ಅಹಮದಾಬಾದ್: ಎರಡು ವರ್ಷಗಳ ಬಳಿಕ 'ಚಂಡೀಪುರ ವೆಸಿಕ್ಯೊಲೊವೈರಸ್ (ಸಿಎಚ್‌ಪಿವಿ)' ಮತ್ತೆ ತನ್ನ ಆರ್ಭಟ ಶುರು ಮಾಡಿದ್ದು, ಗುಜರಾತ್‌ನ ಜನರಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ. ರಾಜ್ಯದಲ್ಲಿ ಕಳೆದ ಎರಡು ತಿಂಗಳಿನಲ್ಲಿ 25 ಮಕ್ಕಳು ಈ ಮಾರಕ ಸೋಂಕಿಗೆ ತುತ್ತಾಗಿದ್ದಾರೆ.
ಏನಿದು ಚಂಡೀಪುರ ಸೋಂಕು?
ಗಾಂಧಿನಗರದ 'ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್' ಸಂಸ್ಥೆಯ ಸಹಾಯಕ ಪ್ರಾಧ್ಯಾಪಕಿ ಡಾ. ವೀಣಾ ಅಯ್ಯರ್ ಅವರ ಪ್ರಕಾರ, 1965ರಲ್ಲಿ ಮಹಾರಾಷ್ಟ್ರದ ನಾಗಪುರ ಜಿಲ್ಲೆಯ 'ಚಂಡೀಪುರ' ಎಂಬ ಹಳ್ಳಿಯಲ್ಲಿ ಮೊದಲ ಬಾರಿಗೆ ಈ ಸೋಂಕು ಪತ್ತೆಯಾಯಿತು.
ಆನಂತರ 1967 ಮತ್ತು 1969ರ ನಡುವೆ ಔರಂಗಾಬಾದ್ ಜಿಲ್ಲೆಯಲ್ಲಿ 'ಫ್ಲೆಬೊಟೊಮೈನ್' ಜಾತಿಯ ಮರಳು ನೊಣಗಳಲ್ಲಿ ಈ ಸೋಂಕು ಇರುವುದು ಕಂಡುಬಂತು.
1980ರಲ್ಲಿ ಛತ್ತೀಸಗಢದ ರಾಯ್‌ಪುರದಲ್ಲಿ ವರದಿಯಾದ ಮಿದುಳು ಉರಿಯೂತ (ಎನ್ಸೆಫಲೈಟಿಸ್) ಪ್ರಕರಣಗಳಿಗೆ 'ಸಿಎಚ್‌ಪಿವಿ' (ಚಂಡೀಪುರ ಸೋಂಕು) ಕಾರಣ ಎಂಬುದು ದೃಢಪಟ್ಟಿತ್ತು. ಬಳಿಕ 2003ರಲ್ಲಿ ಈ ಸೊಂಕು ಪ್ರಮುಖ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿ ಪರಿಣಮಿಸಿತು.
ಆ ಸಮಯದಲ್ಲಿ ಆಂಧ್ರಪ್ರದೇಶದ 10 ಜಿಲ್ಲೆಗಳಲ್ಲಿ ಭಾರಿ ಪ್ರಮಾಣದ 'ಎಪಿಡೆಮಿಕ್ ಬ್ರೈನ್ ಅಟ್ಯಾಕ್' ಪ್ರಕರಣಗಳು ಪತ್ತೆಯಾಗಿದ್ದವು. ಶಂಕಿತ 55 ಪ್ರಕರಣಗಳಲ್ಲಿ 28 ಪ್ರಕರಣಗಳು ದೃಢಪಟ್ಟಿದ್ದವು.
ಇದಾದ ನಂತರ, 2004ರ ಜುಲೈನಲ್ಲಿ ಗುಜರಾತ್‌ನ ಪಂಚಮಹಲ್ ಮತ್ತು ಬರೋಡಾ ಜಿಲ್ಲೆಗಳಲ್ಲಿ ಈ ಕಾಯಿಲೆ ಕಾಣಿಸಿಕೊಂಡಿತು. ಅಲ್ಲಿ ಶಂಕಿತ 20 ಪ್ರಕರಣಗಳು ಪತ್ತೆಯಾಗಿದ್ದವು. ಅದರಲ್ಲಿ 11 ಪ್ರಕರಣಗಳಲ್ಲಿ 'ಸಿಎಚ್‌ಪಿವಿ' ಇರುವುದು ದೃಢಪಟ್ಟಿತ್ತು. 2004, 2005, 2007 ಮತ್ತು 2008 ರಲ್ಲಿ ಆಂಧ್ರಪ್ರದೇಶದಲ್ಲೂ ಈ ಕಾಯಿಲೆ ಮತ್ತೆ ಕಾಣಿಸಿಕೊಂಡಿತು. ಇದರ ಜೊತೆಗೆ 2005ರಲ್ಲಿ ಗುಜರಾತ್‌ನ ವಡೋದರಾ ಹಾಗೂ ಮಹಾರಾಷ್ಟ್ರದ ಭಂಡಾರ ಮತ್ತು ನಾಗಪುರ ಜಿಲ್ಲೆಗಳಲ್ಲೂ ಈ ಸೋಂಕು ಹರಡಿತ್ತು.
