ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಬುಧವಾರ ನಡೆಸಿದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಲಷ್ಕರ್-ಎ-ತಯಬಾ (ಎಲ್‌ಇಟಿ) ಕಮಾಂಡರ್‌ನನ್ನು ಹತ್ಯೆಗೈಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದಕ್ಷಿಣ ಕಾಶ್ಮೀರ ಜಿಲ್ಲೆಯ ಏಳು ಹಳ್ಳಿಗಳನ್ನು ಒಳಗೊಂಡಿರುವ ಮೀಮಂದರ್ ಪ್ರದೇಶದ ದಟ್ಟವಾದ ಸೇಬಿನ ತೋಟದಲ್ಲಿ ಜುಲೈ 3ರಿಂದ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಪ್ರಾರಂಭಿಸಿದ್ದವು.
'ನೀವು ಓಡಬಹುದು.. ಆದರೆ ಅಡಗಿಕೊಳ್ಳಲು ಸಾಧ್ಯವಿಲ್ಲ!' ಶೋಪಿಯಾನ್ ಎಸ್‌ಒಜಿ, ರಾಷ್ಟ್ರೀಯ ರೈಫಲ್ಸ್ (ಖಖ) ಮತ್ತು ಸಿಆರ್‌ಪಿಎಫ್ ಜಂಟಿ ಕಾರ್ಯಾಚರಣೆಯಲ್ಲಿ ಲಷ್ಕರ್ ಉಗ್ರನನ್ನು ಹೊಡೆದುರುಳಿಸಲಾಗಿದೆ ಎಂದು ಜಮ್ಮು-ಕಾಶ್ಮೀರ ಪೊಲೀಸರು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪ್ರಕಟಿಸಿದ್ದಾರೆ.
ಹತನಾದ ಉಗ್ರನನ್ನು ನಿಷೇಧಿತ ಎಲ್‌ಇಟಿ ಸಂಘಟನೆಯ ಸ್ವಯಂ ಘೋಷಿತ ಕಮಾಂಡರ್ 'ಜಾಕಿರ್ ಅಹ್ಮದ್ ಗನೀ' ಎಂದು ಗುರುತಿಸಲಾಗಿದೆ.
ಕುಲ್ಗಾಮ್ ಜಿಲ್ಲೆಯ ಮೋಟಲ್‌ಹಾಮಾ ಪ್ರದೇಶದ ನಿವಾಸಿಯಾದ ಈತ 2023ರ ಸೆಪ್ಟೆಂಬರ್ 27 ಶಟರಿಂಗ್ ಕೆಲಸಕ್ಕೆಂದು ಡಯಲ್‌ಗಾಮ್‌ಗೆ ಹೋಗುವುದಾಗಿ ತಿಳಿಸಿದ್ದ. ಬಳಿಕ ಆತ ವಾಪಸ್ ಮನೆಗೆ ಬಂದಿರಲಿಲ್ಲ. ಹುಡುಕಾಟ ನಡೆಸಿದ ಕುಟುಂಬಸ್ಥರು 2023ರ ಅಕ್ಟೋಬರ್ 3 ರಂದು ಕುಲ್ಗಾಮ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.
ಟಿಆರ್‌ಎಫ್ ಸೇಪರ್ಡೆ
ತದನಂತರ ಈತ ಎಲ್‌ಇಟಿ ಅಂಗಸಂಸ್ಥೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಸಂಘಟನೆಯನ್ನು ಸೇರಿಕೊಂಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈತನ ವಿರುದ್ಧ ಕುಲ್ಗಾಮ್ ಪೊಲೀಸ್ ಠಾಣೆಯಲ್ಲಿ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UಂPಂ) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
5 ದಿನಗಳ ಕಾರ್ಯಾಚರಣೆ
ಜುಲೈ 3 ರಂದು ಮೀಮಂದರ್ ಪ್ರದೇಶದ ದಟ್ಟವಾದ ಸೇಬಿನ ತೋಟದಲ್ಲಿ ಇಬ್ಬರು ಉಗ್ರರು ಅಡಗಿರುವುದನ್ನು ಭದ್ರತಾ ಪಡೆಗಳು ಸರ್ವೆಲೆನ್ಸ್ (ಕಣ್ಗಾವಲು) ಕ್ಯಾಮೆರಾಗಳ ಮೂಲಕ ಪತ್ತೆಹಚ್ಚಿದ್ದವು.
ಕಳೆದ ಐದು ದಿನಗಳಿಂದ ಈ ಪ್ರದೇಶವನ್ನು ಸುತ್ತುವರಿದಿದ್ದ, ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಪ್ರಾರಂಭಿಸಿದ್ದವು. ಇಂದು ನಡೆದ ಗುಂಡಿನ ಚಕಮಕಿಯಲ್ಲಿ ಗನಿ ಹತನಾಗಿದ್ದಾನೆ. ಆತನೊಂದಿಗಿದ್ದ ಮತ್ತೊಬ್ಬ ಉಗ್ರನನ್ನು ಲತೀಫ್ ಎಂದು ನಂಬಲಾಗಿದ್ದು, ಆತನಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

