HEALTH TIPS

ದೇಣಿಗೆ ವಿವಾದ: ಶೂ ಒಳಗೆ ಬಚ್ಚಿಟ್ಟ ನಗದು ಸೇರಿ SIT ತನಿಖೆಯಲ್ಲಿ ಹಲವು ಅಂಶ ಬಯಲು

ಲಖನೌ: ಉತ್ತರ ಪ್ರದೇಶದ ಅಯೋಧ್ಯೆಯ ರಾಮಮಂದಿರದಲ್ಲಿ ನಡೆದಿದೆ ಎನ್ನಲಾದ ಹಣ ದುರುಪಯೋಗ ಆರೋಪದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು (ಎಸ್‌ಐಟಿ), ತನ್ನ ಪ್ರಾಥಮಿಕ ವರದಿಯಲ್ಲಿ ನಿರಂತರವಾಗಿ ಕಳ್ಳತನ ನಡೆದಿದೆ ಎಂಬುದನ್ನು ಪತ್ತೆಹಚ್ಚಿದೆ.

ಸೋಮವಾರ ಮಣಿ ರಾಮದಾಸ್ ನೇತೃತ್ವದಲ್ಲಿ ನಡೆದ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸಭೆಯಲ್ಲಿ ಎಸ್‌ಐಟಿ ವರದಿಯನ್ನು ಮಂಡಿಸಲಾಗಿದೆ.

ಈ ಪ್ರತಿ 'ಹಿಂದೂಸ್ತಾನ್ ಟೈಮ್ಸ್'ಗೆ ಲಭ್ಯವಾಗಿದೆ ಎಂದು ವರದಿಯಾಗಿದೆ.

ಕಳ್ಳತನದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಅವಿನಾಶ್ ಶುಕ್ಲಾ, ಅನುಕಲ್ಪ್ ಮಿಶ್ರಾ, ಲವಕುಶ್ ಮಿಶ್ರಾ, ಮನೀಶ್ ಕುಮಾರ್ ಯಾದವ್, ಕರುಣೇಶ್ ಪಾಂಡೆ ಮತ್ತು ರಮಾಶಂಕರ್ ಮಿಶ್ರಾ ಎಂಬುವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಎಸ್‌ಐಟಿ ವರದಿ ಶಿಫಾರಸು ಮಾಡಿದೆ.

ರಾಮಮಂದಿರದ ಭದ್ರತಾ ನಿಯಮಗಳನ್ನು ಜಾರಿಗೊಳಿಸುವ ಜವಾಬ್ದಾರಿ ಹೊತ್ತಿದ್ದ ಮೇಲ್ವಿಚಾರಣಾ ಅಧಿಕಾರಿಗಳು ಮತ್ತು ಇತರರ ಪಾತ್ರದ ಕುರಿತು ತನಿಖೆ ನಡೆಸುವಂತೆಯೂ ವರದಿಯಲ್ಲಿ ಒತ್ತಾಯಿಸಲಾಗಿದೆ.

2026ರ ಏಪ್ರಿಲ್ 27 ಮತ್ತು ಜೂನ್ 5ರಂದು ನಡುವಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಹಣ ಎಣಿಕೆ ಮಾಡುವ ಸಿಬ್ಬಂದಿಯು ನೋಟುಗಳ ಕಟ್ಟುಗಳನ್ನು ತಮ್ಮ ಬಟ್ಟೆ, ಶೂಗಳು ಮತ್ತು ಜೇಬುಗಳ ಒಳಗೆ ಬಚ್ಚಿಟ್ಟುಕೊಳ್ಳುವ 70 ಘಟನೆಗಳು ಪತ್ತೆಯಾಗಿವೆ. ಈ ಕೃತ್ಯ ನಿರಂತರವಾಗಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏಪ್ರಿಲ್ 27ಕ್ಕಿಂತ ಮೊದಲಿನ ಸಿಸಿಟಿವಿ ರೆಕಾರ್ಡಿಂಗ್‌ಗಳು ಲಭ್ಯವಿಲ್ಲದ ಕಾರಣ, ಕಳ್ಳತನವಾದ ದೇಣಿಗೆ ಪ್ರಮಾಣವು ಹೆಚ್ಚಿರಬಹುದು ಎಂದು ಅವರು ಉಲ್ಲೇಖಿಸಿದ್ದಾರೆ.

