HEALTH TIPS

ಎಲ್ಲೆಲ್ಲೂ ಜೆನ್‌ ಝೀಗಳದ್ದೇ ಹವಾ; Gen-Z ಅಂದ್ರೆ ಯಾರು? ಈ ಪೀಳಿಗೆ ಏಕೆ ಇಷ್ಟೊಂದು ಪವರ್‌ಫುಲ್?

ಇಂದಿನ ಯುವ ಸಮೂಹ ಅದರಲ್ಲೂ ಈ ಜೆನ್‌ ಝೀ ಗಳು (Gen Z) ಸಮಾಜದಲ್ಲಿ ಸಾಕಷ್ಟು ಬದಲಾವಣೆಗಳನ್ನು ತರುತ್ತಿದ್ದಾರೆ. ತಮ್ಮ ಮೋಜು-ಮಸ್ತಿಯ ಹೊರತಾಗಿ ತಪ್ಪುಗಳು ನಡೆದಾಗ ಅದನ್ನು ಧೈರ್ಯದಿಂದ ಪ್ರಶ್ನಿಸುತ್ತಿದ್ದಾರೆ. ಸ್ವಾತಂತ್ರ್ಯ ಸಮಾನತೆ, ಹಕ್ಕುಗಳ ಬಗ್ಗೆ ಧ್ವನಿಯೆತ್ತಿ ಮಾತನಾಡುತ್ತಿದ್ದಾರೆ.

ಹೌದು ಕೆಲವು ತಿಂಗಳುಗಳ ಹಿಂದೆಯಷ್ಟೇ ನೇಪಾಳದ ಜೆನ್‌ ಝೀಗಳು ಅಲ್ಲಿನ ಭ್ರಷ್ಟಾಚಾರ ಮತ್ತು ಹಳೆಯ ರಾಜಕೀಯ ವ್ಯವಸ್ಥೆಯ ವಿರುದ್ಧ ತಿರುಗಿ ಬಿದ್ದು, ಸರ್ಕಾರವನ್ನೇ ಬದಲಿಸಿದರು. ಇದನ್ನೇ ಪ್ರೇರಣೆಯನ್ನಾಗಿಟ್ಟುಕೊಂಡು ಭಾರತದಲ್ಲಿನ ಯುವ ಸಮುದಾಯ ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ವಿರುದ್ಧ ದೊಡ್ಡ ಮಟ್ಟದ ಪ್ರತಿಭಟನೆಯನ್ನು ನಡೆಸಿ, ಕೇಂದ್ರ ಶಿಕ್ಷಣ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮಾಡಿದ್ದಾರೆ. ಜೆನ್‌ ಝೀ ಗಳು ಈ ಪ್ರತಿಭಟನೆಯ ಯಶಸ್ಸಿಗೆ ಅತಿದೊಡ್ಡ ಕೊಡುಗೆ ನೀಡಿದವರು ಎಂದು ಹೇಳಬಹುದು. ಈ ಎರಡು ಘಟನೆಗಳು ಜನರೇಷನ್‌ ಝಡ್‌ ಪೀಳಿಗೆ ಎಷ್ಟು ಶಕ್ತಿಶಾಲಿ ಎಂಬುದನ್ನು ಜಗತ್ತಿಗೆ ತೋರಿಸಿವೆ. ಸರ್ಕಾರಗಳನ್ನೇ ಅಲ್ಲಾಡಿಸಿದ ಈ ಜನರೇಷನ್‌ ಝಡ್‌ ಯಾರು? ಈ ಯುವ ಪೀಳಿಗೆ ಏಕೆ ಇಷ್ಟೊಂದು ಪವರ್‌ ಫುಲ್‌ ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.

ಜನರೇಷನ್‌  ಝಡ್‌ ಯಾರು?

ಜನರೇಷನ್ ಝಡ್ (Gen-Z) ಎಂದರೆ ಸಾಮಾನ್ಯವಾಗಿ 1997 ಮತ್ತು 2012 ರ ನಡುವೆ ಜನಿಸಿದ ಜನರ ಪೀಳಿಗೆಯಾಗಿದೆ. ಇದು ತಂತ್ರಜ್ಞಾನ, ಇಂಟರ್ನೆಟ್ ಮತ್ತು ಸಾಮಾಜಿಕ ಮಾಧ್ಯಮಗಳೊಂದಿಗೆ ಬೆಳೆದ ಯುವಜನರ ಗುಂಪು.  ಇಂಟರ್ನೆಟ್, ಸ್ಮಾರ್ಟ್‌ಫೋನ್‌ಗಳು ಮತ್ತು ಸಾಮಾಜಿಕ ಮಾಧ್ಯಮದ ಯುಗದಲ್ಲಿ ಬೆಳೆದ ಪೀಳಿಗೆ ಇದಾಗಿದೆ.

