ನವದೆಹಲಿ: ಶಾಂತಿಯುತ ಪ್ರತಿಭಟನೆಯನ್ನು ಮಾಡುವ ಹಕ್ಕು ಎಲ್ಲರಿಗೂ ಇದೆ. ಈ ವೇಳೆ ನಡೆಯುವ ಪೊಲೀಸ್ ದೌರ್ಜನ್ಯ ಅಥವಾ 'ಲಾಠಿ ಚಾರ್ಜ್ ಅನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ(ಜುಲೈ 27) ಹೇಳಿದೆ.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಇತರ ಪರೀಕ್ಷಾ ಅಕ್ರಮಗಳ ಕುರಿತು ದೇಶದಾದ್ಯಂತ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ವಿರುದ್ಧ ಪೊಲೀಸ್ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಆರೋಪಿಸಿ ಸಲ್ಲಿಸಲಾದ ಅರ್ಜಿಗಳನ್ನು ಮಂಗಳವಾರ(ಜುಲೈ 28) ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠ ಹೇಳಿದೆ.
ಇದಲ್ಲದೆ, ಪ್ರತಿಭಟನೆಯ ಸಮಯದಲ್ಲಿ ದಾಳಿಗೊಳಗಾದ ಪೊಲೀಸ್ ಸಿಬ್ಬಂದಿಯ ಕುಟುಂಬ ಸದಸ್ಯರು ಸಲ್ಲಿಸಿದ ಪ್ರತ್ಯೇಕ ಅರ್ಜಿಯನ್ನು ಮತ್ತು ಇತರ ಅರ್ಜಿಗಳ ವಿಚಾರಣೆಗೆ ಕೂಡ ಪೀಠವು ಒಪ್ಪಿಕೊಂಡಿದೆ.
ಪ್ರತಿಭಟನೆ ನಡೆಯುತ್ತಿದೆ ಎಂದಾಕ್ಷಣ 'ಲಾಠಿಚಾರ್ಜ್' ಆಗಲೇಬೇಕೆಂದಿಲ್ಲ. ಪ್ರಜಾಪ್ರಭುತ್ವ ಪ್ರಕ್ರಿಯೆಗೆ ಅತ್ಯಗತ್ಯವಾದ ಸ್ವಯಂ-ಶಿಸ್ತು ಇಲ್ಲಿ ಅಗತ್ಯವಾಗಿದೆ ಎಂದು ಸಿಜೆಐ ಹೇಳಿದ್ದಾರೆ.
ಜುಲೈ 20 ರಂದು ದೆಹಲಿಯಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ'(ಸಿಜೆಪಿ) ನೇತೃತ್ವದಲ್ಲಿ ನಡೆದ ಸಂಸತ್ ಚಲೋ ಮೆರವಣಿಗೆಯ ವೇಳೆ ಪ್ರತಿಭಟನಾಕಾರರು ಮತ್ತು ಭದ್ರತಾ ಸಿಬ್ಬಂದಿ ನಡುವೆ ಘರ್ಷಣೆ ನಡೆಯಿತು. ಸಂಸತ್ತಿನತ್ತ ಸಾಗಲು ಯತ್ನಿಸುತ್ತಿದ್ದ ಜನಸಮೂಹವನ್ನು ಚದುರಿಸಲು ಪೊಲೀಸರು ಲಾಠಿ ಮತ್ತು ಅಶ್ರುವಾಯು ಬಳಸಿದ್ದರು.

