HEALTH TIPS

ಕೇಂದ್ರದ ನೀತಿಗಳ ವಿರುದ್ಧ ನಿರ್ಣಯ: ರಾಜಕೀಯ ಅಸ್ತ್ರ ಮಾಡಿಕೊಂಡ ತ.ನಾಡು ಪಕ್ಷಗಳು

ಚೆನ್ನೈ: ಕೇಂದ್ರ ಸರ್ಕಾರದ ನೀತಿಗಳನ್ನು ವಿರೋಧಿಸಿ ವಿಧಾನಸಭೆಯಲ್ಲಿ ನಿರ್ಣಯಗಳನ್ನು ಅಂಗೀಕರಿಸುವುದು ಹಾಗೂ ರಾಜ್ಯದ ಹಿತಾಸಕ್ತಿಗೆ ವಿರುದ್ಧವಾದ ವಿಚಾರಗಳಲ್ಲಿ ಕೇಂದ್ರ ಸರ್ಕಾರವು ಮಧ್ಯಪ್ರವೇಶಿಸುವಂತೆ ಕೋರುವುದನ್ನು ತಮಿಳುನಾಡಿನ ಆಡಳಿತ ಪಕ್ಷಗಳು ಪ್ರಬಲ ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಂಡಿವೆ. 

ಇದಕ್ಕೆ ಯಾವುದೇ ರೀತಿಯ ಕಾನೂನು ಮಾನ್ಯತೆ ಇಲ್ಲದಿದ್ದರೂ, ಒತ್ತಡ ತಂತ್ರವಾಗಿಯಷ್ಟೇ ಕಾರ್ಯನಿರ್ವಹಿಸಿದರೂ, ಈವರೆಗೆ ತಮಿಳುನಾಡಿನಲ್ಲಿ ಅಧಿಕಾರ ನಡೆಸಿದ ಡಿಎಂಕೆ, ಎಐಎಡಿಎಂಕೆ ಪಕ್ಷಗಳು ರಾಜ್ಯ ಹಾಗೂ ಇಡೀ ದೇಶಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಪದೇ ಪದೇ ನಿರ್ಣಯಗಳನ್ನು ಅಂಗೀಕರಿಸಿವೆ. ಇದಕ್ಕೆ, ಸಿಎಂ ಸಿ. ಜೋಸೆಫ್‌ ವಿಜಯ್‌ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಹೊರತಾಗಿಲ್ಲ.

ಮೇಕೆದಾಟು, ವಿದೇಶಿ ದೇಣಿಗೆ ನಿಯಂತ್ರಣ (ತಿದ್ದುಪಡಿ) ಮಸೂದೆ (ಎಫ್‌ಸಿಆರ್‌ಎ), ಕ್ಷೇತ್ರಗಳ ಪುನರ್‌ವಿಂಗಡಣೆ ಮತ್ತು ನೀಟ್‌ನಂತಹ ವಿಚಾರಗಳಲ್ಲಿ ಕೇಂದ್ರ ಸರ್ಕಾರವನ್ನು ಎಚ್ಚರಿಸುವ ಐದು ನಿರ್ಣಯಗಳನ್ನು ಅಧಿಕಾರಕ್ಕೆ ಬಂದ ನೂರು ದಿನಗಳಲ್ಲೇ ಟಿವಿಕೆ ಅಂಗೀಕರಿಸಿದೆ.

ನಿಲುವು ಬದಲಾಗಬಹುದು..
ಆಡಳಿತ ಪಕ್ಷಗಳು ಪ್ರಮುಖವಾದ ವಿಚಾರಗಳ ಬಗ್ಗೆಯಷ್ಟೇ ಅಲ್ಲದೆ, ಅತ್ಯಂತ ವಿವಾದಾಸ್ಪದ ವಿಷಯಗಳ ಕುರಿತಾಗಿಯೂ ತಮ್ಮ ನಿಲುವು ಸ್ಪಷ್ಟಪಡಿಸಲು ವಿಧಾನಸಭೆಯನ್ನು ಬಳಸಿಕೊಂಡಿವೆ. ಕೆಲವೊಮ್ಮೆ ಅಂತಹ ನಿಲುವುಗಳು ಬದಲಾದ ಉದಾಹರಣೆಯೂ ಇದೆ.

2002ರಲ್ಲಿ ಆಗಿನ ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ರಾಜೀವ್‌ ಗಾಂಧಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗ ಸಕ್ರಿಯವಾಗಿದ್ದ ಎಲ್‌ಟಿಟಿಇ ಸಂಘಟನೆಯ ಮುಖ್ಯಸ್ಥ ವಿ. ಪ್ರಭಾಕರನ್ ಅವರನ್ನು ಗಡೀಪಾರು ಮಾಡುವ ಸಂಬಂಧ ನಿರ್ಣಯ ಮಂಡಿಸಿದ್ದರು. ಆದರೆ, ಒಂದು ದಶಕದ ನಂತರ, ಜಯಲಲಿತಾ ಅವರ ರಾಜಕೀಯ ನಿಲುವು ಬದಲಾಗಿತ್ತು. ಅದೇ ಹತ್ಯೆ ಪ್ರಕರಣದಲ್ಲಿ ಎಲ್‌ಟಿಟಿಇ ಸಂಚು ಸಾಬೀತಾದ ಏಳು ಅಪರಾಧಿಗಳ ಬಿಡುಗಡೆಗೆ ಬೆಂಬಲ ಕೋರಿ, 2011ರಲ್ಲಿ ನಿರ್ಣಯ ಮಂಡಿಸಿದ್ದರು.

