ನಾಗ್ಪುರ: ಬಿಜೆಪಿ ಯಾವುದೇ ಸಮುದಾಯದ ವಿರುದ್ಧವಲ್ಲ. ಬಿಜೆಪಿಗೆ ಎಲ್ಲ ಸಮುದಾಯಗಳು, ಧರ್ಮಗಳು ಹಾಗೂ ಜಾತಿಗಳನ್ನು ಜೊತೆಯಲ್ಲಿ ತೆಗೆದುಕೊಂಡು ಕೆಲಸ ಮಾಡಲು ಬಯಸುತ್ತದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಶನಿವಾರ ಇಲ್ಲಿ ಆಯೋಜನೆಗೊಂಡಿದ್ದ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಸ್ಮರಣಾರ್ಥ ಉಪನ್ಯಾಸ ಸರಣಿಯನ್ನುದ್ದೇಶಿಸಿ ಮಾತನಾಡಿದ ನಿತಿನ್ ಗಡ್ಕರಿ, "ಜನಸಂಘದ ಸಂಸ್ಥಾಪಕ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಚಿಂತನೆಗಳು ಈಗಲೂ ಪ್ರಸ್ತುತವಾಗಿದ್ದು, ಬಿಜೆಪಿ ಅವುಗಳೊಂದಿಗೆ ಮುನ್ನಡೆಯಬೇಕು" ಎಂದು ಕರೆ ನೀಡಿದರು.
ರಾಷ್ಟ್ರೀಯ ಚಿಂತನೆಗಳೊಂದಿಗೆ ಎಲ್ಲ ಧರ್ಮದ ಜನರನ್ನೂ ಬೆಸೆಯುವ ಮೂಲಕ, ಭಾರತವನ್ನು ವಿಶ್ವಗುರುವನ್ನಾಗಿಸಬೇಕು. ಇದು ಕೇವಲ ಹಿಂದೂ ಭಾರತವಲ್ಲ; ಬದಲಿಗೆ, ಎಲ್ಲ ಭಾರತೀಯರಿಗೂ ಸೇರಿದೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಹಾಗೂ ಪಂಡಿತ್ ಜವಾಹರಲಾಲ್ ನೆಹರೂ ತುಷ್ಟೀಕರಣ ನೀತಿಯನ್ನು ಅಳವಡಿಸಿಕೊಂಡರು ಎಂದು ಆರೋಪಿಸಿದ ನಿತಿನ್ ಗಡ್ಕರಿ, ಕಾಂಗ್ರೆಸ್ ಬಿಜೆಪಿಯ ಮಾತೃ ಪಕ್ಷ ಜನಸಂಘದ ಕುರಿತು ತಪ್ಪು ಅಭಿಪ್ರಾಯವನ್ನು ಹರಡುತ್ತಿದೆ ಎಂದು ದೂಷಿಸಿದರು.
ದೇಶ ವಿಭಜನೆಯನ್ನು ಉಲ್ಲೇಖಿಸಿದ ಅವರು, "ದೇಶವನ್ನು ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ದೇಶಗಳನ್ನಾಗಿ ವಿಭಜಿಸಲಾಯಿತು. ಈ ವಿಭಜನೆಯ ಬಳಿಕದ ಇತಿಹಾಸವನ್ನು ನಾವೆಲ್ಲ ಬಲ್ಲೆವು ಹಾಗೂ ನಾವೀಗಲೂ ಅದರ ದುಷ್ಪರಿಣಾಮಗಳನ್ನು ಎದುರಿಸುತ್ತಿದ್ದೇವೆ" ಎಂದು ಆರೋಪಿಸಿದರು.
"ಇಂದೂ ಕೂಡಾ ಬಿಜೆಪಿಯ ಸೈದ್ಧಾಂತಿಕ ವ್ಯಾಖ್ಯಾನದ ಸ್ವರೂಪ ದೇಶ ಸರ್ವೋಚ್ಚ; ರಾಷ್ಟ್ರೀಯತೆ ನಮ್ಮ ಸಾಮೂಹಿಕ ನಂಬಿಕೆ, ಭಕ್ತಿ ಮತ್ತು ಸ್ಫೂರ್ತಿ ಎಂಬುದಾಗಿದೆ. ದೇಶದೆಡೆಗಿನ ಭಕ್ತಿ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಜೀವನದ ಹೆಗ್ಗುರುತಾಗಿತ್ತು. ಆದರೆ, ಕಾಂಗ್ರೆಸ್ ಮತ್ತು ಪಂಡಿತ್ ಜವಾಹರಲಾಲ್ ನೆಹರೂ ಅಳವಡಿಸಿಕೊಂಡ ನೀತಿ ತುಷ್ಟೀಕರಣವಾಗಿತ್ತು" ಎಂದು ಅವರು ದೂರಿದರು.
ಕಾಂಗ್ರೆಸ್ ತನ್ನ ಮತ ಬ್ಯಾಂಕ್ ರಾಜಕೀಯಕ್ಕಾಗಿ ಜಾತ್ಯತೀತೆಯ ಹೆಸರಿನಲ್ಲಿ ತುಷ್ಟೀಕರಣವನ್ನು ಅಪ್ಪಿಕೊಂಡಿತು ಎಂದು ಅವರು ಆರೋಪಿಸಿದರು.
ಕಾಂಗ್ರೆಸ್ ಧರ್ಮಗಳ ನಡುವೆ ವಿಭಜನೆಯನ್ನು ಬಿತ್ತಿತು ಹಾಗೂ ಜಾತೀಯತೆ ಮತ್ತು ಕೋಮುವಾದದ ನೇತೃತ್ವ ವಹಿಸಿತು ಎಂದೂ ಅವರು ಆಪಾದಿಸಿದರು.
ಆದರೆ, ಬಿಜೆಪಿ ಯಾವುದೇ ಸಮುದಾಯದ ವಿರುದ್ಧವಲ್ಲ ಎಂದು ಅವರು ಒತ್ತಿ ಹೇಳಿದರು.