ಜನರೇಷನ್ ಝಡ್  ಬಾಲ್ಯದಿಂದಲೂ ಇಂಟರ್ನೆಟ್, ಸ್ಮಾರ್ಟ್‌ಫೋನ್‌ಗಳು, ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ಜಗತ್ತನ್ನು ತಮ್ಮ ದೈನಂದಿನ ಜೀವನದ ಭಾಗವಾಗಿ ಸ್ವೀಕರಿಸಿದ ಪೀಳಿಗೆಯಾಗಿದೆ. ಈ ಪೀಳಿಗೆ ಸೋಷಿಯಲ್‌ ಮೀಡಿಯಾಗಳನ್ನು ಮೋಜು, ಪ್ರತಿಭೆಯನ್ನು ಪ್ರದರ್ಶಿಸುವ ವೇದಿಕೆಯನ್ನಾಗಿ ಮಾತ್ರವಲ್ಲ ತಮ್ಮ ಅಭಿಪ್ರಾಯಗಳನ್ನು ತಿಳಿಸಲು ಸಹ ಬಳಸುತ್ತದೆ. ಹೌದು ಶಿಕ್ಷಣ, ವೃತ್ತಿ, ಮಾನಸಿಕ ಆರೋಗ್ಯ, ಪರಿಸರ, ಲಿಂಗ ಸಮಾನತೆ ಮತ್ತು ಸಾಮಾಜಿಕ ನ್ಯಾಯದಂತಹ ವಿಷಯಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಈ ಪೀಳಿಗೆ ಮುಕ್ತವಾಗಿ ವ್ಯಕ್ತಪಡಿಸುತ್ತಿದೆ. ಇತ್ತೀಚಿಗೆ ದೆಹಲಿಯ ಜಂತರ್‌ ಮಂತರ್‌ನಲ್ಲಿ ನಡೆದ ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಹಗರಣದ ವಿರುದ್ಧ ನಡೆದ ಜೆಜ್‌ ಝೀ ಗಳ ಪ್ರತಿಭಟನೆಯೇ ಇದಕ್ಕೆ ಸೂಕ್ತ ಉದಾಹರಣೆ.

ಜನರೇಷನ್ ಝಡ್ ಹೆಸರು ಹೇಗೆ ಬಂತು?

ಮಿಲೇನಿಯಲ್ಸ್ ಪೀಳಿಗೆಯನ್ನು ಜನರೇಷನ್ Y ಎಂದು ಕರೆಯಲಾಗುತ್ತಿದ್ದರಿಂದ, ನಂತರದ ಪೀಳಿಗೆಯನ್ನು ಇಂಗ್ಲಿಷ್ ವರ್ಣಮಾಲೆಯ ಮುಂದಿನ ಅಕ್ಷರವಾದ Z ಅನ್ನು ಆಧರಿಸಿ ಜನರೇಷನ್ Z ಎಂದು ಹೆಸರಿಸಲಾಯಿತು.

ಜನರೇಷನ್ ಝಡ್ ಪೀಳಿಗೆಯ ಚಿಂತನೆ ಏಕೆ ಭಿನ್ನವಾಗಿದೆ?

ಈ ಪೀಳಿಗೆಯು ಮಾಹಿತಿಯನ್ನು ಸಂಗ್ರಹಿಸಲು ಟಿವಿ ಅಥವಾ ಪತ್ರಿಕೆಗಳಿಗಿಂತ ಹೆಚ್ಚಾಗಿ ಸಾಮಾಜಿಕ ಮಾಧ್ಯಮ ಮತ್ತು ಆನ್‌ಲೈನ್ ಮೂಲಗಳನ್ನು ಬಳಸುತ್ತದೆ. ಯಾವುದೇ ವಿಷಯದ ಬಗ್ಗೆ ತಮ್ಮ ಅಭಿಪ್ರಾಯವನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸುವಲ್ಲಿ ಮತ್ತು ಡಿಜಿಟಲ್ ವಿಧಾನಗಳ ಮೂಲಕ ಇತರರೊಂದಿಗೆ ಸಂಪರ್ಕ ಸಾಧಿಸುವಲ್ಲಿ ಈ ಪೀಳಿಗೆಯವರು ತುಂಬಾನೇ ಸಕ್ರಿಯರಾಗಿದ್ದಾರೆ.  ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಈ ಪೀಳಿಗೆಯ ದೈನಂದಿನ ದಿನಚರಿಯ ಅವಿಭಾಜ್ಯ ಅಂಗವಾಗಿದೆ. ಅವರು ಮಾಹಿತಿಯನ್ನು ಸಂಗ್ರಹಿಸಲು, ಕಲಿಯಲು ಮತ್ತು ತಮ್ಮನ್ನು ತಾವು ವ್ಯಕ್ತಪಡಿಸಲು ಈ ಮಾಧ್ಯಮವನ್ನು ವ್ಯಾಪಕವಾಗಿ ಬಳಸುತ್ತಾರೆ.

