ನವದೆಹಲಿ: ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರವು (FSSAI) ಡಾಬರ್ ಇಂಡಿಯಾಗೆ "ಶೇ 100" ಎನ್ನುವ ಕ್ಲೇಮ್ ಗಳನ್ನು ಮಾಡದೆ ಇರುವಂತೆ ಸೂಚಿಸಿದೆ. ಇಂತಹ ಪರಿಭಾಷೆಯು ಅಸ್ಪಷ್ಟವಾಗಿರಬಹುದು, ಪರಿಶೀಲಿಸಲು ಸಾಧ್ಯವಿಲ್ಲದ ಮತ್ತು ಗ್ರಾಹಕರನ್ನು ದಾರಿ ತಪ್ಪಿಸುವ ಸಾಧ್ಯತೆಯಿದೆ ಎಂದು FSSAI ಹೇಳಿದೆ.
FSSAI ಪ್ರಕಾರ ಡಾಬರ್ ನ ವೆಬ್ಸೈಟ್ ನಲ್ಲಿ ಪಟ್ಟಿ ಮಾಡಲಾದ ಉತ್ಪನ್ನಗಳನ್ನು ಶೇ 100 ನೈಸರ್ಗಿಕ, ಶೇ 100 ಶುದ್ಧ, ಶೇ 100 ಶುದ್ಧತೆಯ ಖಾತರಿ, ಶೇ 100 ಸಾವಯವ ಮತ್ತು ಶೇ 100 ಹಸಿ ತೆಂಗಿನ ನೀರು ಮೊದಲಾದ ಕ್ಲೇಮ್ ಗಳನ್ನು ಮಾಡಲಾಗಿದೆ.
"ಶೇ 100" ಎನ್ನುವ ಬ್ರಾಂಡಿಂಗ್ ದಾರಿ ತಪ್ಪಿಸುತ್ತವೆ ಎಂದು FSSAI ಅಭಿಪ್ರಾಯಪಟ್ಟಿದೆ. ಜೇನುತುಪ್ಪ, ಆಪಲ್ ಸೈಡರ್ ವಿನೆಗರ್, ಶುದ್ಧ ತೆಂಗಿನ ಎಣ್ಣೆ, ಎಳ್ಳೆಣ್ಣೆ, ಹಸುವಿನ ತುಪ್ಪ, ತೆಂಗಿನ ನೀರು ಮತ್ತು ತೆಂಗಿನ ಹಾಲು ಮೊದಲಾದ ಉತ್ಪನ್ನಗಳಿಗೆ ಈ ಕ್ಲೇಮ್ ಮಾಡದಂತೆ ಆದೇಶಿಸಲಾಗಿದೆ.
ಅಂತಹ ಹಕ್ಕುಗಳು ಆಹಾರ ಸುರಕ್ಷತೆ ಮತ್ತು ಮಾನದಂಡಗಳ ನಿಯಮಗಳು 2018 ಅನ್ನು ಉಲ್ಲಂಘಿಸುತ್ತವೆ ಎಂದು FSSAI ಹೇಳಿದೆ. ಹಾಗೆಂದು 'ಶೇ 100' ಎನ್ನುವ ಕ್ಲೇಮ್ ತೆಗೆಯುವಂತೆ ಹೇಳಿದಾ ಕ್ಷಣ ಉತ್ಪನ್ನಗಳು ಕಲಬೆರಕೆ ಅಥವಾ ಅಸುರಕ್ಷಿತವಾಗಿವೆ ಎಂದು ಕಂಡುಕೊಂಡಂತೆ ಆಗುವುದಿಲ್ಲ. FSSAI ಆಕ್ಷೇಪಣೆಗಳು ಅವುಗಳನ್ನು ಲೇಬಲ್ ಮಾಡುವ ಮತ್ತು ಮಾರಾಟ ಮಾಡುವ ವಿಧಾನಕ್ಕೆ ಸಂಬಂಧಿಸಿವೆ.