ಆರೋಪಿಗಳ ಹೇಳಿಕೆ ಮತ್ತು ಅವರ ಬ್ಯಾಂಕ್ ವಹಿವಾಟು ಗಮನಿಸಿದರೆ, ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಿರುವ ಅವಧಿಗಿಂತ ಬಹಳ ಮುಂಚೆಯೇ ಇಂತಹ ಕೃತ್ಯಗಳು ನಡೆದಿರಬಹುದು ಎಂದು ತಿಳಿದುಬಂದಿದೆ.

ಅವಿನಾಶ್ ಮತ್ತು ಮನೀಶ್ ಪದೇ ಪದೇ ನಗದನ್ನು ಬಚ್ಚಿಡುತ್ತಿರುವುದು ಕಂಡುಬಂದಿದ್ದರೆ, ಉಳಿದ ನಾಲ್ವರು ಹಲವಾರು ಸಂದರ್ಭಗಳಲ್ಲಿ ಕಳ್ಳತನಕ್ಕೆ ನೆರವು ನೀಡುತ್ತಿರುವುದು ಕಂಡುಬಂದಿದೆ ಎಂದು ಎಸ್‌ಐಟಿ ಆರೋಪಿಸಿದೆ.

ಎಸ್‌ಐಟಿ ರಚನೆಯಾಗುವ ಮುನ್ನವೇ ರಾಮಮಂದಿರ ಟ್ರಸ್ಟ್ ವಿದೇಶಿ ಕರೆನ್ಸಿ, ಆಭರಣಗಳು ಮತ್ತು ಇತರ ವಸ್ತುಗಳ ಹೊರತಾಗಿ ₹2.70 ಕೋಟಿ ನಗದನ್ನು ವಶಪಡಿಸಿಕೊಂಡಿತ್ತು ಎಂದು ವರದಿ ಹೇಳಿದೆ. ಜೂನ್ 4ರಂದು ಎಣಿಕೆ ಕೊಠಡಿಯ ಪಕ್ಕದ ಶೌಚಾಲಯದಲ್ಲಿ ₹2.25 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ.

ಆದಾಯ ಮತ್ತು ಬ್ಯಾಂಕ್ ಬ್ಯಾಲೆನ್ಸ್‌ನಲ್ಲಿ ವ್ಯತ್ಯಾಸ

ಆರೋಪಿಗಳ ಘೋಷಿತ ಆದಾಯ ಮತ್ತು ಅವರ ಬ್ಯಾಂಕ್ ಖಾತೆಯಲ್ಲಿರುವ ಹಣದ ನಡುವೆ ಭಾರಿ ವ್ಯತ್ಯಾಸವಿರುವುದನ್ನು ಎಸ್‌ಐಟಿ ಪತ್ತೆಹಚ್ಚಿದೆ. ಎಣಿಕೆ ಸಿಬ್ಬಂದಿ ತಿಂಗಳಿಗೆ ₹20,000 ಗಳಿಸುತ್ತಿದ್ದರೂ, ತನಿಖಾಧಿಕಾರಿಗಳಿಗೆ ಅವರ ಖಾತೆಗಳಲ್ಲಿ ಭಾರಿ ಪ್ರಮಾಣದ ನಗದು ಜಮೆ, ಫಿಕ್ಸೆಡ್ ಡೆಪಾಸಿಟ್‌ಗಳು ಮತ್ತು ವಿವಿಧ ಹಣಕಾಸು ವಹಿವಾಟುಗಳು ನಡೆದಿರುವುದು ಕಂಡುಬಂದಿದೆ.

ಎಸ್‌ಒಪಿ ಉಲ್ಲಂಘನೆ

ಮಂದಿರದ ದೇಣಿಗೆಗಳನ್ನು ನಿರ್ವಹಿಸುವಾಗ ಪ್ರಮಾಣಿತ ಕಾರ್ಯಾಚರಣೆ ವಿಧಾನವನ್ನು (ಎಸ್‌ಒಪಿ) ಉಲ್ಲಂಘಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಪ್ರವೇಶ ಮತ್ತು ನಿರ್ಗಮನದ ಸ್ಥಳಗಳಲ್ಲಿ ಕಡ್ಡಾಯ ತಪಾಸಣೆ ನಡೆಸಲಾಗಿಲ್ಲ, ಜೇಬುಗಳಿಲ್ಲದ ಸಮವಸ್ತ್ರದ ನಿಯಮ ಜಾರಿಗೊಳಿಸಲಾಗಿಲ್ಲ. ಎಣಿಕೆ ಕೊಠಡಿಯೊಳಗೆ ವೈಯಕ್ತಿಕ ವಸ್ತುಗಳನ್ನು ಕೊಂಡೊಯ್ಯಲು ಅನುಮತಿಸಲಾಗಿದೆ. ಬಯೋಮೆಟ್ರಿಕ್ ಹಾಜರಾತಿ ನಿಷ್ಪ್ರಯೋಜಕವಾಗಿತ್ತು ಮತ್ತು ಸಿಸಿಟಿವಿ ನಿರ್ವಹಣೆ ಸರಿ ಇರಲಿಲ್ಲ ಎಂದು ತಿಳಿದುಬಂದಿದೆ.

ಮೇಲ್ವಿಚಾರಣೆಯ ಜವಾಬ್ದಾರಿ

ಎಣಿಕೆ ಕೊಠಡಿಯ ಉಸ್ತುವಾರಿ ವಹಿಸಿದ್ದ ಸುಭಾಷ್ ಶ್ರೀವಾಸ್ತವ ಅವರು ಕಡ್ಡಾಯ ಭದ್ರತಾ ನಿಯಮಗಳನ್ನು ಖಾತ್ರಿಪಡಿಸುವಲ್ಲಿ ನಿರ್ಲಕ್ಷ್ಯ ವಹಿಸಿರುವುದು ಕಂಡುಬಂದಿದೆ. ರಮಾಶಂಕರ್ ಯಾದವ್ ಅಲಿಯಾಸ್ ಟಿನ್ನು ಯಾವುದೇ ಅಧಿಕೃತ ಅನುಮತಿಯಿಲ್ಲದೆ ದೇಣಿಗೆ ಪೆಟ್ಟಿಗೆಯ ಕೀಲಿಗಳನ್ನು ತನ್ನ ವಶದಲ್ಲಿಟ್ಟುಕೊಂಡಿದ್ದನು ಮತ್ತು ನಂತರ ಕಳ್ಳತನದಲ್ಲಿ ಭಾಗಿಯಾಗಿರುವುದು ಪತ್ತೆಯಾದ ತನ್ನ ಸಂಬಂಧಿ ಮನೀಶ್ ಕುಮಾರ್ ಯಾದವನನ್ನು ಕೆಲಸಕ್ಕೆ ನೇಮಿಸುವಂತೆ ಶಿಫಾರಸು ಮಾಡಿದ್ದನು.

ಎಸ್‌ಐಟಿಗೆ ತನಿಖಾ ಅವಧಿ ವಿಸ್ತರಣೆ

ತನಿಖೆಯನ್ನು ಪೂರ್ಣಗೊಳಿಸಿ ಅಂತಿಮ ವರದಿಯನ್ನು ಸಲ್ಲಿಸಲು ಉತ್ತರ ಪ್ರದೇಶ ಸರ್ಕಾರವು ಎಸ್‌ಐಟಿಗೆ 15 ದಿನಗಳ ಕಾಲಾವಕಾಶವನ್ನು ವಿಸ್ತರಿಸಿದೆ. ರಾಜ್ಯ ಸರ್ಕಾರದಿಂದ ಜೂನ್ 15ರಂದು ರಚನೆಯಾಗಿದ್ದ ಎಸ್‌ಐಟಿಗೆ ಆರಂಭದಲ್ಲಿ ಮಧ್ಯಂತರ ವರದಿ ಸಲ್ಲಿಸಲು ಏಳು ದಿನಗಳ ಕಾಲಾವಕಾಶ ಮತ್ತು ಅಂತಿಮ ವರದಿ ಸಲ್ಲಿಸಲು ಹದಿನೈದು ದಿನಗಳ ಕಾಲಾವಕಾಶ ನೀಡಲಾಗಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries