HEALTH TIPS

ಪೈವಳಿಕೆಯಲ್ಲಿ 19 ಎಕರೆ ಭತ್ತದ ಗದ್ದೆ ಜಲಾವೃತ: ಲಕ್ಷಾಂತರ ರೂ.ಬೆಳೆ ಹಾನಿ

ಉಪ್ಪಳ: ಪೈವಳಿಕೆ ಪಂಚಾಯತಿಯಲ್ಲಿ ಭಾರಿ ಮಳೆಯಿಂದಾಗಿ ವ್ಯಾಪಕ ಬೆಳೆ ಹಾನಿ ಸಂಭವಿಸಿದೆ. ಪೈವಳಿಕೆ ಆಚಕರೆಯಲ್ಲಿ 19 ಎಕರೆ ಭತ್ತದ ಗದ್ದೆ ಜಲಾವೃತವಾಗಿದೆ. ಹಲವಾರು ಎಕರೆಗಳಲ್ಲಿ ಕೃಷಿ ಮಾಡಿದ ಭತ್ತ ಸಂಪೂರ್ಣವಾಗಿ ಮುಳುಗಿದ್ದರಿಂದ ರೈತರು ಸಂಕಷ್ಟದಲ್ಲಿ ಸಿಲುಕಿರುವರು. ವಿನೋದ್ ಅವರ 15 ಎಕರೆ ಭತ್ತದ ಗದ್ದೆ ಮತ್ತು ಮೊಹಮ್ಮದ್ ಹಾಜಿ ಮತ್ತು ಕಮಲ್ ಹಾಜಿ ಅವರ ಎರಡೂವರೆ ಎಕರೆ ಭತ್ತದ ಗದ್ದೆಗಳು ಜಲಾವೃತಗೊಂಡವು. 


15 ಎಕರೆಯಲ್ಲಿನ ಬೆಳೆ ನಷ್ಟದಿಂದ ಬರೋಬ್ಬರಿ 4 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ತಾವು ಬಹಳಷ್ಟು ಆಸ್ತೆಯಿಂದ ಕಾಪಾಡಿಕೊಂಡುಬಂದು ಸಂಕಷ್ಟದ ಮಧ್ಯೆಯೂ ಈಗಲೂ ಭತ್ತದ ಕೃಷಿ ಕೇಗೆತ್ತಿಕೊಂಡಿರುವ ವಿನೋದ್ ದುಃಖದಿಂದ ಹೇಳಿದರು.

ಜೊತೆಗೆ ಮೊಹಮ್ಮದ್ ಹಾಜಿ ಮತ್ತು ಕಮಲ್ ಹಾಜಿ ಅವರೂ ಭಾರೀ ಆರ್ಥಿಕ ನಷ್ಟವನ್ನು ಅನುಭವಿಸಿದ್ದಾರೆ.

ಸತತ ಮಳೆಯಿಂದಾಗಿ, ಹೊಲಗಳಲ್ಲಿ ನೀರು ಸಂಗ್ರಹವಾಗಿ, ಕಾಲುವೆಗಳು ಸಂಪೂರ್ಣವಾಗಿ ಮುಳುಗಿ ಗದ್ದೆಯನ್ನು ಆಪೋಶನಗೈದಿದೆ. ನೀರು ಹರಿದು ಹೋಗಲು ಸಾಧ್ಯವಾಗದೆ ಬೆಳೆಗಳು ಕೊಳೆಯುತ್ತಿವೆ ಎಂದು ರೈತರು ಹೇಳುತ್ತಾರೆ.

ಬ್ಲಾಕ್ ನಿಧಿಯನ್ನು ಬಳಸಿಕೊಂಡು ನಿರ್ಮಿಸಲಾದ ಚೆಕ್ ಡ್ಯಾಮ್ ನಲ್ಲಿ ನೀರಿನ ಹರಿವನ್ನು ನಿಯಂತ್ರಿಸಿರುವುದೇ ಭತ್ತದ ಗದ್ದೆಗಳಿಗೆ ನೀರು ನುಗ್ಗಲು ಕಾರಣವಾಯಿತು ಎಂದು ವಿನೋದ್ ಬೊಟ್ಟುಮಾಡಿದರು.

ಈ ಬಾರಿ ಮುಂಗಾರು ಪೂರ್ವ ಸ್ವಚ್ಛತಾ ಕಾರ್ಯದ ಭಾಗವಾಗಿ ಗ್ರಾಮ ಪಂಚಾಯತಿಯು ಹೊಳೆಯಿಂದ ಮಣ್ಣು ಮತ್ತು ಕಸವನ್ನು ತೆಗೆಸಿರಲಿಲ್ಲ ಎಂದು ಅವರು ಆರೋಪಿಸಿದ್ದಾರೆ. ಇದು ನೀರು ಭಾರೀ ಪ್ರಮಾಣದಲ್ಲಿ ಗದ್ದೆಗಳಿಗೆ ನುಗಲು ಕಾರಣವಾಯಿತು. 

ಕೃಷಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಪರಿಹಾರ ನೀಡಬೇಕು ಮತ್ತು ನೀರಿನ ನುಗ್ಗುವಿಕೆಗೆ ಕಾರಣವಾದ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿರುವರು.

ಅಸಮರ್ಪಕ ವಿಧಾನಗಳು-ಜನಸಾಮಾನ್ಯರ ಬದುಕಿಗೆ ಕೊಳ್ಳಿ:

ಕೆಲವು ಸರ್ಕಾರಿ ಇಲಾಖೆಗಳು, ಅದರಲ್ಲೂ ಕೃಷಿ, ನೀರಾವರಿ ಇಲಾಖೆಗಳ ಕೆಲವು ಅಸಮರ್ಪಕ ಯೋಜನೆಗಳಿಂದ ಕೊಟ್ಟಕೊನೆಗೆ ಸಂಕಷ್ಟ ಅನುಭವಿಸುವವರು ಜನಸಾಮಾನ್ಯರು, ರೈತರು ಎಂಬುದಕ್ಕೆ ಪೈವಳಿಕೆಯ ಆಚಕರೆ ಭತ್ತದ ಗದ್ದೆಯ ದುರವಸ್ಥೆ ಸಾಕ್ಷಿಯಾಗಿದೆ. ಅವೈಜ್ಞಾನಿಕವಾಗಿ ಚೆಕ್ ಡ್ಯಾಮ್ ಗಳನ್ನು ನಿರ್ಮಿಸುವುದು, ಅದಕ್ಕೆ ಒಡ್ಡುಗಳನ್ನು ರಚಿಸುವುದು, ತೋಡು, ಹೊಳೆಗಳ ಮರಳು ತೆಗೆಯುವುದನ್ನು ನಿಯಂತ್ರಿಸುವುದೇ ಮೊದಲಾದ ಕಾರಣಗಳಿಂದ ಮಳೆಗಾಲದಲ್ಲಿ ಕೃಷಿ ಭೂಮಿಗೆ ನೀರು ನುಗ್ಗಿ ಉಂಟಾಗುವ ಅವಾಂತರಗಳು ಇಂದು ನಿನ್ನೆಯ ಸಮಸ್ಯೆಗಳಲ್ಲ. ದಶಕಗಳಿಂದಲೂ ಕೃಷಿಕರು ಇದೇ ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ ಕೃಷಿಕರ ನೈಜ ಸವಾಲುಗಳನ್ನು ಕಂಡು ಪರಿಹರಿಸುವ ಅಧಿಕಾರಿಗಳು, ಮುಖಂಡರುಗಳು ಇಲ್ಲದಿರುವುದು ದುರದೃಷ್ಟಕರವೆಂಬುದು ಕೃಷಿಕರ ಅಂಬೋಣ.


ಅಭಿಮತ:

-ಆಚಕರೆಯಲ್ಲಿ ಉಂಟಾಗಿರುವ ಕೃಷಿ ನಾಶದ ಬಗ್ಗೆ ಈಗಾಗಲೇ ವರದಿಮಾಡಲಾಗಿದೆ. ಅಲ್ಲದೆ ಅಲ್ಲಿಯ ಭತ್ತದ ಕೃಷಿಕರಿಗೆ ಬೆಳೆ ವಿಮೆ ಇದೆ. ಈ ಹಿನ್ನೆಲೆಯಲ್ಲಿ ಅವರಿಗೆ ವಿಮಾ ನೆರವು ಲಭಿಸಲಿದೆ. ಆದ ಅನಾಹುತ ಎಫ್.ಐ.ಆರ್.ದಾಖಲಿಸಲಾಗಿದೆ. ಗ್ರಾ.ಪಂ.ವ್ಯಾಪ್ತಿಯ ಇತರ ಪ್ರದೇಶಗಳ ಕೃಷಿ ನಾಶದ ವರದಿ ಬೇರೆ ಲಭ್ಯವಾಗಿಲ್ಲ. ಪರೀಕ್ಷಿಸಲಾಗುವುದು.

-ಲಕ್ಷ್ಮೀ ಮುರಳೀಕೃಷ್ಣ

ಕೃಷಿ ಅಧಿಕಾರಿ. ಪೈವಳಿಕೆ ಕೃಷಿ ಭವನ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries