ನವದೆಹಲಿ: ದೆಹಲಿಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯ ವೇಳೆ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ್ದರೆನ್ನಲಾದ ದೌರ್ಜನ್ಯ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ಬುಧವಾರ ನಿರಾಕರಿಸಿದೆ.
'ನಮ್ಮ ಸಮಯ ವ್ಯರ್ಥ ಮಾಡಬೇಡಿ' ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಅರ್ಜಿದಾರರ ಪರ ವಕೀಲರಿಗೆ ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ.
ಪೊಲೀಸ್ ದೌರ್ಜನ್ಯಕ್ಕೆ ಸಂಬಂಧಿಸಿದ ವಿಡಿಯೊ ಸಾಕ್ಷ್ಯಗಳು ನನ್ನ ಬಳಿಯಿದ್ದು, ನಾಳೆಯೇ (ಗುರುವಾರ) ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು. ಅಲ್ಲಿ ವಿದ್ಯಾರ್ಥಿಗಳು ಸಂಕಷ್ಟದಲ್ಲಿದ್ದಾರೆ. ವಿದ್ಯಾರ್ಥಿಗಳ ಮೇಲೆ ಲಾಟಿ ಪ್ರಹಾರ ಮಾಡಲಾಗಿದೆ ಎಂದು ವಕೀಲರು ಮನವಿ ಮಾಡಿದರು.
ಆದರೆ ಮನವಿಯನ್ನು ತಿರಸ್ಕರಿಸಿದ ಸಿಜೆಐ, ಈಗಲೇ ವಿಡಿಯೊ ದೃಶ್ಯ ಪರಿಶೀಲಿಸಲು ನಮಗೆ ಆಸಕ್ತಿಯಿಲ್ಲ. ನಮಗೆ ವಿಡಿಯೊ ನೋಡಲು ಸಮಯವಿಲ್ಲ. ನೋಡಲು ಇಷ್ಟವಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.
ವಕೀಲರು ಮತ್ತೆ ವಿದ್ಯಾರ್ಥಿಗಳ ಮೇಲಿನ ಹಲ್ಲೆಯನ್ನು ಉಲ್ಲೇಖಿಸಿದಾಗ ಸಿಜೆಐ, 'ನಮ್ಮ ಸಮಯವನ್ನು ವ್ಯರ್ಥ ಮಾಡಬೇಡಿ. ನಾವು ಯಾವುದೇ ವಿಡಿಯೊಗಳನ್ನು ನೋಡಲು ಬಯಸುವುದಿಲ್ಲ' ಎಂದು ಕಟ್ಟುನಿಟ್ಟಾಗಿ ಹೇಳಿದರು.

