ಲಖನೌ: 1947ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಿದ್ದರೆ ದೇಶಕ್ಕೆ ಯಾವುದೇ ಹಾನಿಯಾಗುತ್ತಿರಲಿಲ್ಲ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ.
1947ರ ವಿಭಜನೆಯ ಭೀಕರತೆ ಸ್ಮರಣಾರ್ಥ ಲಖನೌನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶ ವಿಭಜನೆ ಮತ್ತು ನಂತರ ನಡೆದ ಹತ್ಯಾಕಾಂಡಕ್ಕೆ ಕಾಂಗ್ರೆಸ್ ನಿಜವಾದ ಹೊಣೆಗಾರ ಎಂದು ಆರೋಪಿಸಿದ್ದಾರೆ.
'ಸ್ವಾತಂತ್ರ್ಯದ ಸಂದರ್ಭದಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಿದ್ದರೆ, ಯಾರಿಗೂ ಭಾರತಕ್ಕೆ ಕೊಂಚವೂ ಹಾನಿ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಅದೇ ರೀತಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಂತಹವರು ಪ್ರಧಾನಿಯಾಗಿದ್ದರೆ, ಯಾರಿಗೂ ಭಾರತವನ್ನು ವಿಭಜಿಸಲು ಸಾಧ್ಯವಾಗುತ್ತಿರಲಿಲ್ಲ' ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಾಯಕರ ಹೇಡಿತನಕ್ಕೆ ದೇಶ ಭಾರಿ ಬೆಲೆ ತೆರಬೇಕಾಯಿತು ಎಂದು ಆರೋಪಿಸಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಪ್ರತಿಭಟನೆಗಳ ಸಂದರ್ಭದಲ್ಲೂ ಇದೇ ಮನೋಭಾವ ಕಂಡು ಬಂದಿತ್ತು ಎಂದರು.
1947ರಲ್ಲಿ ಪಾಕಿಸ್ತಾನಕ್ಕೆ ಅದು ಕೇಳದೇ ಇದ್ದ ಪ್ರದೇಶಗಳನ್ನೂ ನೀಡಲಾಯಿತು ಎಂದು ಅವರು ಆರೋಪಿಸಿದರು. ಸಿಂಧ್, ಪಂಜಾಬ್ ಹಾಗೂ ಬಂಗಾಳದ ಪ್ರದೇಶಗಳನ್ನು ವಿಭಜನೆಯ ಸಂದರ್ಭದಲ್ಲಿ ಬಲವಂತವಾಗಿ ಪಾಕಿಸ್ತಾನಕ್ಕೆ ನೀಡಲಾಯಿತು ಎಂದು ಹೇಳಿದರು.
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದಾಳಿ ನಡೆದಾಗ ಕಾಂಗ್ರೆಸ್ ಮೌನವಾಗಿತ್ತು ಎಂದ ಅವರು, ಮತಬ್ಯಾಂಕ್ ಕಳೆದುಕೊಳ್ಳುವ ಭಯದಿಂದ ಸುಮ್ಮನಿತ್ತು ಎಂದರು.
ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ಕೊಡುಗೆಯನ್ನೂ ಪ್ರಶ್ನಿಸಿದ ಯೋಗಿ, ವಿಭಜನೆಯನ್ನು 'ಮಾನವೀಯತೆಯ ಕರಾಳ ಅಧ್ಯಾಯ' ಎಂದು ಬಣ್ಣಿಸಿದರು.

