ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಶನಿವಾರ ಹೊರಡಿಸಿದ ಅಧಿಸೂಚನೆಯಲ್ಲಿ, ನೈಸರ್ಗಿಕ ಅನಿಲ (ಪೂರೈಕೆ, ನಿಯಂತ್ರಣ) ಆದೇಶ-2026 ಆದೇಶ ಹಿಂಪಡೆದಿದೆ ಎಂದು ತಿಳಿಸಿದೆ.
ನೈಸರ್ಗಿಕ ಅನಿಲ ಪೂರೈಕೆಗೆ ಮಾರ್ಚ್ 9ರಂದು ಅಗತ್ಯ ಸರಕುಗಳ ಕಾಯ್ದೆಯಡಿಯಲ್ಲಿ ಅಡಿಯಲ್ಲಿ ನಿರ್ಬಂಧ ವಿಧಿಸಲಾಗಿತ್ತು. ಹೋರ್ಮುಝ್ ಜಲಸಂಧಿಯ ಮೂಲಕ LNG ಸಾಗಣೆಯಲ್ಲಿ ಉಂಟಾದ ವ್ಯತ್ಯಯದಿಂದ ಕೆಲ ಪೂರೈಕೆದಾರರು ಅನಿಲ ಸಾಗಣೆಯನ್ನು ಬೇರೆ ಮಾರ್ಗಗಳಿಗೆ ತಿರುಗಿಸಿದ್ದರು. ಇದರಿಂದ ಭಾರತದ ಇಂಧನ ಭದ್ರತೆ ಕುರಿತು ಆತಂಕಗಳು ವ್ಯಕ್ತವಾಗಿದ್ದವು.
ಕದನ ವಿರಾಮ ಜಾರಿಗೆ ಬಂದ ನಂತರ, ಮಾತುಕತೆಗಳು ನಡೆಯುತ್ತಿದ್ದು, ಹಾರ್ಮುಝ್ ಜಲಸಂಧಿಯ ಮೂಲಕ ಸಮುದ್ರ ಸಂಚಾರ ಪುನರಾರಂಭಗೊಳ್ಳುವುದರೊಂದಿಗೆ ಪರಿಸ್ಥಿತಿ ಸ್ಥಿರವಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಭಾರತವು ತನ್ನ ಒಟ್ಟು ಕಚ್ಚಾ ತೈಲದ ಅಗತ್ಯದ ಸುಮಾರು ಶೇ.88ರಷ್ಟನ್ನು ಆಮದು ಮಾಡಿಕೊಳ್ಳುತ್ತದೆ. ಜೊತೆಗೆ, ದೇಶದ ನೈಸರ್ಗಿಕ ಅನಿಲ ಬೇಡಿಕೆಯ ಸುಮಾರು ಅರ್ಧದಷ್ಟು ಭಾಗವೂ ಆಮದಿನ ಮೇಲೆಯೇ ಅವಲಂಬಿತವಾಗಿದೆ. ಭಾರತದ ಕಚ್ಚಾ ತೈಲ ಆಮದುಗಳಲ್ಲಿ ಸುಮಾರು ಶೇ.40ರಿಂದ 45ರಷ್ಟು ಹಾಗೂ ದ್ರವೀಕೃತ ನೈಸರ್ಗಿಕ ಅನಿಲ (LNG) ಪೂರೈಕೆಯಲ್ಲಿ ಸುಮಾರು ಶೇ.65ರಷ್ಟು ಪಶ್ಚಿಮ ಏಷ್ಯಾದಿಂದ ಬರುತ್ತದೆ. ಹೀಗಾಗಿ, ಹೋರ್ಮುಝ್ ಜಲಸಂಧಿಯು ಭಾರತದ ಇಂಧನ ಭದ್ರತೆಗೆ ಅತ್ಯಂತ ಮಹತ್ವದ ಸಾಗಣೆ ಮಾರ್ಗವಾಗಿದೆ.

