ನವದೆಹಲಿ: ಕರ್ನಾಟಕದ ಸಂಸದ ಪ್ರಲ್ಹಾದ್ ಜೋಶಿ ಅವರಿಗೆ ಕೇಂದ್ರ ಶಿಕ್ಷಣ ಖಾತೆಯ ಹೊಣೆ ನೀಡಲಾಗಿದೆ ಎಂದು ವರದಿಯಾಗಿದೆ.
ನೀಟ್ ಪರೀಕ್ಷಾ ಆಕ್ರಮಗಳಿಗೆ ಸಂಬಂಧಿಸಿದಂತೆ ಪ್ರತಿಭಟನೆಗಳು ತೀವ್ರಗೊಂಡ ಹಿನ್ನೆಲೆಯಲ್ಲಿ ಧರ್ಮೇಂದ್ರ ಪ್ರಧಾನ್ ಅವರು ಶಿಕ್ಷಣ ಸಚಿವ ಸ್ಥಾನಕ್ಕೆ ಇಂದು ಮಧ್ಯಾಹ್ನ ರಾಜೀನಾಮೆ ನೀಡಿದ್ದಾರೆ.
ಬಳಿಕ, ಜೋಶಿ ಅವರಿಗೆ ಹೆಚ್ಚುವರಿಯಾಗಿ ಶಿಕ್ಷಣ ಖಾತೆ ವಹಿಸಲಾಗಿದೆ.
ಬಿ.ಎ ಪದವೀಧರರಾಗಿರುವ ಜೋಶಿ, ಧಾರವಾಡ ಲೋಕಸಭಾ ಕ್ಷೇತ್ರದಿಂದ ಸತತವಾಗಿ ಐದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. 2019ರಿಂದ 2024ರವರೆಗೆ ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವರಾಗಿದ್ದ ಅವರು, 2024ರಿಂದ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಸರಬರಾಜು, ನವೀಕರಿಸಬಹುದಾದ ಇಂಧನ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
1990ರ ದಶಕದಲ್ಲಿ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ನಡೆದ ರಾಷ್ಟ್ರಧ್ವಜ ಹಾರಿಸುವ ಹೋರಾಟದಲ್ಲಿ ಜೋಶಿ ಸಕ್ರಿಯರಾಗಿದ್ದರು. 2014ರಿಂದ 2016ರ ಅವಧಿಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿಯೂ ಅವರು ಕಾರ್ಯನಿರ್ವಹಿಸಿದ್ದರು.

