ಲಖನೌ: 'ದೇಶದ ವಿರುದ್ಧ ಸಂಚು ರೂಪಿಸಲು ಭಾರತ ವಿರೋಧಿ ಶಕ್ತಿಗಳು ಸಾಮಾಜಿಕ ಮಾಧ್ಯಮಗಳನ್ನು ಬಳಿಸಿಕೊಳ್ಳುತ್ತಿದ್ದಾರೆ. ಇವುಗಳ ಮೂಲಕ ವದಂತಿಗಳನ್ನು ಹರಡಿ, ಸಮಾಜವನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ' ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಭಾನುವಾರ ಆರೋಪಿಸಿದರು.
ಕಾಕೋರಿಯಲ್ಲಿ ಆಯೋಜಿಸಿದ್ದ 'ಕಾಕೋರಿ ರೈಲು ಕಾರ್ಯಾಚರಣೆ ಶತಮಾನೋತ್ಸವ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 'ಸಾಮಾಜಿಕ ಮಾಧ್ಯಮಗಳ ಮೂಲಕ ದೇಶದ ಕ್ರಾಂತಿಕಾರಿ ವ್ಯಕ್ತಿಗಳ ಕುರಿತು ಇಂದಿನ ಯುವ ಸಮೂಹವನ್ನು ದೂರ ಇರಿಸುವ ಯತ್ನ ನಡೆಯುತ್ತಿದೆ. ಅವರಿಗೆ ಮಾದರಿ ವ್ಯಕ್ತಿಗಳೇ ಇಲ್ಲದಂತೆ ಮಾಡಲಾಗುತ್ತಿದೆ' ಎಂದು ದೂರಿದರು.
'ಸ್ವಾತಂತ್ರ್ಯಾ ನಂತರ ಎಲ್ಲ ಸಂಸ್ಥೆಗಳಿಗೆ ಒಂದು ಕುಟುಂಬದ ಹೆಸರುಗಳನ್ನೇ ಇಡಲಾಯಿತು. ಆದರೆ, 2014ರಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಹಲವು ಸ್ವಾತಂತ್ರ್ಯ ಹೋರಾಟಗಾರರ ಹೆಸರುಗಳನ್ನು ಸಂಸ್ಥೆಗಳಿಗೆ ಇಡಲಾಯಿತು' ಎಂದರು.
'ರಾಮ್ ಪ್ರಸಾದ್ ಬಿಸ್ಮಿಲ್, ರೋಷನ್ ಸಿಂಗ್, ಅಶ್ಫಕುಲ್ಲಾ ಖಾನ್, ಚಂದ್ರಶೇಖರ್ ಆಜಾದ್, ವೀರ್ ಸಾವರ್ಕರ್, ಭಗತ್ ಸಿಂಗ್, ರಾಜ್‌ಗುರು ಮತ್ತು ಸುಖದೇವ್ ಅವರ ಹೆಸರುಗಳನ್ನು ಬೇಕು ಎಂದೇ ಜನರ ನೆನಪಿನಿಂದ ದೂರ ಇಡಲಾಯಿತು' ಎಂದರು.

