ಪುರಿ: ಒಡಿಶಾದ ಪುರಿಯಲ್ಲಿ ಗುರುವಾರ ಜಗನ್ನಾಥ ದೇವಾಲಯದ ರಥಯಾತ್ರೆ ಸಂದರ್ಭ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ ಕನಿಷ್ಠ ಓರ್ವ ಮೃತಪಟ್ಟಿದ್ದು, ಸುಮಾರು 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಜಗನ್ನಾಥ, ಬಲಭದ್ರ ಹಾಗೂ ಸುಭದ್ರಾ ದೇವಿಯ ಪ್ರತಿಮೆಗಳನ್ನು ಇರಿಸಲಾದ ರಥಗಳ ಮೆರವಣಿಗೆ ವೀಕ್ಷಿಸಲು ಬಡಾ ದಂಡಾ ರಸ್ತೆ ಪ್ರದೇಶದಲ್ಲಿ ತುಂತುರು ಮಳೆಯಲ್ಲೂ ಲಕ್ಷಾಂತರ ಜನರು ಕಿಕ್ಕಿರಿದು ನೆರೆದಿದ್ದಾಗ ನೂಕುನುಗ್ಗಲು ಉಂಟಾಗಿ ದುರಂತ ಸಂಭವಿಸಿದೆ.
ಜನಸಂದಣಿಯಲ್ಲಿ ಸಿಲುಕಿಕೊಂಡ ವ್ಯಕ್ತಿಯೊಬ್ಬರಿಗೆ ಉಸಿರಾಟದ ಸಮಸ್ಯೆಯುಂಟಾಗಿ ಅಸ್ವಸ್ಥಗೊಂಡಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿದಾಗ ಅವರು ಅಲ್ಲಿ ಸಾವನ್ನಪ್ಪಿದ್ದಾರೆ.
ರಥಯಾತ್ರೆ ಸಂದರ್ಭ ಸಂಭವಿಸಿದ ಕಾಲ್ತುಳಿತದಲ್ಲಿ 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಅಥವಾ ಆರೋಗ್ಯ ಸಮಸ್ಯೆಗೆ ತುತ್ತಾಗಿದ್ದಾರೆ. ಈ ಪೈಕಿ 50 ಮಂದಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಲ್ತುಳಿತದಲ್ಲಿ ಗಾಯಗೊಂಡ ಭಕ್ತಾದಿಗಳನ್ನು ಆಸ್ಪತ್ರೆಗೆ ಸಾಗಿಸುತ್ತಿರುವುದು, ಗಾಬರಿ ಹಾಗೂ ಗೊಂದಲದ ಸನ್ನಿವೇಶದ ನಡುವೆ ಜನರ ಸ್ಲಿಪ್ಪರ್ಗಳು, ಬ್ಯಾಗ್ಗಳು ಮತ್ತಿತರ ಸಾಮಗ್ರಿಗಳು ಚಲ್ಲಾಪಿಲ್ಲಿಯಾಗಿ ಬಿದ್ದಿರುವ ದೃಶ್ಯಗಳ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪುರಿ ಜಗನ್ನಾಥ ರಥಯಾತ್ರೆಯ ಕಾಲ್ತುಳಿತದ ದುರಂತಕ್ಕೆ ಮಾಜಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಜನಸಂದಣಿಯನ್ನು ಸಮರ್ಪಕವಾಗಿ ನಿರ್ವಹಿಸುವ ಮೂಲಕ ಭಕ್ತಾದಿಗಳ ಸುರಕ್ಷತೆ ಹಾಗೂ ಕ್ಷೇಮವನ್ನು ಖಾತರಿಪಡಿಸಬೇಕೆಂದು ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಜಗನ್ನಾಥ ರಥಯಾತ್ರೆಯು ಭಾರತದ ಅತಿ ದೊಡ್ಡ ಧಾರ್ಮಿಕ ಉತ್ಸವಗಳಲ್ಲೊಂದಾಗಿದ್ದು, ಪ್ರತಿ ವರ್ಷವೂ ದೇಶ-ವಿದೇಶಗಳಿಂದ ಲಕ್ಷಾಂತರ ಮಂದಿ ಯಾತ್ರಿಕರನ್ನು ಸೆಳೆಯುತ್ತಿದೆ.
ಕಳೆದ ವರ್ಷವೂ ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೂವರು ಸಾವನ್ನಪ್ಪಿದ್ದು, 50ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