ಮಾರಕವಾಗಿ ಪರಿಣಮಿಸಿದ ಈ ಸೋಂಕಿಗೆ ಆಂಧ್ರಪ್ರದೇಶದಲ್ಲಿ 183, ಮಹಾರಾಷ್ಟ್ರದಲ್ಲಿ 114 ಮತ್ತು ಗುಜರಾತ್‌ನಲ್ಲಿ 24 ಮಕ್ಕಳು ಸೇರಿದಂತೆ ಒಟ್ಟು ಸಾವಿನ ಸಂಖ್ಯೆ 322ಕ್ಕೆ ಏರಿತ್ತು. ಇದರ ನಂತರದ ಎರಡು ದಶಕಗಳಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ತಗ್ಗಿತ್ತು.
ಸೋಂಕಿಗೆ ಕಾರಣವೇನು?
'ಮರಳುನೊಣಗಳ (ಸ್ಯಾಂಡ್‌ಫ್ಲೈ) ಕಡಿತವು ಚಂಡೀಪುರ ಸೋಂಕಿಗೆ ಮುಖ್ಯ ಕಾರಣ. ಇದು 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆಯೇ ಹೆಚ್ಚು ಪರಿಣಾಮ ಬೀರುತ್ತಿದೆ. ಸೋಂಕು ತಗಲಿದ ತಕ್ಷಣ ಮಕ್ಕಳಲ್ಲಿ 'ಎನ್ಸೆಫಲೈಟಿಸ್' (ಮಿದುಳಿನ ಉರಿಯೂತ) ಉಂಟಾಗಿ ಸ್ಥಿತಿ ಗಂಭೀರವಾಗುತ್ತದೆ ಎನ್ನುತ್ತಾರೆ ಡಾ. ವೀಣಾ ಅಯ್ಯರ್.
ಸೋಂಕಿನ ಲಕ್ಷಣಗಳು
ವಿಪರೀತ ಜ್ವರ
ವಾಂತಿ
ಮೂರ್ಛೆ ತಪ್ಪುವುದು
ಅತಿಯಾದ ತೂಕಡಿಕೆ/ಮಂಪರು
ಮಗುವಿನ ವರ್ತನೆಯಲ್ಲಿ ದಿಢೀರ್ ಬದಲಾವಣೆ
ಲಸಿಕೆ ಅಥವಾ ನಿರ್ದಿಷ್ಟ ಚಿಕಿತ್ಸೆ ಲಭ್ಯವಿಲ್ಲ
ಈ ಸೋಂಕಿಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಮತ್ತು ಔಷಧಗಳು ಇಲ್ಲ. ಸೋಂಕಿನ ಲಕ್ಷಣಗಳ ಆಧಾರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸರ್ಕಾರ ಪುನರುಚ್ಚರಿಸಿದೆ. ಸಮಯಕ್ಕೆ ಸರಿಯಾಗಿ ರೋಗನಿರ್ಣಯ ಮತ್ತು ಆಸ್ಪತ್ರೆಗೆ ದಾಖಲಿಸುವುದೇ ಸದ್ಯಕ್ಕಿರುವ ಏಕೈಕ ಮಾರ್ಗವಾಗಿದೆ.
ಗುಜರಾತ್, ರಾಜಸ್ಥಾನದಲ್ಲಿ ಸೋಂಕು ಕಾಣಿಸಿಕೊಳ್ಳಲು ಕಾರಣವೇನು?
ಗುಜರಾತ್ ಮತ್ತು ರಾಜಸ್ಥಾನದಲ್ಲಿ ಪದೇ ಪದೇ ಈ ಸೋಂಕು ಕಾಣಿಸಿಕೊಳ್ಳುತ್ತಿದೆ ಎಂಬುದಕ್ಕೆ ತಜ್ಞರಲ್ಲಿ ಇನ್ನೂ ಸ್ಪಷ್ಟ ಕಾರಣವಿಲ್ಲ. ಆದರೆ ಡಾ. ವೀಣಾ ಅವರ ಪ್ರಕಾರ, ಪಶ್ಚಿಮ ಮತ್ತು ಮಧ್ಯ ಭಾರತದಲ್ಲಿ ಸಿಎಚ್‌ಪಿವಿ ಹೆಚ್ಚಾಗಿ ಕಂಡುಬರಲು ಕೆಲವು ಪರಿಸರ ಮತ್ತು ಸಾಮಾಜಿಕ ಕಾರಣಗಳಿವೆ. ಅವುಗಳಲ್ಲಿ ಮುಖ್ಯವಾಗಿ ಗ್ರಾಮೀಣ ಪ್ರದೇಶದ ವಸತಿ ವ್ಯವಸ್ಥೆ.
ಮಣ್ಣಿನ ಮನೆಗಳು: ಮಣ್ಣಿನ ಮನೆಗಳ ಗೋಡೆಗಳಲ್ಲಿ ಬಿರುಕು ಬಿಟ್ಟಿರುವುದು ಮರಳು ನೊಣಗಳು ವಾಸಿಸಲು ಅನುಕೂಲಕರವಾಗಿವೆ.
ನೈರ್ಮಲ್ಯದ ಕೊರತೆ: ಮನೆಗಳ ಪಕ್ಕದಲ್ಲೇ ದನದ ಕೊಟ್ಟಿಗೆಗಳಿರುವುದು ಮತ್ತು ಸರಿಯಾದ ತ್ಯಾಜ್ಯ ನಿರ್ವಹಣೆ ಇಲ್ಲದಿರುವುದು ಈ ನೊಣಗಳ ಸಂತಾನೋತ್ಪತ್ತಿಗೆ ಸೂಕ್ತ ವಾತಾವರಣವನ್ನು ನಿರ್ಮಿಸುತ್ತವೆ ಎಂದು ಅವರು ತಿಳಿಸಿದ್ದಾರೆ.

