HEALTH TIPS

ಪಶ್ಚಿಮ ಏಷ್ಯಾ ಸಂಘರ್ಷದಿಂದ LPG ಸಿಲಿಂಡರ್ ಬೆಲೆ 2,000 ರೂ. ವರೆಗೆ ಏರಿಕೆಯಾಗುವ ಸಾಧ್ಯತೆಯಿತ್ತು: ಪ್ರಧಾನಿ ಮೋದಿ

ಜೈಪುರ: ಪಶ್ಚಿಮ ಏಷ್ಯಾದ ಸಂಘರ್ಷದಿಂದ ಉಂಟಾದ ಜಾಗತಿಕ ಇಂಧನ ಬಿಕ್ಕಟ್ಟಿನ ಪರಿಣಾಮವಾಗಿ ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ 2,000 ರೂ.ವರೆಗೆ ಏರಿಕೆಯಾಗುವ ಸಾಧ್ಯತೆ ಇತ್ತು. ಆದರೆ ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳಿಂದ ಗ್ರಾಹಕರ ಮೇಲಿನ ಹೆಚ್ಚುವರಿ ಹೊರೆ ತಪ್ಪಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದರು.

ರಾಜಸ್ಥಾನದ ಬಲೋತ್ರಾ ಜಿಲ್ಲೆಯ ಪಚ್ಚಪದ್ರದಲ್ಲಿ ನಡೆದ ಸಂಸ್ಕರಣಾಗಾರ ಯೋಜನೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಶ್ಚಿಮ ಏಷ್ಯಾದ ಸಂಘರ್ಷವು 21ನೇ ಶತಮಾನದ ಅತ್ಯಂತ ಗಂಭೀರ ಇಂಧನ ಬಿಕ್ಕಟ್ಟಿಗೆ ಕಾರಣವಾಗಿದೆ ಎಂದು ಹೇಳಿದರು.

'ಭಾರತವು ಸಮಯಕ್ಕೆ ಸರಿಯಾಗಿ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಸೂಕ್ತ ಕ್ರಮಗಳನ್ನು ಕೈಗೊಂಡಿತು. ಸಂಪನ್ಮೂಲಗಳ ಸಮತೋಲಿತ ಬಳಕೆ ಮತ್ತು ರಾಜತಾಂತ್ರಿಕ ಪ್ರಯತ್ನಗಳ ಮೂಲಕ ಬಿಕ್ಕಟ್ಟಿನ ಪರಿಣಾಮಗಳನ್ನು ನಿಯಂತ್ರಿಸಲು ಸಾಧ್ಯವಾಯಿತು' ಎಂದು ಅವರು ಹೇಳಿದರು.

'ಆ ಪರಿಸ್ಥಿತಿಯಲ್ಲಿ ದೇಶೀಯ ಎಲ್‌ಪಿಜಿ ಸಿಲಿಂಡರ್ ಬೆಲೆ 2,000 ರೂ.ವರೆಗೆ ಏರಿಕೆಯಾಗಬಹುದಿತ್ತು ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದರು. ಆದರೆ ಸರ್ಕಾರವು ದೇಶೀಯ ಗ್ರಾಹಕರ ಮೇಲಿನ ಹೊರೆ ಹೆಚ್ಚಾಗದಂತೆ ನೋಡಿಕೊಂಡಿತು' ಎಂದು ಹೇಳಿದರು.

ಪ್ರಸ್ತುತ ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳು 950 ರೂ.ಗಿಂತ ಕಡಿಮೆ ಬೆಲೆಯಲ್ಲಿ ಲಭ್ಯವಿದ್ದು, ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ 650 ರೂ.ಗಿಂತ ಕಡಿಮೆ ದರದಲ್ಲಿ ಸಿಗುತ್ತಿವೆ ಎಂದು ಅವರು ತಿಳಿಸಿದರು.

'ಎರಡು ದಿನಗಳ ಹಿಂದಷ್ಟೇ ಸರ್ಕಾರವು ವಾಣಿಜ್ಯ ಅನಿಲ ದರಗಳಲ್ಲೂ ಕಡಿತ ಮಾಡಿದೆ. ಇದು ಸರ್ಕಾರವು ಜನಸಾಮಾನ್ಯರ ಹಿತಾಸಕ್ತಿಗೆ ಆದ್ಯತೆ ನೀಡುತ್ತಿರುವುದನ್ನು ತೋರಿಸುತ್ತದೆ' ಎಂದು ಹೇಳಿದರು.