ಜನರೇಷನ್ ಝಡ್ ಜನರು ಪರಿಸರ, ಮಾನಸಿಕ ಆರೋಗ್ಯ, ಸಮಾನತೆ, ವೈವಿಧ್ಯತೆ ಮತ್ತು ಸಾಮಾಜಿಕ ಜವಾಬ್ದಾರಿಯಂತಹ ವಿಷಯಗಳನ್ನು ಹಿಂದಿನ ಹಲವು ತಲೆಮಾರುಗಳಿಗಿಂತ ಹೆಚ್ಚು ಮುಕ್ತವಾಗಿ ಚರ್ಚಿಸುತ್ತಾರೆ.  ಅಲ್ಲದೆ‌ ಜೆನ್‌ ಝೀ ಗಳು ತುಂಬಾನೇ ಬುದ್ಧಿವಂತಿಕೆಯಿಂದ ಯೋಚಿಸುತ್ತಾರೆ.  ಈ ಪೀಳಿಗೆಯು ಕೇವಲ 9 ಟು 5 ಕೆಲಸಗಳನ್ನು ಅವಲಂಬಿಸುವುದಕ್ಕಿಂತ ಬಿಸಿನೆಸ್, ನವೋದ್ಯಮ, ಕಂಟೆಂಟ್‌ ಕ್ರೀಯೆಷನ್, ಡಿಜಿಟಲ್ ಮಾರ್ಕೆಟಿಂಗ್ ಮತ್ತು ಇತರ ಹೊಸ ವೃತ್ತಿ ಆಯ್ಕೆಗಳತ್ತ ಆಕರ್ಷಿತವಾಗಿದೆ.

ಜನರೇಷನ್ ಝಡ್ ಅತ್ಯಂತ ಪ್ರಭಾವಶಾಲಿ ಪೀಳಿಗೆಯೇ?

ಬಾಂಗ್ಲಾದೇಶ, ನೇಪಾಳ ಮತ್ತು ಈಗ ಭಾರತದಲ್ಲಿ ನಡೆದ ಜೆನ್‌ ಝೀ ಚಳುವಳಿಗಳೇ ಈ ಪೀಳಿಗೆಯು ಎಷ್ಟೊಂದು ಪ್ರಭಾವಶಾಲಿ ಎಂಬುದನ್ನು ತೋರಿಸಿಕೊಟ್ಟಿದೆ. ಈ ಪೀಳಿಗೆಯ ಜನ ತಮಗಾಗಿ ಕೆಲಸ ಮಾಡುವುದು ಮಾತ್ರವಲ್ಲಸಾಮಾಜಿಕ ಬದಲಾವಣೆಗಳಿಗೂ ಸಹ ಶ್ರಮಿಸುತ್ತಿದ್ದಾರೆ.  ಒಟ್ಟಾರೆಯಾಗಿ, ಜೆನ್‌ ಝೀಗಳು ಒಗ್ಗಟ್ಟಾಗಿ ನಿಂತು  ಸವಾಲುಗಳನ್ನು ಧೈರ್ಯದಿಂದ ಎದುರಿಸಿ ಜಗತ್ತನ್ನು ಸಕಾರಾತ್ಮಕವಾಗಿ ಬದಲಾಯಿಸಲು ಪ್ರಯತ್ನಿಸುತ್ತಿದ್ದಾರೆ.  ಮುಂಬರುವ ವರ್ಷಗಳಲ್ಲಿ ರಾಜಕೀಯ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ಮಾರುಕಟ್ಟೆ ಸೇರಿದಂತೆ ಪ್ರತಿಯೊಂದು ಕ್ಷೇತ್ರಗಳಲ್ಲೂ ಜೆನ್‌ ಝೀ ಗಳ ಸಾಮಾರ್ಥ್ಯ ಪ್ರಭಾವ ಬೀರಲಿದೆ.

