ಮಂಜೇಶ್ವರ: ಕುಂಡುಕೊಳಕೆ-ಕಣ್ವತೀರ್ಥ ಬೀಚ್ ರಸ್ತೆಯ ಶೋಚನೀಯ ಸ್ಥಿತಿಯ ವಿರುದ್ಧ ಸ್ಥಳೀಯ ನಿವಾಸಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ರಸ್ತೆ ಶಿಥಿಲಗೊಂಡು ವರ್ಷಗಳಿಂದ ಡಾಂಬರು ಕಿತ್ತುಹೋಗಿದ್ದು ಅಧಿಕೃತರು ಅಗತ್ಯ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಮೀನುಗಾರರು ಸೇರಿದಂತೆ ನೂರಾರು ಕುಟುಂಬಗಳು ಬಳಸುತ್ತಿರುವ ಈ ರಸ್ತೆಯನ್ನು 26 ವರ್ಷಗಳ ಹಿಂದೆ ಕೊನೆಯದಾಗಿ ಡಾಂಬರು ಹಾಕಲಾಗಿತ್ತು. ಅಂದಿನಿಂದ ಯಾವುದೇ ಪ್ರಮುಖ ದುರಸ್ತಿ ಕಾರ್ಯ ನಡೆದಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ. ಪ್ರಸ್ತುತ, ಸುಮಾರು ಒಂದು ಕಿಲೋಮೀಟರ್‍ನಷ್ಟು ಭಾಗವು ಗುಂಡಿಗಳಿಂದ ತುಂಬಿದ್ದು, ಸಂಚಾರಕ್ಕೆ ಯೋಗ್ಯವಾಗಿಲ್ಲ.
ಭಾರೀ ಮಳೆಯ ಬಳಿಕ, ರಸ್ತೆಯ ಗುಂಡಿಗಳಲ್ಲಿ ನೀರು ಸಂಗ್ರಹವಾಗುವುದರಿಂದ ವಾಹನ ಮತ್ತು ಪಾದಚಾರಿಗಳ ಸಂಚಾರಕ್ಕೆ ಸಂಚಕಾರ ಬಂದೊದಗಿದೆ. ವಾಹನಗಳು ಬಹಳ ಕಷ್ಟದಿಂದ ಸಾಗುತ್ತಿವೆ. ರಸ್ತೆಯ ಶೋಚನೀಯ ಸ್ಥಿತಿಯಿಂದಾಗಿ ಆಟೋರಿಕ್ಷಾಗಳು ಕೂಡಾ ಸಂಚರಿಸಲು ಹಿಂಜರಿಯುತ್ತಿವೆ. ರೋಗಿಗಳು ಮತ್ತು ತುರ್ತು ಚಿಕಿತ್ಸೆಯ ಅಗತ್ಯವಿರುವವರನ್ನು ಆಸ್ಪತ್ರೆಗೆ ಕರೆದೊಯ್ಯುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ.
ರಸ್ತೆ ನವೀಕರಣಕ್ಕೆ ಒತ್ತಾಯಿಸಿ ಸಂಬಂಧಪಟ್ಟ ಅಧಿಕಾರಿಗಳನ್ನು ಹಲವಾರು ಬಾರಿ ಸಂಪರ್ಕಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಮಳೆಗಾಲ ಮುಗಿದ ತಕ್ಷಣ ರಸ್ತೆಯ ಪುನರ್ನಿರ್ಮಾಣ ಆರಂಭಿಸಬೇಕೆಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.

.jpg)
.jpg)
