ಕೋಲ್ಕತ್ತ: ತುರ್ತು ಪರಿಸ್ಥಿತಿಯ ಸಮಯದಲ್ಲಿ ಪ್ರತಿಭಟನೆಗಳಲ್ಲಿ ಪಾಲ್ಗೊಂಡು ಜೈಲು ಶಿಕ್ಷೆ ಅನುಭವಿಸಿದ 325 ಜನರಿಗೆ ₹10 ಸಾವಿರ ಪಿಂಚಣಿ ನೀಡುವುದಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಭಾನುವಾರ(ಆ.9) ಘೋಷಿಸಿದ್ದಾರೆ.
ರಾಜ್ಯ ಸಚಿವಾಲಯದಲ್ಲಿ ನಡೆದ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡಿದ ಸುವೇಂದು ಅಧಿಕಾರಿ, 'ತುರ್ತು ಪರಿಸ್ಥಿತಿಯ ಸಮಯದಲ್ಲಿ ಪ್ರಜಾಪ್ರಭುತ್ವವನ್ನು ರಕ್ಷಿಸಲು ಅವರು ಸಾಕಷ್ಟು ಕಷ್ಟವನ್ನು ಸಹಿಸಿಕೊಂಡಿದ್ದಾರೆ.
ನೂತನ ರಾಜ್ಯ ಸರ್ಕಾರವು ದೇಶಕ್ಕಾಗಿ ತ್ಯಾಗ ಮಾಡಿದವರ ಆದರ್ಶಗಳ ಮೇಲೆ ನಿಂತಿದೆ' ಎಂದು ಹೇಳಿದ್ದಾರೆ.
'ಪಶ್ಚಿಮ ಬಂಗಾಳ ಲೋಕತಂತ್ರ ಸೇನಾನಿ ಸಮ್ಮಾನ್' ಹೆಸರಿನಲ್ಲಿ ನೀಡುವ ಈ ಪಿಂಚಣಿಗಾಗಿ ತುರ್ತು ಪರಿಸ್ಥಿತಿಯ ಸಮಯದಲ್ಲಿ ಪ್ರತಿಭಟನೆಗಳಲ್ಲಿ ಭಾಗವಹಿಸಿ ಜೈಲುವಾಸ ಅನುಭವಿಸಿದ 325 ಜನರನ್ನು ರಾಜ್ಯ ಸರ್ಕಾರ ಗುರುತಿಸಿದೆ ಎಂದು ಮಾಹಿತಿ ನೀಡಿದ್ದಾರೆ.
1975ರಲ್ಲಿ ತುರ್ತು ಪರಿಸ್ಥಿತಿ ಹೇರಿದ್ದನ್ನು ಖಂಡಿಸಿ, ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವು ಜೂನ್ 25ರಂದು 'ಸಂವಿಧಾನ ಹತ್ಯಾ ದಿವಸ'ವನ್ನಾಗಿ ಆಚರಿಸುತ್ತದೆ. ಬಿಜೆಪಿ ಆಡಳಿತವಿರುವ ಹಲವಾರು ರಾಜ್ಯಗಳು ಸಹ ತುರ್ತು ಪರಿಸ್ಥಿತಿಯಲ್ಲಿ ಜೈಲುವಾಸ ಅನುಭವಿಸಿದ ಜನರನ್ನು ಪ್ರಶಸ್ತಿ ಮತ್ತು ಪಿಂಚಣಿಗಳೊಂದಿಗೆ ಗೌರವಿಸಿವೆ.