ಜನರೇಷನ್  ಝೆಡ್ ನಂತರದ ಪೀಳಿಗೆಯನ್ನು ಏನೆಂದು ಕರೆಯುತ್ತಾರೆ?

ಜನರೇಷನ್ Z ನಂತರದ ಪೀಳಿಗೆಯನ್ನು ಜನರೇಷನ್ ಆಲ್ಫಾ ಎಂದು ಕರೆಯಲಾಗುತ್ತದೆ. ಈ ಹೆಸರನ್ನು ಆಸ್ಟ್ರೇಲಿಯಾದ ಸಂಶೋಧಕ ಮಾರ್ಕ್ ಮೆಕ್ರಿಂಡಲ್ 2008 ರಲ್ಲಿ ಸೃಷ್ಟಿಸಿದರು ಮತ್ತು ಇದು ಗ್ರೀಕ್ ವರ್ಣಮಾಲೆಯ ಮೊದಲ ಅಕ್ಷರ “ಆಲ್ಫಾ” ನಿಂದ ಬಂದಿದೆ. ಈ ಪೀಳಿಗೆಯವರು ಸಂಪೂರ್ಣವಾಗಿ 21 ನೇ ಶತಮಾನದಲ್ಲಿ ಜನಿಸಿದ ಮೊದಲನೆಯವರು. 2013 ರಿಂದ 2024 ರವರೆಗೆ ಜನಿಸಿದವರು ಜೆನ್‌ ಆಲ್ಫಾಗಳು. 2025 ರ ನಂತರ ಪ್ರಾರಂಭವಾಗುವ ಪೀಳಿಗೆಯನ್ನು ಜನರೇಷನ್ ಬೀಟಾ ಎಂದು ಕರೆಯಲಾಗುತ್ತದೆ, ಇದು 2025 ರಿಂದ 2039 ರವರೆಗೆ ಇರುತ್ತದೆ.

ಈ ವಿಭಿನ್ನ ಪೀಳಿಗೆಗಳಿಗೆ ಹೆಸರು ಇಡುವುದು ಯಾರು?

ಈ ಪೀಳಿಗೆಗಳ  ಹೆಸರುಗಳನ್ನು ಯಾವುದೇ ಸರ್ಕಾರಿ ಸಂಸ್ಥೆ ಹೆಸರಿಸಿಲ್ಲ. ಸಮಾಜಶಾಸ್ತ್ರಜ್ಞರು ಮತ್ತು ಸಂಶೋಧಕರು ಅವುಗಳನ್ನು ನಿಯೋಜಿಸುತ್ತಾರೆ. ಜನರೇಷನ್ ಬೀಟಾ ಎಂಬ ಪದವನ್ನು ಪ್ರಸಿದ್ಧ ಸಮಾಜಶಾಸ್ತ್ರಜ್ಞ ಮಾರ್ಕ್ ಮೆಕ್‌ಕ್ರಿಂಡಲ್ ಸೃಷ್ಟಿಸಿದರು.

ಈ ವಿಭಿನ್ನ ಪೀಳಿಗೆಗಳ ಅರ್ಥವೇನು?

ಸಮಾಜಶಾಸ್ತ್ರದಲ್ಲಿ, ಒಂದು ಪೀಳಿಗೆಯನ್ನು ಸರಿಸುಮಾರು 15 ರಿಂದ 20 ವರ್ಷಗಳ ಅಂತರದಲ್ಲಿ ಜನಿಸಿದ ಜನರ ಗುಂಪು ಎಂದು ವ್ಯಾಖ್ಯಾನಿಸಲಾಗಿದೆ. ಪ್ರತಿಯೊಂದು ಪೀಳಿಗೆಯೂ ಅದರ ಕಾಲದ ತಂತ್ರಜ್ಞಾನ, ಸಾಮಾಜಿಕ ಬದಲಾವಣೆಗಳು ಮತ್ತು ಆರ್ಥಿಕ ಪರಿಸ್ಥಿತಿಗಳಿಂದ ಪ್ರಭಾವಿತವಾಗಿರುತ್ತದೆ.