ವಿಧಾನಸಭೆಯಲ್ಲಿ ಕೈಗೊಳ್ಳುವ ನಿರ್ಣಯಗಳಿಗೆ ಕೇಂದ್ರವು ಬದ್ಧವಾಗಿರುವುದಿಲ್ಲ. ಆದರೆ, ಅವು ರಾಜಕೀಯ ಹೇಳಿಕೆಗಳಾಗಿ ಮಾತ್ರವೇ ಕಾರ್ಯನಿರ್ವಹಿಸುತ್ತವೆ. ಅದರ ಹೊರತಾಗಿ ಯಾವುದೇ ಮಹತ್ವವಿಲ್ಲ ಎಂದು ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಪಿ.ಡಿ.ಟಿ. ಆಚಾರಿ ಒತ್ತಿ ಹೇಳಿದ್ದಾರೆ.

ಇಂತಹ ನಿರ್ಣಯಗಳಿಗೆ ಸರ್ವಾನುಮತದ ಅಂಗೀಕಾರ ಸಿಕ್ಕಿದ್ದರೂ, ಕಾನೂನಾತ್ಮಕವಾಗಿ ಯಾವುದೇ ಮಾನ್ಯತೆ ಇರುವುದಿಲ್ಲ ಎಂಬುದಾಗಿ ನಿವೃತ್ತ ನ್ಯಾಯಮೂರ್ತಿ ಕೆ. ಚಂದ್ರು ಸ್ಪಷ್ಟಪಡಿಸಿದ್ದಾರೆ. 'ವಿಧಾನಸಭೆಯಲ್ಲಿ ಕೈಗೊಳ್ಳುವ ನಿರ್ಣಯವು ಆ ರಾಜ್ಯದ ಅಭಿಪ್ರಾಯ. ಫೆಡರಲ್ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರವು ನೀತಿ ಅಥವಾ ಕಾನೂನುಗಳನ್ನು ರೂಪಿಸುವ ಪ್ರಕ್ರಿಯೆಯಲ್ಲಿ ನಿರ್ಣಯಗಳನ್ನೂ ಪರಿಗಣಿಸಬೇಕಾಗುತ್ತದೆ. ದೇಶದ ಹಲವು ರಾಜ್ಯಗಳ ಪೈಕಿ ಯಾವುದೋ ಒಂದರ ವಿಧಾನಸಭೆಯಲ್ಲಿ ಮಾತ್ರವೇ ನಿರ್ಣಯ ಅಂಗೀಕರಿಸುವುದರಿಂದ, ಕೇಂದ್ರವು ತನ್ನ ನಿಲುಲು ಬದಲಿಸುವ ಸಾಧ್ಯತೆ ಕಡಿಮೆ' ಎಂದು ವಿವರಿಸಿದ್ದಾರೆ.

ಆದಾಗ್ಯೂ, ರಾಜ್ಯ ಸರ್ಕಾರಗಳು ಕೈಗೊಳ್ಳುವ ಇಂತಹ ಕ್ರಮಗಳು, ಒಕ್ಕೂಟ ಆಡಳಿತ ವ್ಯವಸ್ಥೆಗೆ ಒಳಪಟ್ಟ ಎಲ್ಲ ಸರ್ಕಾರಗಳೂ ಪ್ರತಿಯೊಂದು ಪ್ರಕ್ರಿಯೆಯಲ್ಲೂ ಸಕ್ರಿಯವಾಗಿವೆ ಎಂಬುದನ್ನು ಸೂಚಿಸುತ್ತವೆ ಎಂದು ಪ್ರತಿಪಾದಿಸಿದ್ದಾರೆ.

ಕೇಂದ್ರ ಸರ್ಕಾರವು ಯಾವುದೇ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯಗಳು ಕೈಗೊಳ್ಳುವ ನಿರ್ಣಯಗಳನ್ನು ಗೌರವಿಸಲು ಆಸಕ್ತಿ ತೋರಿದರೆ, ವ್ಯಾಪಕ ಚರ್ಚೆಗೆ ಒತ್ತು ನೀಡಬೇಕು ಮತ್ತು ಒಮ್ಮತ ಮೂಡಿಸುವ ಪ್ರಯತ್ನ ಮಾಡಬೇಕು ಎಂಬುದಾಗಿ ನಿ. ನ್ಯಾ. ಕೆ. ಚಂದ್ರು ಅಭಿಪ್ರಾಯಪಟ್ಟಿದ್ದಾರೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries