ನವದೆಹಲಿ: 'ಭಾರತಕ್ಕೆ ನಿಮ್ಮ ಅಗತ್ಯವಿದೆ. ಶಿಕ್ಷಣಕ್ಕೆ ಸಂಬಂಧಿಸಿದ ವಿಚಾರವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸುತ್ತೇವೆ. ಅನಿರ್ದಿಷ್ಟಾವಧಿ ಉಪವಾಸ ಅಂತ್ಯಗೊಳಿಸಿ' ಎಂದು ಹೋರಾಟಗಾರ ಸೊನಮ್ ವಾಂಗ್ಚೂಕ್ ಅವರಿಗೆ ವಿರೋಧ ಪಕ್ಷಗಳ ಸಂಸದರ ನಿಯೋಗ ಮನವಿ ಮಾಡಿದೆ.
ಕಾಂಗ್ರೆಸ್‌ನ ವಿವೇಕ್ ತಂಖಾ, ಟಿಎಂಸಿಯ ಸಾಗರಿಕಾ ಘೋಷ್ ಮತ್ತು ಸಿಪಿಎಂನ ಜಾನ್ ಬ್ರಿಟ್ಟಾಸ್ ಅವರಿದ್ದ ಸಂಸದರ ನಿಯೋಗ ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ ವಾಂಗ್ಚೂಕ್ ಮತ್ತು ಅವರ ಪತ್ನಿ ಗೀತಾಂಜಲಿ ಜೆ.
ಆಂಗ್ಮೊ ಅವರನ್ನು ಬುಧವಾರ ಭೇಟಿ ಮಾಡಿ ಚರ್ಚಿಸಿತು.
'ನಿಮ್ಮ ಸಂದೇಶ ಇಡೀ ದೇಶದಲ್ಲಿ ಪ್ರತಿಧ್ವನಿಸುತ್ತಿದೆ. ಸಂಸತ್ತಿನಲ್ಲೂ ನಾವು ಪ್ರಸ್ತಾಪಿಸಲಿದ್ದೇವೆ. ದೇಶದ ಯುವಕರಿಗೆ ನಿಮ್ಮ ಆತ್ಮಬಲ ಮತ್ತು ಮಾರ್ಗದರ್ಶನ ದೀರ್ಘಕಾಲದವರೆಗೂ ಬೇಕಿದೆ. ನಿಮ್ಮ ತ್ಯಾಗಕ್ಕಿಂತಲೂ ಅದು ದೊಡ್ಡದು' ಎಂದು ಸಂಸದರ ನಿಯೋಗ ಸೊನಮ್ ಅವರಿಗೆ ತಿಳಿಸಿತು.
'ಲಡಾಖ್ ಬಯಸುವಂತೆ ಇಡೀ ಭಾರತ ನಿಮ್ಮನ್ನು ಬಯಸುತ್ತಿದೆ; ಆದರೆ, ಈ ಸ್ಥಿತಿಯಲ್ಲಿ ಅಲ್ಲ. ಮುಂದಿನ ಪೀಳಿಗೆಗೂ ನಿಮ್ಮ ಹೋರಾಟದ ಲಾಭ ಸಿಗಬೇಕಿದೆ' ಎಂಬ ಅಂಶಗಳಿರುವ ಪತ್ರವನ್ನು ಸಂಸದರ ನಿಯೋಗ ವಾಂಗ್ಚೂಕ್ ಅವರಿಗೆ ಸಲ್ಲಿಸಿದೆ.
ಶಶಿತರೂರ್, ತಿರುಚಿ ಶಿವ, ರಾಮ್‌ಗೋಪಾಲ್ ಯಾದವ್, ಕಪಿಲ್ ಸಿಬಾಲ್ ಸೇರಿದಂತೆ ವಿಪಕ್ಷಗಳ ಹಲವು ಸಂಸದರ ಸಹಿ ಒಳಗೊಂಡ ಪತ್ರವನ್ನು ನಿಯೋಗ ಅವರಿಗೆ ನೀಡಿತು.