  • ಬೇಬಿ ಬೂಮರ್ಸ್ (1946-1964): ಎರಡನೇ ಮಹಾಯುದ್ಧದ ನಂತರ ಜನಿಸಿದ ಪೀಳಿಗೆ
  • ಜನರೇಷನ್ ಎಕ್ಸ್ (1965-1980): ಸಾಂಪ್ರದಾಯಿಕ ಮತ್ತು ಆಧುನಿಕ ಯುಗಗಳ ನಡುವಿನ ಪೀಳಿಗೆ
  • ಮಿಲೇನಿಯಲ್ಸ್ /ಜೆನ್ ವೈ (1981-1996): ಇಂಟರ್ನೆಟ್‌ನ ಆರಂಭಿಕ ಆಗಮನದೊಂದಿಗೆ ಬೆಳೆದ ಪೀಳಿಗೆ
  • ಜನರಲ್ ಝೆಡ್‌ / ಜೆನ್‌ ಝೀ (1997-2012): ಡಿಜಿಟಲ್ ಯುಗದಲ್ಲಿ ಹುಟ್ಟಿ ಬೆಳೆದ ಪೀಳಿಗೆ
  • ಜನರಲ್ ಆಲ್ಫಾ (2013 ರಿಂದ 2024): ಎಐ, ಸ್ಮಾರ್ಟ್ ಸಾಧನಗಳು ಮತ್ತು ಹೆಚ್ಚು ಡಿಜಿಟಲ್ ಪರಿಸರದಲ್ಲಿ ಬೆಳೆಯುತ್ತಿರುವ ಹೊಸ ಪೀಳಿಗೆ

ಇಷ್ಟೆಲ್ಲಾ ಪೀಳಿಗೆಗಳಿದ್ದರೂ ಇವುಗಳಲ್ಲಿ ಇಂದು ಹೆಚ್ಚು ಚರ್ಚಿಸಲ್ಪಡುವ ಪೀಳಿಗೆ ಎಂದರೆ ಅದು ಜನರೇಷನ್ ಝಡ್.

ಪ್ರತಿ ಪೀಳಿಗೆಗೂ ಹೆಸರಿಡುವ ಒಂದು ಸಾಮಾನ್ಯ ಪದ್ಧತಿ ಇದೆಯೇ?

ಪ್ರತಿ ಪೀಳಿಗೆಗಳಿಗೂ ಹೆಸರಿಡುವ ಪದ್ಧತಿ ಚಾಲ್ತಿಯಲ್ಲಿದೆ. ನೀವು ಆಗಾಗ್ಗೆ ಜೆನ್‌ ಝೀ, ಜೆನ್‌ ಆಲ್ಫಾ, ಜೆನ್‌ ಬೀಟಾ ಪದಗಳನ್ನು ಕೇಳಿರುತ್ತೀರಿ ಅಲ್ವಾ. ಈ ಪದಗಳು ನಮ್ಮ ಪೀಳಿಗೆಗಳನ್ನು ವಿವರಿಸುತ್ತವೆ. ಹಿಂದೆಲ್ಲಾ ಪ್ರತಿ 20 ವರ್ಷಗಳಿಗೊಮ್ಮೆ ಒಂದು ಪೀಳಿಗೆ ಬದಲಾಗುತ್ತಿತ್ತು, ಆದರೆ ಈಗ ತಂತ್ರಜ್ಞಾನದ ವೇಗ ಎಷ್ಟು ವೇಗವಾಗಿದೆ ಎಂದರೆ ಈ ಪೀಳಿಗೆಗಳ ಬದಲಾವಣೆಗಳು ಕೇವಲ 10 ರಿಂದ 11 ವರ್ಷಗಳಲ್ಲಿ ಸಂಭವಿಸುತ್ತಿವೆ. ಜನವರಿ 1, 2025 ರಿಂದ, ಜನರೇಷನ್ ಬೀಟಾ ಎಂಬ ಹೊಸ ಪೀಳಿಗೆ ಪ್ರಾರಂಭವಾಗಿದೆ. ಹಿಂದಿನ ತಲೆಮಾರುಗಳು ಪ್ರತಿ 20 ವರ್ಷಗಳಿಗೊಮ್ಮೆ ಬದಲಾಗುತ್ತಿದ್ದವು, ಆದರೆ ಈಗ ಈ ಬದಲಾವಣೆ ಕೇವಲ 11 ವರ್ಷಗಳಲ್ಲಿ ಸಂಭವಿಸುತ್ತಿವೆ. ಜನರೇಷನ್ ಝಡ್ (1997-2012) ನಂತರ ಜನರೇಷನ್ ಆಲ್ಫಾ (2013-2024), ಮತ್ತು ಈಗ, ಜನವರಿ 1, 2025 ರಿಂದ ಜನರೇಷನ್ ಬೀಟಾ ಪೀಳಿಗೆ ಪ್ರಾರಂಭವಾಗಿದ್ದು, ಈ ಸಮಯದಲ್ಲಿ ಜನಿಸಿದ ಮಕ್ಕಳನ್ನು ಜನರೇಷನ್‌ ಬೀಟಾ ಎಂದು ಕರೆಯಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries