ಹೆಚ್ಚಿನ ಎಥೆನಾಲ್ ಮಿಶ್ರಣವು ವಾಹನಗಳು ಮತ್ತು ಇಂಧನದ ದಕ್ಷತೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ಚರ್ಚೆಗಳು ಕಾವೇರಿರುವ ಬೆನ್ನಲ್ಲೇ ಈ ಸ್ಪಷ್ಟನೆ ಹೊರಬಿದ್ದಿದೆ. ಸರಕಾರವು ಶೀಘ್ರದಲ್ಲೇ ಶೇ.25ರಷ್ಟು ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಸುವಂತೆ ಸೂಚಿಸಬಹುದು ಎಂಬ ವರದಿಗಳು ಮಾಧ್ಯಮಗಳಲ್ಲಿ ಹರಿದಾಡಿದ್ದವು.
ಇಂತಹ ವರದಿಗಳನ್ನು ಆಧಾರರಹಿತ ಮತ್ತು ಮಾಹಿತಿ ಕೊರತೆಯಿಂದ ಕೂಡಿದ್ದು ಎಂದು ಸರಕಾರದ ಮೂಲಗಳು ಬಣ್ಣಿಸಿವೆ.
'ಇದು ಸಂಪೂರ್ಣವಾಗಿ ಸುಳ್ಳು. ನಾವು ಇನ್ನೂ ಪರೀಕ್ಷೆಯ ಹಂತದಲ್ಲೇ ಇರುವಾಗ ಇ-25ರ ಬಗ್ಗೆ ಮಾತನಾಡುವುದು ಹೇಗೆ?' ಎಂದು ಪ್ರಶ್ನಿಸಿದ ಹಿರಿಯ ಸರಕಾರಿ ಅಧಿಕಾರಿಯೋರ್ವರು,ಇ-25 ಪೆಟ್ರೋಲ್ ಬಳಕೆಗೆ ಮಾರ್ಗಸೂಚಿಯನ್ನು ರೂಪಿಸಲಾಗುತ್ತಿದೆ ಎಂಬ ವರದಿಗಳನ್ನು ತಳ್ಳಿಹಾಕಿದರು.
ಸರ್ಕಾರ ತನ್ನ ಎಥೆನಾಲ್ ಮಿಶ್ರಣ ಕಾರ್ಯಕ್ರಮದ ಅನುಷ್ಠಾನದಲ್ಲಿ ಎಚ್ಚರಿಕೆಯ ಹೆಜ್ಜೆಯನ್ನು ಇಡುತ್ತಿದೆ. ಸಮಗ್ರ ಪರೀಕ್ಷೆ ಹಾಗೂ ಆಟೋಮೊಬೈಲ್ ಕಂಪೆನಿಗಳು ಮತ್ತು ತೈಲ ಮಾರಾಟ ಕಂಪೆನಿಗಳೊಂದಿಗೆ ಸಮಾಲೋಚನೆ ನಡೆಸಿದ ನಂತರವೇ ಹಂತ ಹಂತವಾಗಿ ಮುನ್ನಡೆಯುತ್ತಿದೆ ಎಂದು ಸರಕಾರಿ ಮೂಲಗಳು ತಿಳಿಸಿವೆ.
ಅಧಿಕಾರಿಗಳ ಪ್ರಕಾರ, ಎಥೆನಾಲ್ ಮಿಶ್ರಿತ ಇಂಧನವು ಭಾರತದಲ್ಲಿ ಎರಡೂವರೆ ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಬಳಕೆಯಲ್ಲಿದೆ ಮತ್ತು ಗ್ರಾಹಕರಿಂದ ಅಥವಾ ಆಟೋಮೊಬೈಲ್ ಉದ್ಯಮದಿಂದ ಯಾವುದೇ ಸಮಸ್ಯೆಗಳು ವರದಿಯಾಗಿಲ್ಲ.
ಎಥೆನಾಲ್ ಮಿಶ್ರಿತ ಇಂಧನಕ್ಕೆ ಪರಿವರ್ತನೆಯನ್ನು ಹಂತಹಂತವಾಗಿ ಮಾಡಲಾಗಿದೆ ಎಂದು ಅವರು ಹೇಳಿದರು.
ಏಪ್ರಿಲ್ 2023ರಲ್ಲಿ ಇ-15 ಪೆಟ್ರೋಲ್,ಎಪ್ರಿಲ್ 2024ರಲ್ಲಿ ಇ-19 ಇಂಧನವನ್ನು ಪರಿಚಯಿಸಲಾಗಿದ್ದು, ಎಪ್ರಿಲ್ 2025ರಿಂದ ಇ-20 ಪೆಟ್ರೋಲ್ ಬಳಕೆಯಲ್ಲಿದೆ.
ಪ್ರತಿಯೊಂದು ಹಂತದಲ್ಲೂ ಸಮಗ್ರ ಪರೀಕ್ಷೆ ಮತ್ತು ಮೌಲ್ಯಮಾಪನವನ್ನು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಅಧಿಕಾರಿಗಳ ಪ್ರಕಾರ, ಪೆಟ್ರೋಲ್‌ನಲ್ಲಿ ಚಲಿಸುವ ಸುಮಾರು 20 ಕೋಟಿ ದ್ವಿಚಕ್ರ ವಾಹನಗಳು ಮತ್ತು 20 ಲಕ್ಷ ಚತುಷ್ಚಕ್ರ ವಾಹನಗಳು ಈಗಾಗಲೇ ಎಥೆನಾಲ್ ಮಿಶ್ರಿತ ಇಂಧನವನ್ನು ಬಳಸುತ್ತಿವೆ.
ಹೆಚ್ಚಿನ ಸಾಂದ್ರತೆಯ ಎಥೆನಾಲ್ ಮಿಶ್ರಿತ ಪೆಟ್ರೋಲ್‌ನೊಂದಿಗೆ ಕಾರ್ಯ ನಿರ್ವಹಿಸುವ ಪ್ರಸ್ತುತ ವಾಹನಗಳ ಸಾಮರ್ಥ್ಯದ ಬಗ್ಗೆ ಕೆಲವು ವಲಯಗಳಲ್ಲಿ ವ್ಯಕ್ತವಾಗಿರುವ ಅನುಮಾನಗಳ ಹಿನ್ನೆಲೆಯಲ್ಲಿ ಸರಕಾರದ ಈ ಪ್ರತಿಕ್ರಿಯೆ ಹೊರಬಿದ್ದಿದೆ.
ಸರಕಾರಿ ಅಧಿಕಾರಿಗಳ ಪ್ರಕಾರ, ಇ-25ಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಸ್ತಾವವಿಲ್ಲ ಮತ್ತು ಎಲ್ಲವೂ ಪ್ರಸ್ತುತ ನಡೆಯುತ್ತಿರುವ ಪರೀಕ್ಷೆಗಳ ಮೇಲೆ ಅವಲಂಬಿತವಾಗಿರುತ್ತದೆ.

