ಸೀಹೋರ್ : ಮೊದಲ ವಿಶ್ವಯುದ್ಧದ ಖರ್ಚಿಗಾಗಿ 109 ವರ್ಷಗಳ ಹಿಂದೆ ಬ್ರಿಟಿಷ್ ಸರ್ಕಾರಕ್ಕೆ ನೀಡಿದ್ದ ₹ 35 ಸಾವಿರ ಸಾಲದ ಮರುಪಾವತಿಸಬೇಕು ಎನ್ನುವ ಕೋರಿಕೆಯನ್ನು ಪರಿಶೀಲಿಸಲು ಬ್ರಿಟನ್ ಸರ್ಕಾರ ಒಪ್ಪಿದೆ ಎಂದು ಮಧ್ಯಪ್ರದೇಶದ ಉದ್ಯಮಿಯೊಬ್ಬರ ಮೊಮ್ಮಕ್ಕಳು ತಿಳಿಸಿದ್ದಾರೆ.
ಸೀಹೋರ್‌ನ ವಿನಯ್ ಮತ್ತು ವಿವೇಕ್ ರುಥಿಯಾ ಈ ಕುರಿತು ಮಾಹಿತಿ ನೀಡಿದ್ದು, ತಮ್ಮ ತಾತ ಹಾಗೂ ಅಂದಿನ ಪ್ರಮುಖ ಉದ್ಯಮಿ, ಜಮೀನುದಾರ ಸೇಠ್ ಜುಮ್ಮಾ ಲಾಲ್ ರುಥಿಯಾ ಅವರಿಗೆ ಸೇರಿದ ಹಳೆಯ ದಾಖಲೆಗಳ ಆಧಾರದಲ್ಲಿ ಫೆಬ್ರುವರಿಯಲ್ಲಿ ಬ್ರಿಟನ್ ಸರ್ಕಾರದ ಡೆಟ್ ಮ್ಯಾನೇಜ್‌ಮೆಂಟ್ ಆಫೀಸ್‌ಗೆ (ಡಿಎಂಒ)ಕಾನೂನು ನೋಟಿಸ್ ಕಳುಹಿಸಲಾಗಿತ್ತು ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಡಿಎಂಒ, ಕುಟುಂಬದ ಬಳಿ ಇರುವ ಸಾಲಕ್ಕೆ ಸಂಬಂಧಿಸಿದ ಪ್ರಮಾಣಪತ್ರಗಳು, ಪತ್ರವ್ಯವಹಾರ ಸೇರಿದಂತೆ ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿದೆ.
1917ರ ದಾಖಲೆ ಪತ್ತೆ
ಮೊದಲ ವಿಶ್ವಯುದ್ಧದ ಸಂದರ್ಭದಲ್ಲಿ ಬ್ರಿಟಿಷ್ ಸರ್ಕಾರದ ಯುದ್ಧ ವೆಚ್ಚಗಳಿಗೆ ಭಾರತದಿಂದ ದೊಡ್ಡ ಪ್ರಮಾಣದಲ್ಲಿ ಹಣ ಸಂಗ್ರಹಿಸಲಾಗಿತ್ತು. ಆ ವೇಳೆ ರುಥಿಯಾ ಕುಟುಂಬವು ₹35 ಸಾವಿರವನ್ನು ನೀಡಿತ್ತು ಎನ್ನಲಾಗಿದೆ.
1917ರ ಜೂನ್ 4ರಂದು ನೀಡಲಾದ ದಾಖಲೆ ಇದೀಗ ಕುಟುಂಬದ ಹಳೆಯ ದಾಖಲೆಗಳಲ್ಲಿ ಪತ್ತೆಯಾಗಿದೆ. ಕಾಲದ ಹೊಡೆತಕ್ಕೆ ಹಳದಿ ಬಣ್ಣಕ್ಕೆ ತಿರುಗಿರುವ ಆ ಪ್ರಮಾಣಪತ್ರದಲ್ಲಿ, 'ಸೇಠ್ ಜುಮ್ಮಾ ಲಾಲ್ ರುಥಿಯಾ ಅವರು ಸರ್ಕಾರ ಮತ್ತು ಸಾಮ್ರಾಜ್ಯದ ಮೇಲಿನ ತಮ್ಮ ನಿಷ್ಠೆಯನ್ನು ಪ್ರದರ್ಶಿಸಿ ₹ 35 ಸಾವಿರವನ್ನು ಇಂಡಿಯನ್ ವಾರ್ ಲೋನ್‌ಗೆ ನೀಡಿದ್ದಾರೆ' ಎಂದು ಉಲ್ಲೇಖಿಸಲಾಗಿದೆ. ಭೋಪಾಲ್‌ನ ರಾಜಕೀಯ ಏಜೆಂಟ್ ಅವರ ಸಹಿಯೂ ದಾಖಲೆ ಮೇಲಿದೆ.
ಸೇಠ್ ಜುಮ್ಮಾ ಲಾಲ್ ರುಥಿಯಾ 1937ರಲ್ಲಿ ಮೃತಪಟ್ಟಿದ್ದು, ಅವರ ವಿಲ್ ಸೇರಿದಂತೆ ಹಳೆಯ ದಾಖಲೆಗಳ ನಡುವೆ ಈ ಪ್ರಮಾಣಪತ್ರ ಮತ್ತು ಬ್ರಿಟಿಷ್ ಸರ್ಕಾರದೊಂದಿಗಿನ ಪತ್ರವ್ಯವಹಾರ ಪತ್ತೆಯಾಗಿದೆ ಎಂದು ಕುಟುಂಬದವರು ಹೇಳಿದ್ದಾರೆ.
ಇಂದಿನ ಮೌಲ್ಯ ಎಷ್ಟು?
109 ವರ್ಷಗಳ ಹಿಂದಿನ ₹ 35 ಸಾವಿರ ಸಾಲವು ಬಡ್ಡಿ ಸೇರಿದಂತೆ ಇಂದು ಹಲವು ಕೋಟಿಗಳಾಗಬಹುದು ಎಂದು ರುಥಿಯಾ ಸಹೋದರರು ಹೇಳಿದ್ದಾರೆ. ಆದರೆ ಮರುಪಾವತಿ ಮೊತ್ತ ಅಥವಾ ಸಾಲದ ಪ್ರಸ್ತುತ ಮೌಲ್ಯದ ಬಗ್ಗೆ ಬ್ರಿಟನ್ ಸರ್ಕಾರ ಯಾವುದೇ ದೃಢೀಕರಣ ನೀಡಿಲ್ಲ.
ಕುಟುಂಬದ ಪ್ರಕಾರ, ಈ ಹಣವನ್ನು ಬ್ರಿಟಿಷ್ ಸರ್ಕಾರ ಭೋಪಾಲ್ ಸಂಸ್ಥಾನದ ಆಡಳಿತ ಮತ್ತು ಮೊದಲ ವಿಶ್ವಯುದ್ಧಕ್ಕೆ ಸಂಬಂಧಿಸಿದ ವೆಚ್ಚಗಳಿಗಾಗಿ ಬಳಸಿತ್ತು. ಹಳೆಯ ಸಾಲಗಳನ್ನು ಮರುಪಾವತಿಸುವ ಕಾನೂನುಬದ್ಧ ಹೊಣೆಗಾರಿಕೆ ರಾಷ್ಟ್ರಗಳಿಗೆ ಇದೆ ಎಂದು ಕುಟುಂಬ ವಾದಿಸಿದೆ.

