ನವದೆಹಲಿ: NEET ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಪ್ರಶ್ನೆಯೇ ಇಲ್ಲ ಎಂದು ನರೇಂದ್ರ ಮೋದಿ ನೇತೃತ್ವದ NDA ಸರಕಾರ ಸ್ಪಷ್ಟಪಡಿಸಿದೆ. ಸಚಿವರ ರಾಜೀನಾಮೆ ಕುರಿತು ಯಾವುದೇ ನಿರ್ಧಾರವಾಗಿಲ್ಲ ಎಂದು ಸರಕಾರದ ಉನ್ನತ ಮೂಲಗಳು NDTVಗೆ ತಿಳಿಸಿವೆ.
ಕಾಕ್ರೋಚ್ ಜನತಾ ಪಾರ್ಟಿ(CJP) ನೇತೃತ್ವದಲ್ಲಿ ಹೊಸದಿಲ್ಲಿಯ ಜಂತರ್ ಮಂತರ್ ನಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆಯ ಪ್ರಮುಖ ಬೇಡಿಕೆಯೇ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯಾಗಿದೆ. NEET ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಹೊಣೆ ಹೊತ್ತು ಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸುತ್ತಿದ್ದಾರೆ. ಪ್ರತಿಭಟನೆಗಳನ್ನು ಹಿಂತೆಗೆದುಕೊಳ್ಳಲು ಸಚಿವರ ರಾಜೀನಾಮೆಯೇ ಅನಿವಾರ್ಯ ಎಂದು CJP ಪಟ್ಟು ಹಿಡಿದಿದೆ.
ಆದರೆ, ಸಚಿವರ ರಾಜೀನಾಮೆ ಕುರಿತು ಯಾವುದೇ ಚಿಂತನೆ ಇಲ್ಲ ಎಂದು ಸರಕಾರದ ಮೂಲಗಳು ಸ್ಪಷ್ಟಪಡಿಸಿವೆ.
"ರಾಜೀನಾಮೆ ತೆಗೆದುಕೊಳ್ಳುವುದು ಸುಲಭವಾದ ನಿರ್ಧಾರ ಎಂದು ಸರಕಾರ ಭಾವಿಸುತ್ತದೆ. ಆದರೆ ಸರಕಾರ ಸಚಿವರ ಜೊತೆ ದೃಢವಾಗಿ ನಿಂತಿದೆ" ಎಂದು ಮೂಲಗಳು ತಿಳಿಸಿವೆ.
"ಜನರು ನಮಗೆ ಜನಾದೇಶ ನೀಡಿದ್ದಾರೆ. ಆ ಜನಾದೇಶಕ್ಕೆ ತಕ್ಕಂತೆ ನಾವು ಕಾರ್ಯನಿರ್ವಹಿಸುತ್ತಿದ್ದೇವೆ" ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಸರಕಾರದ ಮೂಲಗಳು NDTVಗೆ ತಿಳಿಸಿವೆ.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA)ಯಲ್ಲಿನ ಸಮಸ್ಯೆಗಳ ಪಟ್ಟಿಯನ್ನು ಸರಕಾರ ಸಿದ್ಧಪಡಿಸುತ್ತಿದ್ದು, ಅವುಗಳನ್ನು ಶೀಘ್ರದಲ್ಲೇ ಪರಿಹರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
"ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಭಾಗಿಯಾಗಿರುವ ಹಲವು ಗ್ಯಾಂಗ್ ಗಳನ್ನು ನಾವು ಭೇದಿಸಿದ್ದೇವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಕ್ರಮ ಕೈಗೊಳ್ಳುವ ಹಂತದಲ್ಲಿದ್ದೇವೆ" ಎಂದೂ ಮೂಲಗಳು ಹೇಳಿವೆ.
ಸೋಮವಾರ ಸಂಸತ್ತಿನತ್ತ ಮೆರವಣಿಗೆ ನಡೆಸಲು ಯತ್ನಿಸಿದ ಪ್ರತಿಭಟನಾಕಾರರ ಮೇಲೆ ಪೊಲೀಸರು ಅಶ್ರುವಾಯು ಸಿಡಿಸಿ ಲಾಠಿ ಚಾರ್ಜ್ ನಡೆಸಿದ ಬಳಿಕ ಪ್ರತಿಭಟನೆ ಮತ್ತಷ್ಟು ತೀವ್ರಗೊಂಡಿದೆ. ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಒತ್ತಾಯಿಸುತ್ತಿರುವ ವಿರೋಧ ಪಕ್ಷಗಳು ಪ್ರತಿಭಟನಾ ಆಂದೋಲನಕ್ಕೆ ಬೆಂಬಲ ಸೂಚಿಸಿವೆ.

