ನವದೆಹಲಿ (PTI): ನಕಲಿ ವಕೀಲರು, ನಕಲಿ ಕಾನೂನು ಪದವಿ ಮತ್ತು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಜೊತೆ ಗುರುತಿಸಿಕೊಂಡಿರುವ ವ್ಯಕ್ತಿಗಳ ಚಟುವಟಿಕೆ ಬಗ್ಗೆ ತನಿಖೆಗೆ ಕೋರಿದ್ದ ಅರ್ಜಿಯ ಕುರಿತು ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರ, ಸುಪ್ರೀಂ ಕೋರ್ಟ್ ವಕೀಲರ ಸಂಘ ಮತ್ತು ಸಿಬಿಐಗೆ ಸುಪ್ರೀಂ ಕೋರ್ಟ್ ಮಂಗಳವಾರ ಸೂಚಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ವಿಚಾರಣೆ ಸಂದರ್ಭದಲ್ಲಿ ಹೇಳಿದ್ದ ಹೇಳಿಕೆಯಿಂದಾಗಿ 'ಸಿಜೆಪಿ' ರಚನೆಯಾಯಿತು. ಬಳಿಕ ಸಿಜೆಪಿ ನೇತೃತ್ವದಲ್ಲಿ 'ನೀಟ್' ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಜೆನ್-ಝೀ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು.
ಸಿಜೆಐ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯಾ ಬಾಗ್ಚಿ ಮತ್ತು ವಿ.ಮೋಹನಾ ಅವರನ್ನು ಒಳಗೊಂಡ ನ್ಯಾಯಪೀಠವು ಮಂಗಳವಾರ ಈ ಕುರಿತ ಅರ್ಜಿಯ ವಿಚಾರಣೆ ನಡೆಸಿತು.
ಸುಪ್ರೀಂ ಕೋರ್ಟ್‌ನ ಮೇ 15ರ ವಿಚಾರಣೆಯ ತುಣುಕುಗಳನ್ನು ಎಡಿಟ್ ಮಾಡಿ ಮೀಮ್ಸ್, ವಿಡಿಯೊ, ರಾಜಕೀಯ ಬ್ರ್ಯಾಂಡಿಂಗ್ ಮತ್ತಿತರ ವಾಣಿಜ್ಯ ವಸ್ತುವಿಷಯಗಳಾಗಿ ಪರಿವರ್ತಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ; ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

