ನವದೆಹಲಿ: ನೀಟ್ ಪರೀಕ್ಷಾ ಅಕ್ರಮದ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಸಲ್ಲಿಸಬೇಕು ಎಂದು ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ (KJP) ಹೊಸದಿಲ್ಲಿಯ ಜಂತರ್ ಮಂತರ್ನಲ್ಲಿ ನಡೆಸುತ್ತಿರುವ ಪ್ರತಿಭಟನೆ ತೀವ್ರಗೊಂಡಿರುವ ಬೆನ್ನಲ್ಲೇ, ರೂರ್ಕೀ ಭಾರತೀಯ ತಾಂತ್ರಿಕ ಸಂಸ್ಥೆ (ಐಐಟಿ-ರೂರ್ಕೀ) ತನ್ನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ರಾಜಕೀಯ ಚಟುವಟಿಕೆಗಳು ಹಾಗೂ ಸಾರ್ವಜನಿಕ ರಾಜಕೀಯ ಹೇಳಿಕೆಗಳಿಂದ ದೂರವಿರುವಂತೆ ಸಲಹಾ ಸೂಚಿ ಹೊರಡಿಸಿದೆ.
ಆಡಳಿತ ಮಂಡಳಿಯ ಪೂರ್ವಾನುಮತಿ ಇಲ್ಲದೆ ಯಾವುದೇ ರಾಜಕೀಯ ಚಟುವಟಿಕೆ ಅಥವಾ ರಾಜಕೀಯ ಚರ್ಚೆಗಳಲ್ಲಿ ಭಾಗವಹಿಸಬಾರದು ಎಂದು ಸೋಮವಾರ ಸಂಸ್ಥೆಯ ರಿಜಿಸ್ಟ್ರಾರ್ ಬಿಡುಗಡೆ ಮಾಡಿದ ಸಲಹಾ ಸೂಚಿಯಲ್ಲಿ ತಿಳಿಸಲಾಗಿದೆ.
ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಬ್ರಾಡ್ಕಾಸ್ಟ್, ಮುದ್ರಣ ಅಥವಾ ವಿದ್ಯುನ್ಮಾನ ಮಾಧ್ಯಮಗಳ ಮೂಲಕ ಯಾವುದೇ ರಾಜಕೀಯ ಹೇಳಿಕೆ ನೀಡುವುದು ಅಥವಾ ತಮ್ಮ ರಾಜಕೀಯ ಅಭಿಪ್ರಾಯಗಳನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸುವುದಕ್ಕೂ ಅನುಮತಿ ಇರುವುದಿಲ್ಲ ಎಂದು ಸೂಚಿಸಲಾಗಿದೆ.
ಇಂತಹ ಹೇಳಿಕೆಗಳು ಕೇಂದ್ರ ಸರ್ಕಾರದೊಂದಿಗಿನ ಸಂಸ್ಥೆಯ ಬಾಂಧವ್ಯಕ್ಕೆ ಮುಜುಗರ ಉಂಟುಮಾಡುವ ಸಾಧ್ಯತೆ ಇದೆ ಎಂದೂ ಸಲಹಾ ಸೂಚಿಯಲ್ಲಿ ಉಲ್ಲೇಖಿಸಲಾಗಿದೆ.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯ ನೈತಿಕ ಹೊಣೆ ಹೊತ್ತು ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಸಲ್ಲಿಸಬೇಕು ಎಂದು ಒತ್ತಾಯಿಸಿ ಅಎP ಹೊಸದಿಲ್ಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲೇ ಈ ಸಲಹಾ ಸೂಚಿ ಹೊರಬಿದ್ದಿರುವುದು ಗಮನ ಸೆಳೆದಿದೆ.
ಆದರೆ, ಈ ಕುರಿತು ಸ್ಪಷ್ಟನೆ ನೀಡಿರುವ ಐಐಟಿ-ರೂರ್ಕೀ ಆಡಳಿತ ಮಂಡಳಿ, ಪ್ರತಿ ಶೈಕ್ಷಣಿಕ ವರ್ಷದ ಆರಂಭದಲ್ಲಿ ಇಂತಹ ಸಲಹಾ ಸೂಚಿಗಳನ್ನು ನಿಯಮಿತವಾಗಿ ಹೊರಡಿಸಲಾಗುತ್ತದೆ. ಈ ಸಲಹಾ ಸೂಚಿಗೂ ಸದ್ಯ ನಡೆಯುತ್ತಿರುವ ಪ್ರತಿಭಟನೆಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದೆ.
ಈ ಹಿನ್ನೆಲೆಯಲ್ಲಿ ಸಲಹಾ ಸೂಚಿಯನ್ನು ತಪ್ಪಾಗಿ ಅರ್ಥೈಸಬಾರದು ಅಥವಾ ಪ್ರಸ್ತುತ ರಾಜಕೀಯ ಬೆಳವಣಿಗೆಗಳಿಗೆ ಸಂಬಂಧಿಸಿ ವ್ಯಾಖ್ಯಾನಿಸಬಾರದು ಎಂದು ಸಂಸ್ಥೆ ಮನವಿ ಮಾಡಿದೆ.
ಆದರೂ, "ಇನ್ಸ್ಟಾಗ್ರಾಂ, ಫೇಸ್ಬುಕ್ ಸೇರಿದಂತೆ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸಂಸ್ಥೆಯ ಕೆಲವು ಸಹೋದ್ಯೋಗಿಗಳು ಸದ್ಯ ನಡೆಯುತ್ತಿರುವ ರಾಜಕೀಯ ಹೋರಾಟಗಳಿಗೆ ಸಾರ್ವಜನಿಕವಾಗಿ ಬೆಂಬಲ ವ್ಯಕ್ತಪಡಿಸುತ್ತಿದ್ದು, ಸಾರ್ವಜನಿಕ ಟೀಕೆಗಳನ್ನು ಮಾಡುತ್ತಿರುವುದು ಸಂಸ್ಥೆಯ ಗಮನಕ್ಕೆ ಬಂದಿದೆ" ಎಂದು ಸಲಹಾ ಸೂಚಿಯಲ್ಲಿ ಉಲ್ಲೇಖಿಸಲಾಗಿದೆ.