2025ರ ಮೇ ತಿಂಗಳಲ್ಲಿ FSSAI ಉದ್ಯಮದಾದ್ಯಂತ ನಿರ್ದೇಶನಗಳನ್ನು ಹೊರಡಿಸಿ, ಆಹಾರ ವ್ಯವಹಾರಗಳು ಲೇಬಲ್ ಗಳು, ಪ್ಯಾಕೇಜ್ ಗಳು ಮತ್ತು ಪ್ರಚಾರ ಸಾಮಗ್ರಿಗಳ ಮೇಲೆ 'ಶೇ 100' ಎಂದು ಕ್ಲೇಮ್ಗಳನ್ನು ಬಳಸದಂತೆ ಕೇಳಿಕೊಂಡಿತ್ತು. "ಈ ಪದವನ್ನು ಅಸ್ತಿತ್ವದಲ್ಲಿರುವ ನಿಯಮಗಳ ಅಡಿಯಲ್ಲಿ ವ್ಯಾಖ್ಯಾನಿಸಿಲ್ಲ. ಸಂಪೂರ್ಣ ಶುದ್ಧತೆ ಅಥವಾ ಶ್ರೇಷ್ಠತೆಯ ತಪ್ಪು ಅಭಿಪ್ರಾಯವನ್ನು ಉಂಟು ಮಾಡಬಹುದು" ಎಂದು FSSAI ಹೇಳಿತ್ತು.
ಡಾಬರ್ ಹಿಮಾಲಯನ್ ಸಾವಯವ ಆಪಲ್ ಸೈಡರ್ ವಿನೆಗರ್ ಮತ್ತು ಡಾಬರ್ ಸಾವಯವ ಜೇನುತುಪ್ಪವು FSSAIನ ಸಾವಯವ ಅನುಮೋದನೆಯಿಲ್ಲದೆ ಜೈವಿಕ್ ಭಾರತ್ ಲೋಗೋವನ್ನು ಪ್ರದರ್ಶಿಸುತ್ತಿವೆ ಎಂದೂ FSSAI ಹೇಳಿದೆ.
ಜೈವಿಕ್ ಬಾರತ್ ಗುರುತನ್ನು ಪ್ರಮಾಣೀಕೃತ ಸಾವಯವ ಆಹಾರವನ್ನು ಗುರುತಿಸಲು ಮಾತ್ರ ಬಳಸಲಾಗುತ್ತದೆ. ಭಾರತದ ಸೂಚಿತ ಸಾವಯವ ಮಾನದಂಡಗಳ ಅನುಸರಣೆಯ ಸಂದರ್ಭದಲ್ಲಿ ಈ ಗುರುತನ್ನು ಬಳಸಬಹುದಾಗಿದೆ. ಡಾಬರ್ ಮನೆಯಲ್ಲಿ ತಯಾರಿಸಿದ ತೆಂಗಿನ ಹಾಲು "ಶೇ 100 ಶುದ್ಧತೆ" ಹೊಂದಿದೆ ಎಂದು ಹೇಳುತ್ತಿರುವ ಬಗ್ಗೆಯೂ ನಿಷೇಧವನ್ನು ಹೇರಲಾಗಿದೆ.
ಕಂಪನಿ ತೃಪ್ತಿದಾಯಕ ಕ್ರಮ ಕೈಗೊಳ್ಳದೆಯೇ 'ಶೇ 100' ಎನ್ನುವ ಕ್ಲೇಮ್ಗಳನ್ನು ಮಾಡುತ್ತಿದೆ ಎಂದು FSSAI ಅಸಮಧಾನ ವ್ಯಕ್ತಪಡಿಸಿದೆ. 'ಶೇ 100' ಬ್ರಾಂಡಿಂಗ್ ಗಳನ್ನು ತಕ್ಷಣ ನಿಲ್ಲಿಸುವುದು ಮತ್ತು ಕಂಪನಿ 15 ದಿನಗಳ ಒಳಗೆ ಕ್ರಮ ಕೈಗೊಂಡಿರುವ ವರದಿಯನ್ನು ಸಲ್ಲಿಸುವಂತೆಯೂ ನಿರ್ದೇಶನ ನೀಡಲಾಗಿದೆ.
ಡಾಬರ್ ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, "FSSAI ಸೂಚನೆಯನ್ನು ಸ್ವೀಕರಿಸಲಾಗಿದೆ. ನಿಯಂತ್ರಕವು ಉಲ್ಲೇಖಿಸಿದ ವಿಷಯಗಳನ್ನು ಪರಿಶೀಲಿಸಲಾಗುವುದು" ಎಂದು ಹೇಳಿದೆ.

