ನವದೆಹಲಿ: ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸತತ 13ನೇ ಬಾರಿ ಧ್ವಜಾರೋಹಣ ನೆರವೇರಿಸಿದ್ದಾರೆ. ಬಳಿಕ 75 ನಿಮಿಷ ಸ್ವಾತಂತ್ರ್ಯ ದಿನದ ಭಾಷಣವನ್ನು ಮಾಡಿದ್ದಾರೆ. ಇದು ಕಳೆದ ನಾಲ್ಕು ವರ್ಷಗಳಲ್ಲಿನ ಅತಿ ಕಡಿಮೆ ಅವಧಿಯ ಭಾಷಣವಾಗಿದೆ.
ಕಳೆದ ವರ್ಷ ಭಾರತದ 79ನೇ ಸ್ವಾತಂತ್ರ್ಯ ದಿನದಂದು, ಮೋದಿ ಅವರು 103 ನಿಮಿಷಗಳ ಭಾಷಣವನ್ನು ಮಾಡುವ ಮೂಲಕ, 2024ರಲ್ಲಿ ನಡೆದ 78ನೇ ಸ್ವಾತಂತ್ರ್ಯ ದಿನದಂದು ತಾವು ನೀಡಿದ್ದ 98 ನಿಮಿಷಗಳ ಭಾಷಣದ ದಾಖಲೆಯನ್ನು ಮುರಿದಿದ್ದರು.
2016ರಲ್ಲಿ 96 ನಿಮಿಷ ಮಾತನಾಡುವ ಮೂಲಕ ಅತಿ ದೀರ್ಘ ಭಾಷಣ ಮಾಡಿದ್ದರು. 2017ರಲ್ಲಿ ಅವರು 56 ನಿಮಿಷ ಮಾತನಾಡಿದ್ದರು.
ಕಳೆದ ಬಾರಿ ಸತತ 12ನೇ ಬಾರಿ ಸ್ವಾತಂತ್ರ್ಯ ದಿನದ ಧ್ವಜಾರೋಹಣ ಮಾಡಿ, ಭಾಷಣ ಮಾಡುವ ಮೂಲಕ ಇಂದಿರಾ ಗಾಂಧಿಯವರ ದಾಖಲೆಯನ್ನು ಮುರಿದಿದ್ದರು.
ಮೋದಿ ಅವರಿಗಿಂತ ಮೊದಲು, 1947ರಲ್ಲಿ ನೆಹರೂ ಅವರು 72 ನಿಮಿಷ ಮತ್ತು 1997ರಲ್ಲಿ ಐ.ಕೆ. ಗುಜ್ರಾಲ್ ಅವರು 71 ನಿಮಿಷ ಸುದೀರ್ಘ ಭಾಷಣ ಮಾಡಿದ್ದರು.
ನೆಹರೂ ಮತ್ತು ಇಂದಿರಾ ಗಾಂಧಿ ಅವರು ಕ್ರಮವಾಗಿ 1954 ಮತ್ತು 1966ರಲ್ಲಿ 14 ನಿಮಿಷ ಮಾತನಾಡುವ ಮೂಲಕ ಅತ್ಯಂತ ಕಡಿಮೆ ಅವಧಿಯಲ್ಲಿ ಭಾಷಣ ಮುಗಿಸಿದ್ದರು.
ಮಾಜಿ ಪ್ರಧಾನ ಮಂತ್ರಿಗಳಾದ ಮನಮೋಹನ್ ಸಿಂಗ್ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರು ಕೂಡ ಕೆಂಪು ಕೋಟೆಯಲ್ಲಿ ಅತ್ಯಂತ ಕಡಿಮೆ ಅವಧಿಯ ಭಾಷಣ ಮಾಡಿದ್ದರು.
ಮನಮೋಹನ್ ಸಿಂಗ್ ಅವರು 2012ರಲ್ಲಿ 32 ನಿಮಿಷ ಮತ್ತು 2013ರಲ್ಲಿ 35 ನಿಮಿಷ ಮಾತನಾಡಿದ್ದರು. ವಾಜಪೇಯಿ ಅವರ 2002ರಲ್ಲಿ 25 ನಿಮಿಷ ಮತ್ತು 2003ರಲ್ಲಿ 30 ನಿಮಿಷ ಮಾತನಾಡಿದ್ದರು.

