದಲ್ಲಿ ಇರಿಸಿದ ನಂತರ, ಶನಿವಾರ ಖಾಮಿನೈಯವರ ಶವಪೆಟ್ಟಿಗೆಯನ್ನು ಅವರ ಮಗಳು, ಅಳಿಯ, ಸೊಸೆ ಮತ್ತು 14 ತಿಂಗಳ ಮೊಮ್ಮಗಳ ಶವಪೆಟ್ಟಿಗೆಗಳೊಂದಿಗೆ ಹೊರಾಂಗಣದಲ್ಲಿ ಗಾಜಿನ ಪೆಟ್ಟಿಗೆಯೊಳಗೆ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು.

ರವಿವಾರ ಸೈನಿಕರು, ಧಾರ್ಮಿಕ ಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಸಾಮಾನ್ಯ ಪುರುಷರು ಹಾಗೂ ಮಹಿಳೆಯರು ಸೇರಿದಂತೆ ಹತ್ತಾರು ಸಾವಿರ ಶೋಕತಪ್ತರು ಖಾಮಿನೈ ಮತ್ತು ಅವರ ಕುಟುಂಬಕ್ಕೆ ಗೌರವ ಸಲ್ಲಿಸಲು ಮೊಸಲ್ಲಾ ಸಂಕೀರ್ಣಕ್ಕೆ ಆಗಮಿಸಿದ್ದರು. ಅವರು ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಸೇಡು ತೀರಿಸಿಕೊಳ್ಳಬೇಕೆಂದು ಆಗ್ರಹಿಸುವ ಘೋಷಣೆಗಳಿರುವ ಧ್ವಜಗಳನ್ನು ಬೀಸುತ್ತಿದ್ದರು.

ಒಂದು ಕೋಟಿಗೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ

ಸೋಮವಾರ ರಾಜಧಾನಿಯಲ್ಲಿ ನಡೆಯಲಿರುವ ಮೆರವಣಿಗೆಗಳ ಸಿದ್ಧತೆಯ ಭಾಗವಾಗಿ, ಅಂತಿಮ ದರ್ಶನಕ್ಕಾಗಿ ಇರಿಸಲಾಗಿರುವ ಗ್ರ್ಯಾಂಡ್ ಮೊಸಲ್ಲಾದಿಂದ ಖಾಮಿನೈ ಅವರ ಪಾರ್ಥಿವ ಶರೀರವನ್ನು ರವಿವಾರ ತಡರಾತ್ರಿ ಸ್ಥಳಾಂತರಿಸಲಾಗುವುದು.

ರವಿವಾರ ಬೆಳಿಗ್ಗೆ ಗ್ರ್ಯಾಂಡ್ ಮೊಸಲ್ಲಾ ಮತ್ತು ಸುತ್ತಮುತ್ತಲಿನ ರಸ್ತೆಗಳು ಶೋಕತಪ್ತ ಜನರಿಂದ ತುಂಬಿ ತುಳುಕುತ್ತಿದ್ದವು. ತಾಪಮಾನವು 35 ಡಿಗ್ರಿ ಸೆಲ್ಸಿಯಸ್‍ಗಿಂತ ಹೆಚ್ಚಾಗುವ ಮುನ್ಸೂಚನೆ ಇದ್ದಿದ್ದರಿಂದ, ಗ್ರ್ಯಾಂಡ್ ಮೊಸಲ್ಲಾ ಕಡೆಗೆ ಹೋಗುತ್ತಿದ್ದ ಅನೇಕರಿಗೆ ಉಪಹಾರ ಮತ್ತು ಪಾನೀಯಗಳನ್ನು ನೀಡಲಾಯಿತು. ಕೆಲವರು ಇರಾನ್ ಧ್ವಜಗಳನ್ನು ಅಥವಾ ದಿವಂಗತ ಖಾಮಿನೈ ಅವರ ಭಾವಚಿತ್ರಗಳನ್ನು ಕೈಯಲ್ಲಿ ಹಿಡಿದಿದ್ದರು.

ರಾಜಧಾನಿಯಲ್ಲಿ ನಡೆಯಲಿರುವ ಈ ಸಮಾರಂಭಗಳಲ್ಲಿ 1 ಕೋಟಿಗೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಜನದಟ್ಟಣೆಯಿಂದ ಉಂಟಾಗಬಹುದಾದ ತುಳಿತದ ಅಪಾಯದ ಬಗ್ಗೆ ಅಧಿಕೃತ ಮಾಧ್ಯಮಗಳು ಎಚ್ಚರಿಕೆ ನೀಡಿವೆ. ಟೆಹ್ರಾನ್‍ನ ಮೊಸಲ್ಲಾ ಮತ್ತು ಅದರ ಸುತ್ತಮುತ್ತಲಿನ ವೈದ್ಯಕೀಯ ಕೇಂದ್ರಗಳಿಗೆ 4,000 ಕ್ಕೂ ಹೆಚ್ಚು ಜನರು ಭೇಟಿ ನೀಡಿದ್ದಾರೆ. ಆದರೆ ಯಾವುದೇ ಸಾವುಗಳು ಸಂಭವಿಸಿಲ್ಲ ಎಂದು ಇರಾನ್‍ನ ಅಧಿಕೃತ `ಇರ್ನಾ' ಸುದ್ದಿ ಸಂಸ್ಥೆ ರವಿವಾರ ವರದಿ ಮಾಡಿದೆ. 










ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries