ನವದೆಹಲಿ: ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ, ಚುನಾವಣಾ ಆಯೋಗದ ಕಾರ್ಯನಿರ್ವಹಣೆ ಹಾಗೂ ಚುನಾವಣೆಗಳಿಗೆ ಸಂಬಂಧಿಸಿದ ಇತರ ವಿಷಯಗಳ ಕುರಿತು ಕಳವಳ ವ್ಯಕ್ತಪಡಿಸಿ, 23 ರಾಜಕೀಯ ಪಕ್ಷಗಳು ಮತ್ತು ಸ್ವತಂತ್ರ ಸಂಸದ ಕಪಿಲ್ ಸಿಬಲ್ ಅವರು ಮಂಗಳವಾರ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರಿಗೆ ಜಂಟಿ ಪತ್ರ ಬರೆದಿದ್ದಾರೆ.
ಈ ಕುರಿತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ವಿರೋಧ ಪಕ್ಷಗಳು "ದೃಢವಾದ ಒಗ್ಗಟ್ಟು, ಏಕತೆ ಮತ್ತು ಪ್ರತಿರೋಧ" ಎಂಬ ಧ್ಯೇಯದಡಿ ಒಗ್ಗಟ್ಟಾಗಿ ಮುಂದುವರಿದಿವೆ ಎಂದು ಹೇಳಿದ್ದಾರೆ.
"ಜೂನ್ 8, 2026ರಂದು ನಡೆದ INDIA ಜನಬಂಧನ್ ಸಭೆಯಲ್ಲಿ 21 ರಾಜಕೀಯ ಪಕ್ಷಗಳು ಮತ್ತು ಒಬ್ಬ ಸ್ವತಂತ್ರ ಸದಸ್ಯರು ಭಾಗವಹಿಸಿದ್ದರು. ಆ ಸಭೆಯಲ್ಲಿ ಭಾರತದ ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಮತ್ತು ಚುನಾವಣೆಗಳಿಗೆ ಸಂಬಂಧಿಸಿದ ಇತರ ವಿಷಯಗಳ ಕುರಿತು ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳಿಗೆ ಜಂಟಿ ಪತ್ರ ಬರೆಯಲು ನಿರ್ಧಾರ ತೆಗೆದುಕೊಳ್ಳಲಾಗಿತ್ತು" ಎಂದು ಜೈರಾಮ್ ರಮೇಶ್ ಎಕ್ಸ್‌ನಲ್ಲಿ ಪ್ರಕಟಿಸಿರುವ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
"ಅದರಂತೆ, ಈಗ 23 ರಾಜಕೀಯ ಪಕ್ಷಗಳು ಮತ್ತು ಒಬ್ಬ ಸ್ವತಂತ್ರ ಸದಸ್ಯರ ಸಹಿಯನ್ನು ಹೊಂದಿರುವ ಜಂಟಿ ಪತ್ರವನ್ನು ಇಂದು ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳಿಗೆ ಕಳುಹಿಸಲಾಗಿದೆ" ಎಂದು ಅವರು ಹೇಳಿದ್ದಾರೆ. ಈ ಜಂಟಿ ಪತ್ರಕ್ಕೆ ಸ್ವತಂತ್ರ ಸಂಸದ ಕಪಿಲ್ ಸಿಬಲ್ ಕೂಡ ಸಹ ಹಾಕಿದ್ದಾರೆ.
ತೃಣಮೂಲ ಕಾಂಗ್ರೆಸ್ ನಾಯಕ ಡೆರೆಕ್ ಓಬ್ರಿಯಾನ್ ಅವರು, ಆಪ್ ಪಕ್ಷ ಮತ್ತು ಡಿಎಂಕೆ ಕೂಡ ಈ ಜಂಟಿ ಪತ್ರಕ್ಕೆ ಸಹಿ ಹಾಕಿರುವ ಪಕ್ಷಗಳಲ್ಲಿ ಸೇರಿವೆ ಎಂದು ತಿಳಿಸಿದ್ದಾರೆ.
ಮೂಲಗಳ ಪ್ರಕಾರ, ಈ ಪತ್ರದಲ್ಲಿ ಚುನಾವಣಾ ಆಯೋಗದ ಕಾರ್ಯನಿರ್ವಹಣೆ, ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯ ಅನುಷ್ಠಾನ ಹಾಗೂ ಚುನಾವಣಾ ವ್ಯವಸ್ಥೆಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಕಳವಳ ವ್ಯಕ್ತಪಡಿಸಲಾಗಿದೆ.

