ನವದೆಹಲಿ: 80ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸತತ ಎರಡನೇ ವರ್ಷವೂ ಗೈರಾಗಿದ್ದಾರೆ.
ಕೆಂಪುಕೋಟೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಸ್ವಾತಂತ್ರ್ಯ ದಿನೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.
2024ರ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕರಾಗಿದ್ದು, ಕ್ಯಾಬಿನೆಟ್ ಸಚಿವರ ದರ್ಜೆ ಹೊಂದಿರುವ ರಾಹುಲ್ ಗಾಂಧಿ ಅವರಿಗೆ ಸಂಪ್ರದಾಯ ಮತ್ತು ಶಿಷ್ಟಾಚಾರವನ್ನು ಬದಿಗೊತ್ತಿ ಹಿಂದಿನ ಸಾಲಿನಲ್ಲಿ ಆಸನ ನಿಗದಿಪಡಿಸಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು.
ಕಾರ್ಯಕ್ರಮವನ್ನು ಆಯೋಜಿಸಿದ್ದ ರಕ್ಷಣಾ ಸಚಿವಾಲಯ, ಒಲಿಂಪಿಕ್ಸ್ ಕ್ರೀಡಾಪಟಗಳಿಗೆ ಆವರಣದಲ್ಲಿ ಸೂಕ್ತ ಆಸನ ವ್ಯವಸ್ಥೆ ಕಲ್ಪಿಸಲು ಈ ಬದಲಾವಣೆ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡಿತ್ತು. ಕಾಂಗ್ರೆಸ್ ಸಂಸದರಿಗೆ ಈ ರೀತಿ ಆಸನ ನೀಡಿರುವುದು ಜನತೆಗೆ ಎಸಗಿದ ಅಪಮಾನ ಎಂದು ವಿರೋಧ ಪಕ್ಷಗಳು ಖಂಡಿಸಿದ್ದವು.
ಅಧಿಕೃತ ಶಿಷ್ಟಾಚಾರದ ಪ್ರಕಾರ ಸರ್ಕಾರದ ಸಮಾರಂಭಗಳಲ್ಲಿ ವಿರೋಧ ಪಕ್ಷದ ನಾಯಕರಿಗೆ ಮೊದಲ ಸಾಲಿನಲ್ಲಿ ಆಸನ ಕಾಯ್ದಿರಿಸಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.