ದಿಲ್ಲಿಯಲ್ಲಿ 14.2 ಕೆಜಿ ಸಾಮರ್ಥ್ಯದ ದೇಶೀಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಪ್ರಸ್ತುತ 942 ರೂ.ಗಳಾಗಿದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳು ಪ್ರತಿ ಸಿಲಿಂಡರ್‌ಗೆ 300 ರೂ. ಸಬ್ಸಿಡಿ ಸೇರಿ 642 ರೂ.ಗಳಿಗೆ ಪಡೆಯುತ್ತಿದ್ದಾರೆ. ಅಮೆರಿಕ-ಇರಾನ್ ಸಂಘರ್ಷದ ಬಳಿಕ ದೇಶೀಯ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ ಸುಮಾರು 90 ರೂ.ಗಳಷ್ಟು ಏರಿಕೆಯಾಗಿದೆ.

2022ರಲ್ಲಿ ರಷ್ಯಾ-ಉಕ್ರೇನ್ ಯುದ್ಧದ ಬಳಿಕ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಯೂರಿಯಾ ಬೆಲೆ ಪ್ರತಿ ಚೀಲಕ್ಕೆ 3,000 ರೂ.ಗಳನ್ನು ಮೀರಿದ್ದರೂ, ರೈತರಿಗೆ ಸುಮಾರು 300 ರೂ.ಗಳಿಗೆ ಯೂರಿಯಾವನ್ನು ಒದಗಿಸಲಾಗಿದೆ ಎಂದು ಮೋದಿ ಹೇಳಿದರು.

'ಇದಕ್ಕಾಗಿ ಸರ್ಕಾರವು ಲಕ್ಷಾಂತರ ಕೋಟಿ ರೂಪಾಯಿ ಸಬ್ಸಿಡಿ ನೀಡಿದೆ. ಜಾಗತಿಕ ಪೂರೈಕೆ ಸರಪಳಿಗಳು ಅಸ್ತವ್ಯಸ್ತಗೊಂಡಿದ್ದರೂ ಭಾರತವು ಪರ್ಯಾಯ ಮಾರ್ಗಗಳನ್ನು ಕಂಡುಕೊಂಡಿತು. ವಿವಿಧ ದೇಶಗಳಲ್ಲಿನ ಭಾರತೀಯ ರಾಯಭಾರ ಕಚೇರಿಗಳಿಗೆ ರಸಗೊಬ್ಬರ ಸಂಗ್ರಹಣೆಯ ವಿಶೇಷ ಜವಾಬ್ದಾರಿ ನೀಡಲಾಯಿತು. ಆಮದುಗಳ ಜೊತೆಗೆ ದೇಶೀಯ ಉತ್ಪಾದನೆಯನ್ನೂ ಹೆಚ್ಚಿಸಲಾಯಿತು. ನೈಸರ್ಗಿಕ ಕೃಷಿಯಂತಹ ಪರ್ಯಾಯ ಕ್ರಮಗಳಿಗೆ ಉತ್ತೇಜನ ನೀಡಲಾಯಿತು. ಸಂಗ್ರಹಣೆ ಮತ್ತು ಕಾಳಸಂತೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಯಿತು' ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ರಾಜಸ್ಥಾನದ ಬಲೋತ್ರಾದಲ್ಲಿ ಸುಮಾರು 1.06 ಲಕ್ಷ ಕೋಟಿ ರೂ. ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು, ರಾಷ್ಟ್ರಕ್ಕೆ ಸಮರ್ಪಿಸಿದರು ಹಾಗೂ ಹೊಸ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿದರು.

ಈ ಯೋಜನೆಗಳಲ್ಲಿ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಮತ್ತು ರಾಜಸ್ಥಾನ ಸರ್ಕಾರದ ಜಂಟಿ ಸಹಭಾಗಿತ್ವದಲ್ಲಿ ಸುಮಾರು 80,000 ಕೋಟಿ ರೂ. ಹೂಡಿಕೆಯಲ್ಲಿ ನಿರ್ಮಿಸಲಾದ ಸಂಸ್ಕರಣಾಗಾರ ಯೋಜನೆಯೂ ಸೇರಿದೆ.

ಪ್ರಧಾನಿ ಅವರು ಜೋಧ್‌ಪುರದ ಹೊಸ ವಿಮಾನ ನಿಲ್ದಾಣ ಟರ್ಮಿನಲ್ ಅನ್ನು ಉದ್ಘಾಟಿಸಿದರು. ಉಡಾನ್ ಯೋಜನೆಯ ಹೊಸ ಹಂತಕ್ಕೂ ಚಾಲನೆ ನೀಡಿದರು. ಈ ಯೋಜನೆಯಡಿ ಸಣ್ಣ ಪಟ್ಟಣಗಳು ಮತ್ತು ದೂರದ ಪ್ರದೇಶಗಳಿಗೆ ವಾಯು ಸಂಪರ್ಕವನ್ನು ವಿಸ್ತರಿಸುವ ಉದ್ದೇಶ ಹೊಂದಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries